ಧಾರವಾಡ
ಶರಣರನ್ನು ಮರಣದಲ್ಲಿ ನೋಡು ಎನ್ನುವಂತೆ ಡಾ. ಆನಂದ ಪಾಂಡುರಂಗಿಯವರ ಅನಿರೀಕ್ಷಿತ ಮರಣದಿಂದ ಸಮಾಜ ತಲ್ಲಣಗೊಂಡಿದೆ.
ಸಾವಿರಾರು ಮನೋರೋಗಿಗಳು ಅನಾಥವಾದ ಅನುಭವ ಅನುಭವಿಸುವಂತಾಗಿದೆ. ಸದಾ ಹಸನ್ಮುಖಿಯಾಗಿ ನಗುತ್ತಲೇ ಮಾತಿಗಿಳಿಯುತ್ತಿದ್ದ ಅವರು ಎಂದೂ ಯಾರೊಡನೆಯೂ ಏರುಧ್ವನಿಯಲ್ಲಿ ಮಾತನಾಡಿದವರಲ್ಲ.
ನಾಡಿನ ತುಂಬ ವಿಶೇಷವಾಗಿ ಉತ್ತರ ಕರ್ನಾಟಕ ಮತ್ತು ಹೈದರಾಬಾದ್ ಕರ್ನಾಟಕದಲ್ಲಿ ಮನೆ ಮಾತಾದವರು. ತುಂಬಾ ಕಷ್ಟದಲ್ಲಿ ಬದುಕನ್ನು ಕಟ್ಟಿಕೊಂಡು ಸಾರ್ಥಕ ಬದುಕನ್ನು ಸಾಗಿಸಿದವರು.
ಪ್ರೀತಿಗೆ ಯಾವ ಪಂಥವನ್ನು ಬೆರೆಸದವರು. ಎಲ್ಲ ವಲಯ ಮತ್ತು ವರ್ಗದ ಜನರೊಡನೆ ಬೆರೆತುಹೋಗುತ್ತಿದ್ದರು.
ಅಜಾತಶತ್ರುವಾಗಿ ಬದುಕು ಸಾಗಿಸಿದವರು. ಯರೊಂದಿಗೂ ಮನಸ್ತಾಪ ಮಾಡಿಕೊಂಡವರಲ್ಲ, ಯಾರೊಡನೆಯೂ ಸಂಬಂಧಗಳನ್ನು ಕಡಿದುಕೊಂಡವರಲ್ಲ. ತುಂಬಾ ಪ್ರಭಾವಶಾಲಿಯಾಗಿ ವ್ಯಕ್ತಿತ್ವವನ್ನು ರೂಪಿಸಿಕೊಂಡಿದ್ದರು. ಅವರು ಮಾತನಾಡಲು ಪ್ರಾರಂಭಿಸಿದರೆ ಎದುರಿಗೆ ಕುಳಿತವರಿಗ ಎಷ್ಟೂ ಬೇಸರವಾಗದಂತೆ ಅಸ್ಕಲಿತವಾಗಿ ಮಾತನಾಡುತ್ತಿದ್ದರು.
ಅವರ ಮನೆ ಅಂಗಳ ಬೆಳಗಿನ ಅದರಿಂದಲೇ ತುಂಬಿಕೊಳ್ಳಲು ಪ್ರಾರಂಭಗೊಂಡು ಹತ್ತುಗಂಟೆಗೆ ಕುಳಿತುಕೊಳ್ಳಲು ಜಾಗ ಇಲ್ಲದಂತೆ ಆಗಿಬಿಡುತ್ತಿತ್ತು. ಚೀರಾಟ, ನೆರಳಾಟ, ನಗು, ಅಳು ಅಲ್ಲಿ ತುಂಬಿಕೊಂಡಿರುತ್ತಿತ್ತು. ಮನೋವ್ಯಾಕುಲತೆಗೆ ಒಳಗಾದವರ ಜೊತೆ ಅವರು ಮಾತನಾಡುವ ರೀತಿ ಹೇಗಿರುತ್ತಿತ್ತೆಂದರೆ ಅವರ ಮಾತಿನಲ್ಲಿಯೇ ಔಷಧಿಗುಣ ಇರುತ್ತಿತ್ತು.
ಎಷ್ಟೋ ಸಂದರ್ಭದಲ್ಲಿ ಮನೋವ್ಯಾಕುಲತೆಗೆ ಕಾರಣಗಳನ್ನು ತಿಳಿದುಕೊಂಡು ಅವುಗಳಿಗೆ ಸಲಹೆಗಳನ್ನು ನೀಡಿ ಯಾವ ಔಷಧಿ ನೀಡದೇ ಆರಾಮಮಾಡಿ ಕಳಿಸಿಕೊಡುತ್ತಿದ್ದರು. ಅವರು ಬರೀ ವೈದ್ಯರಾಗಿದ್ದಿಲ್ಲ, ಸಮಾಜಮುಖಿಯಾದ ನಡೆ ಅವರದಾಗಿತ್ತು. ಸಮಾಜಕ್ಕೆ ಒಬ್ಬ ಆದರ್ಶ ವೈದ್ಯರಾಗಿದ್ದರು. ಬಹುತೇಕ ಜನರಿಗೆ ಆನಂದ ಪಾಂಡುರಂಗಿಯವರಿಗೆ ಭರವಸೆಯ ಬೆಳಕಾಗಿದ್ದರು. ಸಹಾಯ ಕೋರಿ ಬಂದವರಿಗೆ ಅವರಿಗೆ ಜೀವನವನ್ನು ನೀಡಿದವರು.
ಉತ್ತರ ಕರ್ನಾಟಕದ ಧರ್ಮಗುರುಗಳನ್ನು ಮೊದಲಗೊಂಡು ಕೇಂದ್ರ ರಾಜ್ಯಗಳ ಪ್ರಭಾವಿ ರಾಜಕಾರಣಿಗಳ ಸಾಂಗತ್ಯವನ್ನು ಹೊಂದಿದ್ದರು. ಎಷ್ಟೋ ಬಡಜನರಿಗೆ ಹಲವು ರೀತಿಯಲ್ಲಿ ಸಹಾಯ ಮಾಡಿ ಬದುಕು ಕಟ್ಟಿಕೊಳ್ಳುವಂತೆ ಮಾಡಿದವರು. ಅವರು ಇನ್ನು ಇಲ್ಲ ಎಂದು ಅರಗಿಸಿಕೊಳ್ಳುವುದು ಧಾರವಾಡ ಜನತೆಗೆ ಕಷ್ಟವಾಗುವುದು.
ಶಂಕರ ಹಲಗತ್ತಿ
ಪ್ರಧಾನ ಕಾರ್ಯದರ್ಶಿ
ಕರ್ನಾಟಕ ವಿದ್ಯಾವರ್ಧಕ ಸಂಘ
