
ಧಾರವಾಡ
ಶರಣರ ವಚನಗಳು ಕೇವಲ ಅಧ್ಯಾತ್ಮಿಕ ವಿಚಾರಗಳಲ್ಲ, ಅವು ಬದುಕಿಗೆ ದಾರಿ ತೋರಿಸುವ ಜ್ಞಾನಜ್ಯೋತಿಗಳಾಗಿವೆ. ವಚನಗಳಲ್ಲಿರುವ ಸತ್ಯ, ಸಮಾನತೆ, ಕಾಯಕ, ದಾಸೋಹ ಹಾಗೂ ಮಾನವೀಯ ಮೌಲ್ಯಗಳನ್ನು ಅರಿತು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಶರಣರಾದ ಶಿವಾನಂದ ಶರಣನವರ ಅಭಿಪ್ರಾಯಪಟ್ಟರು.
ಬಸವಕೇಂದ್ರ, ಧಾರವಾಡ ವತಿಯಿಂದ ಶ್ರಾವಣ ಮಾಸದ ಪ್ರಯುಕ್ತ ಧಾರವಾಡ ಸರೋವರ ನಗರದ ಮಾರ್ತಾಂಡಪ್ಪ ಕತ್ತಿ ಅವರ ನಿವಾಸದಲ್ಲಿ ಆಯೋಜಿಸಿದ್ದ ‘ನಿತ್ಯ ವಚನೋತ್ಸವ’ ಕಾರ್ಯಕ್ರಮದಲ್ಲಿ ‘ನಾನು ನಾನೆಂಬ ಅಹಂಭಾವವಳಿದು’ ಎಂಬ ಸ್ವತಂತ್ರ ಸಿದ್ದಲಿಂಗೇಶ್ವರರ ವಚನ ಹಾಗೂ ಶರಣರ ವಚನಗಳ ಕುರಿತು ಅನುಭಾವ ಹಂಚಿಕೊಳ್ಳಲಾಯಿತು.
ಬಸವಂತ ತೋಟದ, ಅನಿಲ್ ಅಂಗಡಿ, ಪ್ರೊ. ವಸುದೇವ ಪರ್ವತಿ, ಪರಿಸರ ಪ್ರೇಮಿ ಪಿ.ವ್ಹಿ. ಹಿರೇಮಠ, ಸುನೀಲ ಬಾಗೇವಾಡಿ, ನಾಗರಾಜ ದೇಶಾಯಿ, ಬಸವರಾಜ ನಾಶಿಪುಡಿ, ಸಿದ್ದು ಕಲ್ಯಾಣಶೆಟ್ಟಿ, ಬಸವರಾಜ ಹಿರೇಮಠ, ಶಂಕರ ಮೇಸ್ತ್ರಿ, ಬಿ.ಸಿ ಮೇಸ್ತ್ರಿ, ಶೃತಿ ಮೇಸ್ತ್ರಿ, ಸುಭಾಷ ಸುಂಕದ, ಉದ್ಯಮಿ ವಿಜಯಕುಮಾರ ದೇವರಮನಿ ಹಾಗೂ ಮನೀಶ್ ನೂಲಾ ಅವರು ಭಾಗವಹಿಸಿ ವಚನಗಳ ಆಶಯ, ಶರಣರ ಜೀವನದರ್ಶನ ಮತ್ತು ಅವುಗಳ ಪ್ರಸ್ತುತತೆಯ ಕುರಿತು ತಮ್ಮ ಅನುಭಾವಗಳನ್ನು ವ್ಯಕ್ತಪಡಿಸಿದರು.
‘ನಾನು ನಾನೆಂಬ ಅಹಂಭಾವವಳಿದು’ ಎಂಬ ವಚನದ ಆಶಯವನ್ನು ಮಾರ್ತಾಂಡಪ್ಪ ಕತ್ತಿ ಅವರು ವಿವರಿಸಿದ ವ್ಯಕ್ತಿಯಲ್ಲಿರುವ ಅಹಂಭಾವ ಮತ್ತು ಸ್ವಾರ್ಥವನ್ನು ತೊರೆದು ಆತ್ಮಶೋಧನೆ, ಸತ್ಯನಿಷ್ಠೆ ಹಾಗೂ ಮಾನವೀಯತೆಯ ಮಾರ್ಗದಲ್ಲಿ ಸಾಗುವುದೇ ಶರಣರ ಸಂದೇಶದ ಸಾರವಾಗಿದೆ ಎಂದು ಹೇಳಿದರು. ವಚನಗಳನ್ನು ಕೇವಲ ಓದುವುದಕ್ಕಿಂತ ಅವುಗಳ ಅರ್ಥಾನುಭಾವವನ್ನು ಬದುಕಿನಲ್ಲಿ ಅಳವಡಿಸಿಕೊಂಡಾಗ ಮಾತ್ರ ವಚನ ಸಾಹಿತ್ಯದ ಉದ್ದೇಶ ಸಾರ್ಥಕವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
‘ಶರಣರ ಬರುವೆಮಗೆ ಪ್ರಾಣ ಜೀವಾಳವಯ್ಯ’ ಎಂಬ ವಚನದ ಆಶಯದೊಂದಿಗೆ ನಡೆದ ಸತ್ಸಂಗದಲ್ಲಿ ಶರಣರ ವಚನಗಳ ಗಾಯನ, ವಾಚನ ಹಾಗೂ ಅನುಭಾವ ಹಂಚಿಕೆಯ ಮೂಲಕ ಅರ್ಥಪೂರ್ಣ ವಾತಾವರಣ ನಿರ್ಮಾಣವಾಯಿತು.
ವಚನಾಭಿಮಾನಿಗಳು ಹಾಗೂ ಶರಣ ಬಂಧುಗಳು ಭಾಗವಹಿಸಿದ್ದ ಕಾರ್ಯಕ್ರಮವು ವಚನಗಳ ಮೂಲಕ ಆತ್ಮಚಿಂತನೆ, ಸಾಮಾಜಿಕ ಸಮಾನತೆ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸುವ ಸಾರ್ಥಕ ವೇದಿಕೆಯಾಯಿತು.

