ಅಭಿಯಂತರರು ಅಭಿವೃದ್ಧಿಗೆ ಹೊಸ ದಿಕ್ಕು ನೀಡಲಿ

ಹಂಚಿಕೊಳ್ಳಿ

ಧಾರವಾಡ
ಅಭಿಯಂತರರು ಕೇವಲ ಕಟ್ಟಡ, ರಸ್ತೆ ಹಾಗೂ ಸೇತುವೆಗಳನ್ನು ನಿರ್ಮಿಸುವುದಕ್ಕೆ ಸೀಮಿತವಾಗದೆ, ಸಮಾಜದ ಅಗತ್ಯಗಳನ್ನು ಅರಿತು ಗುಣಮಟ್ಟದ ಹಾಗೂ ಶಾಶ್ವತ ಅಭಿವೃದ್ಧಿಗೆ ಹೊಸ ದಿಕ್ಕು ನೀಡಬೇಕು ಎಂದು ಶಾಸಕ ವಿನಯ ಕುಲಕರ್ಣಿ ಹೇಳಿದರು.

ನಗರದ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರ್ ಆವರಣದ ಪುತ್ತಳಿಯ ಪಕ್ಕದಲ್ಲಿ ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ (ಎಸಿಸಿಇ), ಲೋಕಲ್ ಸೆಂಟರ್ ಧಾರವಾಡ ಮತ್ತು ಎಸಿಸಿಇ ಇಂಡಿಯಾ ಧಾರವಾಡ ಸೆಂಟರ್ ವತಿಯಿಂದ ಮಂಗಳವಾತ ಆಯೋಜಿಸಿದ್ದ ಸರ್ ಎಂ. ವಿಶ್ವೇಶ್ವರಯ್ಯ ಅವರ 166ನೇ ಜನ್ಮದಿನದ ಅಂಗವಾಗಿ ಅಭಿಯಂತರರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸರ್ ಎಂ. ವಿಶ್ವೇಶ್ವರಯ್ಯ ಅವರು ತಮ್ಮ ತಾಂತ್ರಿಕ ಜ್ಞಾನ, ಶಿಸ್ತು, ಪ್ರಾಮಾಣಿಕತೆ ಹಾಗೂ ದೂರದೃಷ್ಟಿಯ ಮೂಲಕ ದೇಶದ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದಾರೆ. ಅವರ ಸಾಧನೆಗಳು ಇಂದಿನ ಪೀಳಿಗೆಯ ಅಭಿಯಂತರರಿಗೆ ಸ್ಫೂರ್ತಿಯಾಗಬೇಕು. ಬದಲಾಗುತ್ತಿರುವ ಕಾಲಘಟ್ಟದಲ್ಲಿ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಜನಸಾಮಾನ್ಯರಿಗೆ ಅನುಕೂಲವಾಗುವಂತಹ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವುದು ಅಭಿಯಂತರರ ಪ್ರಮುಖ ಜವಾಬ್ದಾರಿಯಾಗಿದೆ ಎಂದರು.

ಈ ಸಂದರ್ಭದಲ್ಲಿ ಸರ್ ಎಂ. ವಿಶ್ವೇಶ್ವರಯ್ಯ ಅವರ ಭಾವಚಿತ್ರಕ್ಕೆ ಗಣ್ಯರು ಹಾಗೂ ಎಸಿಸಿಇ ಪದಾಧಿಕಾರಿಗಳು ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ಬಳಿಕ ಅಭಿಯಂತರರ ಮೆರವಣಿಗೆ ನಡೆಯಿತು. ಈ ಮೆರವಣಿಗೆಯಲ್ಲಿ ಡೋಳ್ಳು ಕುಣಿತ, ವಿವಿಧ ಶ್ಲೋಘನಗಳ ಇರುವ ವಾಹನಗಳ ಪ್ರದರ್ಶನ ಗಮನ ಸೆಳೆಯಿತು.

ಎಸಿಸಿಇ, ಲೋಕಲ್ ಸೆಂಟರ್ ಅಧ್ಯಕ್ಷ ಇಂ. ಸುನೀಲ ಬಾಗೇವಾಡಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಅಭಿವೃದ್ಧಿ ಕಾರ್ಯಗಳಲ್ಲಿ ಗುಣಮಟ್ಟ, ಪಾರದರ್ಶಕತೆ ಹಾಗೂ ಪರಿಸರ ಸಂರಕ್ಷಣೆಗೆ ಆದ್ಯತೆ ನೀಡಬೇಕು.  ಧಾರವಾಡ ಸೇರಿದಂತೆ ರಾಜ್ಯದ ಸಮಗ್ರ ಅಭಿವೃದ್ಧಿಯಲ್ಲಿ ಅಭಿಯಂತರರ ವೃತ್ತಿಪರ ಜ್ಞಾನ ಮತ್ತು ಅನುಭವವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕಿದೆ ಎಂದು ಹೇಳಿದರು.

ಉಪಾಧ್ಯಕ್ಷ ಇಂ. ಅರುಣಕುಮಾರ ಶೀಲವಂತ, ಕಾರ್ಯದರ್ಶಿ ಇಂ. ಸಿದ್ದನಗೌಡ ಕೆ. ಪಾಟೀಲ, ಖಜಾಂಚಿ ಇಂ. ಕಬೀರ ನದಾಫ, ಕೃಷ್ಣಾ ಯಲಿಗಾರ, ಸುಮೀತ ಸುಣಗಾರ, ರಾಕೇಶ ಪಾಟೀಲ, ರಾಜು ಇಟಗಿ, ಮಹೇಶ ಮಠದ, ಶ್ರೀಕಾಂತ ಗಾಯಕವಾಡ, ಅಲ್ತಾಪ್ ಅಲಿ ಹತ್ತಿಮತ್ತೂರ, ಸಂಜಯ ಕಬ್ಬೂರ, ವಿಜಯೇಂದ್ರಗೌಡ ಪಾಟೀಲ, ಪವನಕುಮಾರ ಬೆಟಗೇರಿ, ರಿಯಾಜ್  ಕರಿಕಟ್ಟಿ ಸೇರಿದಂತೆ ಎಸಿಸಿಇ ಪದಾಧಿಕಾರಿಗಳು, ಸದಸ್ಯರು ಹಾಗೂ ಅನೇಕ ಅಭಿಯಂತರರು ಉಪಸ್ಥಿತರಿದ್ದರು.


ಹಂಚಿಕೊಳ್ಳಿ

Leave a Reply

Your email address will not be published. Required fields are marked *