ಅನಂತ ರೂಪದಿಂದ ಭಗವಂತನ ಅನಂತ ಕಾರ್ಯ

ಹಂಚಿಕೊಳ್ಳಿ

ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮತೀರ್ಥರ ಸಂದೇಶ

ಧಾರವಾಡ
‘ಶ್ರೀ ಕೃಷ್ಣ ಪರಮಾತ್ಮನ ಮಹಿಮೆಯನ್ನು ಸಾರುವ ಶ್ರೀ ಮದ್ ಭಾಗವತ ಶ್ರವಣ ಮಾಡುವವರಿಗೆ ಯಾವ ವಿಘ್ನಗಳು ಬರಬಾರದೆಂದು ಮಂಗಲಾಚರಣ ಶ್ಲೋಕ ಮಾಡಿದ್ದಾರೆ. ಎಲ್ಲವೂ ಭಗವಂತನ ಆಧೀನ. ಪ್ರವೃತ್ತಿ, ಪ್ರತಿತಿ, ತಿಳಿವಳಿಕೆ, ತೋರುವ ಅರ್ಹತೆಯನ್ನು ಕೊಡುವವ ಪರಮಾತ್ಮ. ಅಂದರೆ ಇವೆಲ್ಲವೂ ದೇವರ ಆಧೀನ. ಭಾಗವತದಿಂದ ಆಗುವ ಲಾಭ ಭಗವಂತನಿಂದಲೇ ಬರಬೇಕು. ವೇದ, ಆಗಮಗಳು, ಶಾಸ್ತ್ರಗಳು ನಮಗೊಬ್ಬ ಸೃಷ್ಟಿಕರ್ತ, ಸ್ವತಂತ್ರನಾದ ಭಗವಂತ ಇದ್ದಾನೆ ಎಂದು ತಿಳಿಸುತ್ತವೆ. ಪ್ರಪಂಚದ ಎಲ್ಲ ವಸ್ತುಗಳು ಸಾರ್ಥಕ, ಸಮರ್ಪಕ. ಕಾರಣ ಅವೆಲ್ಲವೂ ಭಗವಂತನ ಸೃಷ್ಟಿ. ಒಂದೊಂದು ಕಾಳಿನಲ್ಲಿ ಅನಂತ ರೂಪದಲ್ಲಿ ಬಂದಿದ್ದಾನೆ. ಅನಂತ ರೂಪಗಳಿಂದ ಭಗವಂತ ನಿಮ್ಮ ಮನೆ ಪ್ರವೇಶ ಮಾಡುತ್ತಾನೆ. ಬರೀ ಹತ್ತು ಅವತಾರಗಳಲ್ಲ, ಅನಂತ ಅವತಾರಗಳಿಂದ, ಅನಂತ ರೂಪಗಳಿಂದ ನಮಗೆಲ್ಲ ಸುಖ ಕೊಡುತ್ತಾನೆ.  ದೇವ ಒಬ್ಬನೇ. ದೀಪಗಳು ಹಲವು ಎಂದು ಶ್ರೀ ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮತೀರ್ಥರು ಹೇಳಿದರು.
ಧಾರವಾಡ ಉತ್ತರಾದಿ ಮಠದ ನೂತನ ಕಟ್ಟಡ ಆವರಣದಲ್ಲಿ ೩೧ನೆಯ ಚಾತುರ್ಮಾಸ್ಯವನ್ನು ಕೈಗೊಂಡಿರುವ ಉತ್ತರಾದಿ ಮಠದ ಶ್ರೀಪಾದಂಗಳಾದ ಶ್ರೀ ಸತ್ಯಾತ್ಮತೀರ್ಥರು ಮೂವತ್ತೆಂಟನೆಯ ದಿನದ ಸೋಮವಾರ ಆಶೀರ್ವಚನ ಸಂದೇಶದಲ್ಲಿ ಮೇಲಿನಂತೆ ತಿಳಿಸಿದರು.

ಮುಂದುವರೆದು ‘ಅನಂತ ಕಾಲದಲ್ಲಿ, ಅನಂತ ರೂಪದಲ್ಲಿ, ಅನಂತ ಕಾರ್ಯಗಳನ್ನು ಪರಮಾತ್ಮ ಮಾಡುತ್ತಾನೆ. ಆತ ಸಾಗರ. ಆತ ಪ್ರಪಂಚ. ಈ ತಿಳುವಳಿಕೆ ನಮ್ಮಲ್ಲಿ ಬರಬೇಕು. ಇದಕ್ಕೆ ವಿಘ್ನ ಬರಬಾರದು ಎಂದು ಗಣಪತಿ, ವಿನಾಯಕನಲ್ಲಿ ಪ್ರಾರ್ಥನೆ ಮಾಡಬೇಕು. ಅನುಸಂಧಾನ ಮಾಡಿಕೊಳ್ಳಬೇಕು. ತಪ್ಪಬಾರದು. ಗಣಪತಿಯ ಬೀಜಾಕ್ಷರಗಳ ಉಚ್ಚಾರವಾದರೂ ವಿಘ್ನಗಳು ದೂರವಾಗುತ್ತವೆ. ಗಣಪತಿಯಲ್ಲಿ ಅಂತರ್ಗತನಾದ ವಿಶ್ವಂಭರನನ್ನು ಪ್ರಾರ್ಥಿಸಬೇಕು. ಇದನ್ನು ಮಾಡಿದರೆ, ಎಲ್ಲಾ ದೋಷಗಳು ದೂರವಾಗಿ, ಜ್ಞಾನವನ್ನು ಹೊಂದಬಹುದು ಎಂದರು.

‘ಈ ಶ್ರೀ ಮದ್ ಭಾಗವತದ ಪ್ರಧಾನ ವ್ಯಕ್ತಿ ಪರಮಾತ್ಮ. ಅಂಥವರಿಗೆ ಮಾತ್ರ ಶರಣು ಹೋಗಬೇಕು. ಒಬ್ಬನೇ ದೇವ ಎಲ್ಲಾ ಕಡೆ ಸಶಕ್ತನಾಗಿದ್ದಾನೆ. ಉತ್ತಮರಲ್ಲಿ ಮಾತ್ಸರ್ಯ ಇರಬಾರದು. ಮಾತ್ಸರ್ಯಾದಿ ದೋಷಗಳು ಲವಲೇಶವೂ ಇರಬಾರದು. ಸಮಸ್ತ ವೇದಗಳು ಕಲ್ಪವೃಕ್ಷ. ಆದರೆ ವೇದಗಳ ಮಹತ್ವ ತಿಳಿದುಕೊಳ್ಳಬೇಕು. ಒಂದೇ ಕಲ್ಪವೃಕ್ಷವಾದರೂ  ಸಿಗುವ ಹಣ್ಣು ಬೇರೆ ಬೇರೆ.

‘ವಿರಕ್ತ ಶಿಖಾಮಣಿಗಳು ವೇದವ್ಯಾಸರು. ಭಾಗವತಾಚಾರ್ಯ ಶುಕಾಚಾರ್ಯರು ವೇದವ್ಯಾಸರನ್ನು ಗೌರವದಿಂದ ಸ್ಮರಿಸುತ್ತಾರೆ ಮತ್ತು ತಾರತಮ್ಯದ ಪ್ರಕಾರ ಉಳಿದ ದೇವತೆಗಳನ್ನು ಸ್ಮರಿಸಿ ಕೊಳ್ಳುತ್ತಾರೆ’ ಎಂದು ಶ್ರೀ ಸತ್ಯಾತ್ಮತೀರ್ಥ ಗುರುಗಳು ಹೇಳಿದರು.


ಹಂಚಿಕೊಳ್ಳಿ

Leave a Reply

Your email address will not be published. Required fields are marked *