ಮೊಬೈಲ್ನಲ್ಲೂ ರಾಮನಾಮ ಬರೆಯುವ ವ್ಯವಸ್ಥೆ; ಭಕ್ತರು ಸದುಪಯೋಗಪಡಿಸಿಕೊಳ್ಳಲಿ: ಶ್ರೀ ಸತ್ಯಾತ್ಮತೀರ್ಥರು
ಧಾರವಾಡ: ರಾಮನಾಮದ ಮಹಿಮೆ ಅಪಾರವಾಗಿದ್ದು, ಜಗತ್ತಿನಲ್ಲಿ ನಡೆಯುತ್ತಿರುವ ಪ್ರತಿಯೊಂದು ಕಾರ್ಯವೂ ಪರಮಾತ್ಮ ಶ್ರೀರಾಮಚಂದ್ರನ ಅನುಗ್ರಹದಿಂದಲೇ ನಡೆಯುತ್ತಿದೆ ಎಂದು ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರು ಹೇಳಿದರು.
ಧಾರವಾಡದ ಉತ್ತರಾದಿ ಮಠದ ನೂತನ ಕಟ್ಟಡದ ಆವರಣದಲ್ಲಿ 31ನೇ ಚಾತುರ್ಮಾಸ್ಯ ವ್ರತ ಕೈಗೊಂಡಿರುವ ಶ್ರೀ ಸತ್ಯಾತ್ಮತೀರ್ಥರು, 44ನೇ ದಿನದ ಆಶೀರ್ವಚನದಲ್ಲಿ ಮಾತನಾಡಿದರು.
“ಪ್ರತಿಯೊಬ್ಬ ವ್ಯಕ್ತಿಯ ಚರಿತ್ರೆಯನ್ನು ಅನಾದಿ ಕಾಲದಿಂದ ಅನಂತ ಕಾಲದವರೆಗೆ ಶ್ರೀರಾಮಚಂದ್ರನು ಬರೆದಿಟ್ಟಿದ್ದಾನೆ. ಇಂತಹ ಪರಮಾತ್ಮನ ನಾಮಸ್ಮರಣೆಯನ್ನು ಎಲ್ಲರೂ ಮಾಡಬೇಕು. ಇದೀಗ ಮೊಬೈಲ್ನಲ್ಲಿಯೂ ರಾಮನಾಮ ಬರೆಯುವ ವ್ಯವಸ್ಥೆ ಮಾಡಲಾಗಿದೆ. ಭಕ್ತರು ಇದರ ಸದುಪಯೋಗ ಪಡೆದುಕೊಳ್ಳಬೇಕು” ಎಂದು ಹೇಳಿದರು.
ಪರಮಾತ್ಮನು ನರಸಿಂಹ ರೂಪದಲ್ಲಿ ಪ್ರಹ್ಲಾದನಿಗೆ ಅನುಗ್ರಹಿಸಿದ ಪ್ರಸಂಗವನ್ನು ವಿವರಿಸಿದ ಅವರು, ಭಗವಂತನು ಪ್ರಹ್ಲಾದನನ್ನು ನಿಮಿತ್ತ ಮಾತ್ರನನ್ನಾಗಿ ಮಾಡಿಕೊಂಡು ಆತನನ್ನು ರಕ್ಷಿಸಿದನು. ಭಗವಂತನನ್ನು ಭಕ್ತಿಯಿಂದ ಸೇವಿಸುವವರನ್ನು ಪ್ರಹ್ಲಾದನಂತೆ ಪರಮಾತ್ಮನು ರಕ್ಷಿಸುತ್ತಾನೆ ಎಂದರು.
ಯಾರೂ ಭಗವಂತನನ್ನು ಬಿಟ್ಟು ಬದುಕಲು ಸಾಧ್ಯವಿಲ್ಲ. ದೇವರನ್ನು ಹೊರತುಪಡಿಸಿ ಯಾವುದೂ ಇಲ್ಲ. ಅನಾದಿ ನಿತ್ಯನಾದ ಪರಮಾತ್ಮನ ಅಸ್ತಿತ್ವವನ್ನು ಪ್ರತಿಯೊಬ್ಬರೂ ಧೈರ್ಯದಿಂದ ಒಪ್ಪಿಕೊಳ್ಳಬೇಕು ಎಂದು ಶ್ರೀಗಳು ತಿಳಿಸಿದರು.
ಯಜ್ಞನಾಮಕ ಪರಮಾತ್ಮನು ಅನೇಕ ದುಷ್ಟ ಶಕ್ತಿಗಳನ್ನು ನಾಶಮಾಡಿ ಸಜ್ಜನರನ್ನು ರಕ್ಷಿಸಿದ್ದಾನೆ. ಪರಮಾತ್ಮನೇ ಮನು ರೂಪದಲ್ಲಿಯೂ ಇದ್ದಾನೆ ಎಂದು ಅವರು ಹೇಳಿದರು.
ಜಗನ್ನಾಥ ದಾಸರ ಆರಾಧನೆ
ಇದೇ ಸಂದರ್ಭದಲ್ಲಿ ಜಗನ್ನಾಥ ದಾಸರ ಆರಾಧನೆಯ ಮಹತ್ವವನ್ನು ವಿವರಿಸಿದ ಶ್ರೀ ಸತ್ಯಾತ್ಮತೀರ್ಥರು, ಹರಿದಾಸರು ಭಗವದ್ಭಕ್ತಿಯ ಪ್ರಸಾರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದರು.
ಮೋಕ್ಷ ಸಾಧನೆಗೆ ಮಾರ್ಗದರ್ಶನ ನೀಡುವ ‘ಹರಿಕಥಾಮೃತ ಸಾರ’ ಎಂಬ ಮಹತ್ವದ ಗ್ರಂಥವನ್ನು ನೀಡುವ ಮೂಲಕ ಜಗನ್ನಾಥ ದಾಸರು ಸಮಾಜಕ್ಕೆ ದೊಡ್ಡ ಉಪಕಾರ ಮಾಡಿದ್ದಾರೆ. ಹರಿದಾಸರ ಸಂದೇಶಗಳನ್ನು ನಂಬಿಕೆಯಿಂದ ಸ್ವೀಕರಿಸಿ, ಭಗವಂತನ ಮೇಲಿನ ಭಕ್ತಿಯನ್ನು ಗಟ್ಟಿಗೊಳಿಸಿಕೊಳ್ಳಬೇಕು ಎಂದು ಭಕ್ತರಿಗೆ ಕರೆ ನೀಡಿದರು.

