ವಿಚಾರಣಾಧೀನ ಖೈದಿಗಳಿಗೆ ಚಿತ್ರಕಲಾ ಶಿಬಿರ
ಸೃಜನಶೀಲತೆಯ ಮೂಲಕ ಹೊಸ ಆಶಾಕಿರಣ- ಕೇಂದ್ರ ಕಾರಾಗೃಹದ ಅಧೀಕ್ಷಕ ರಘುಪತಿ ಸಿ.ಜೆ.
ಧಾರವಾಡ
ವಿಚಾರಣಾಧೀನ ಖೈದಿಗಳಲ್ಲಿ ಸೃಜನಶೀಲತೆ, ಆತ್ಮವಿಶ್ವಾಸ ಹಾಗೂ ಮಾನಸಿಕ ನೆಮ್ಮದಿಯನ್ನು ಬೆಳೆಸುವ ಉದ್ದೇಶದಿಂದ ಚಿತ್ರಕಲಾ ಶಿಬಿರ ಆಯೋಜಿಸಿರುವುದು ಮಹತ್ವದ ಸಾಮಾಜಿಕ ಹಾಗೂ ಮಾನವೀಯ ಪ್ರಯತ್ನವಾಗಿದೆ ಎಂದು ಕೇಂದ್ರ ಕಾರಾಗೃಹದ ಅಧೀಕ್ಷಕ ರಘುಪತಿ ಸಿ.ಜೆ. ಹೇಳಿದರು.
ಮೌರ್ಯ ಆರ್ಟ್ ಪೌಂಡೇಷನ್, ಕೇಂದ್ರ ಕಾರಾಗೃಹ, ರೋಟರಿ ಕ್ಲಬ್, ಹೆರಿಟೇಜ್ ಮತ್ತು ಪಂ. ಪುಟ್ಟರಾಜ ಗವಾಯಿಗಳ ಕಲಾ ಪ್ರತಿಷ್ಠಾನ ಆಶ್ರಯದಲ್ಲಿ ಕಾರಾಗೃಹದ ಗಾಂಧಿಭವನದಲ್ಲಿ ಹಮ್ಮಿಕೊಂಡ ವಿಚಾರಣಾಧಿ ಬಂಧಿಗಳಿಗೆ ಚಿತ್ರಕಲಾ ಶಿಬಿರದ ಉದ್ಘಾಟನೆ ನೇರವೆರಿಸಿ ಮಾತನಾಡಿದರು.
ಕಾರಾಗೃಹವೆಂದರೆ ಕೇವಲ ನಿಯಂತ್ರಣ ಮತ್ತು ಶಿಸ್ತು ಪಾಲನೆಯ ಸ್ಥಳವಾಗಿರದೆ, ವ್ಯಕ್ತಿಯೊಳಗಿನ ಉತ್ತಮ ಗುಣಗಳನ್ನು ಬೆಳೆಸುವ ಹಾಗೂ ಸಮಾಜಮುಖಿ ಚಿಂತನೆಗೆ ಅವಕಾಶ ಕಲ್ಪಿಸುವ ಸ್ಥಳವಾಗಬೇಕು. ಈ ನಿಟ್ಟಿನಲ್ಲಿ ಚಿತ್ರಕಲೆಯಂತಹ ಸೃಜನಾತ್ಮಕ ಚಟುವಟಿಕೆಗಳು ವಿಚಾರಣಾಧೀನ ಖೈದಿಗಳಿಗೆ ತಮ್ಮ ಭಾವನೆಗಳು, ಆಲೋಚನೆಗಳು ಮತ್ತು ಅನುಭವಗಳನ್ನು ಕಲೆಯ ಮೂಲಕ ವ್ಯಕ್ತಪಡಿಸಲು ಉತ್ತಮ ವೇದಿಕೆಯಾಗುತ್ತವೆ ಎಂದರು.
ಚಿತ್ರ ಬಿಡಿಸುವ ಸಂದರ್ಭದಲ್ಲಿ ಮನಸ್ಸು ಏಕಾಗ್ರವಾಗುವುದರಿಂದ ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡಿಕೊಳ್ಳಲು ಸಹಾಯವಾಗುತ್ತದೆ. ಬಣ್ಣಗಳ ಮೂಲಕ ಭಾವನೆಗಳನ್ನು ವ್ಯಕ್ತಪಡಿಸುವ ಅವಕಾಶ ದೊರೆಯುವುದರಿಂದ ಆತ್ಮವಿಶ್ವಾಸ ಹೆಚ್ಚುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಧಾರವಾಡ ಹೆರಿಟೇಜ್ನ ಕಾರ್ಯದರ್ಶಿ ರವಿಕುಮಾರ ಬಿರಜಣ್ಣನವರ, ಲಕ್ಷ್ಮೀ ದೊಡಮನಿ, ನಾಗರಾಜ ದೊಡಮನಿ, ಸಹಾಯಕ ಅಧೀಕ್ಷಕ ಶಿವಕುಮಾರ, ಪುಂಡಲಿಕ ಜಗದಾಳೆ, ಅಶೋಕ ಕರ್ಕೋಳ್ಳಿ, ಮಾರ್ತಾಂಡಪ್ಪ ಕತ್ತಿ, ವಿಶಾಲ ಖಾನೆವಾಲೆ, ನೆಗಳೂರಮಠ, ಇದ್ದರು. ಸುಮಾರು 60ಕ್ಕೂ ಹೆಚ್ಚು ವಿಚಾರಣಾಧಿ ಬಂಧಿಗಳು ಇದ್ದರು.
ಚಿತ್ರಕಲಾವಿದೆ ಶ್ರೀಮತಿ ಶಾಂತಲಾ ಮಿಣಜಗಿ ಪ್ರಾರ್ಥಿಸಿದರು, ಶಿಕ್ಷಕ ಪಿ ಬಿ ಕುರಬೇಟ ನಿರೂಪಿಸಿ,ಸ್ವಾಗತಿಸಿದರು. ಶ್ರೀಮತಿ ವೈಶಾಲಿ ನಾಯ್ಕ ವಂದಿಸಿದರು.

