ನೆಮ್ಮದಿಗೆ ಮುಳ್ಳಾದ ಬೀದಿ ನಾಯಿಗಳು-ಹಂದಿಗಳು

ಹಂಚಿಕೊಳ್ಳಿ

ಮಕ್ಕಳು ಓಣಿಗಗಳಲ್ಲಿ ನೆಮ್ಮದಿಯಿಂದ ಆಟವಾಡುವಂತಿಲ್ಲ, ರಾತ್ರಿಯಾದರೆ ಮನೆಗೆ ತಲುಪುದೇ ಕಷ್ಟ…!


ಹೌದು…! ರಾಜ್ಯದ ಎರಡನೇ ಮಹಾನಗರ ಎಂಬ ಹೆಗ್ಗಳಿಕೆ ಹೊಂದಿರುವ ಹುಬ್ಬಳ್ಳಿ-ಧಾರವಾಡ ಅವಳಿ ನಗರದ ಜನತೆ ಈಗ ನೆಮ್ಮದಿಯಿಂದ ಜೀವನ ಸಾಗಿಸುವುದೇ ಕಷ್ಟ ಸಾಧ್ಯ.
ಎಲ್ಲೆಂದರಲ್ಲಿ ಬಿಡಾಡಿ ನಾಯಿಗಳ ಕಾಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಾತ್ತಿದೆ. ಇದರಿಂದ ಜನತೆ ತೀವ್ರ ಬೇಸತ್ತು ಹೋಗಿದ್ದಾರೆ. ಪಾಲಿಕೆಗೆ ಪ್ರತಿದಿನ ಹಿಡಿ ಶಾಪ ಹಾಕುವಂತಹ ಸನ್ನಿವೇಶಗಳು ಎದುರಾಗಿರುವುದು ಸಾಮಾನ್ಯ.
ಹಂದಿಗಳ, ಬಿಡಾಡಿ ದನಗಳ ಕಾಟ ಸೇರಿದಂತೆ ಬೀದಿ ನಾಯಿಗಳ ಕಾಟವು ಸಹಿತ ಈಗ ದಿನದಿಂದ ದಿನಕ್ಕೆ ಹೆಚ್ಚಾಗುತ್ತಾ ಹೋಗುತ್ತಿವೆ. ಅವುಗಳಿಗೆ ಯಾರ ಭಯವು ಇಲ್ಲದಂತೆ ರಾಜಾರೋಷವಾಗಿ ಓಡಾಡಿಕೊಂಡು ಜನರ ನೆಮ್ಮದಿ ಹಾಳು ಮಾಡುತ್ತಿವೆ. ಆದರೆ, ಮಹಾನಗರ ಪಾಲಿಕೆ ಗಮನಕ್ಕೆ ಇದ್ದರೂ ಯಾವುದೇ ರೀತಿ ಪ್ರಯೋಜನವಿಲ್ಲ‌.

ಭಯದಲ್ಲಿಯೇ ಓಡಾಟ….

ಬೆಳಗ್ಗೆ ಹಾಗೂ ಸಂಜೆ ವೇಳೆ ಮಕ್ಕಳು ನೆಮ್ಮದಿಯಿಂದ ಆಟವಾಡದಂತಹ ಸ್ಥಿತಿ ಪ್ರತಿಯೊಂದು ಬಡಾವಣೆಯಲ್ಲಿ ಇದೆ. ಬೀದಿ ನಾಯಿಗಳು ಗುಂಪು ಕಟ್ಟಿಕೊಂಡು ಓಡೋಡಿ ಬರುತ್ತವೆ. ಹೀಗಾಗಿ ಎಲ್ಲಿ ನಮ್ಮ ಮಕ್ಕಳಿಗೆ ಕಡಿಯುತ್ತವೆ ಎಂದು ಪಾಲಕರು ಭಯದ ವಾತಾವರಣದಲ್ಲಿಯೇ ಇರುತ್ತಿದ್ದಾರೆ. ಮಕ್ಕಳು ಆಟವಾಡಲು ನೆಮ್ಮದಿಯಿಂದ ಬಿಡುವಂತಹ ಸ್ಥಿತಿಗಳು ಇಲ್ಲ. ಪ್ರತಿಷ್ಠಿತ ಬಡಾವಣೆಗಳಲ್ಲಿ ಅಲ್ಲಲ್ಲಿ ಕಂಡು ಬರುವ ಬೀದಿ ನಾಯಿಗಳು ಸ್ಲಂ ಪ್ರದೇಶಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುತ್ತವೆ. ಆದರೆ, ಈ ನಾಯಿಗಳಿಂದ ಅವಳಿ ನಗರದ ಬಹುತೇಕ ಪ್ರದೇಶದ ಜನರ ನೆಮ್ಮದಿ ದೂರವಾಗಿದೆ‌.

ಜನತೆ ನೆಮ್ಮದಿ ಹಾಳು…

ರಾತ್ರಿ ವೇಳೆ ಕೆಲಸ ಮುಗಿಸಿಕೊಂಡು ಒಬ್ಬೊಬ್ಬರೇ ಹೋಗುವುದು ಕಷ್ಟವಾಗಿದೆ. ಎಲ್ಲೋ ಕುಂತಿರುವ ನಾಯಿಗಳು ಓಡಿ ಬಂದು ಬೊಗಳಲು ಪ್ರಾರಂಭಿಸಿ ಕಡಿಯಲು ಮುಂದಾಗುತ್ತವೆ. ಸ್ವಲ್ಪ ಹೆದರಿಸಿದರೆ ಹೋಗುತ್ತವೆ. ಆದರೆ, ಅವರೇ ಹೆದರಿದರೆ ಕಥೆ ಮುಗಿದೇ ಹೋಯಿತು. ಇನ್ನೂ ದ್ವಿಚಕ್ರ ವಾಹನದಲ್ಲಿ ಹೋಗುವವರ ಪರಿಸ್ಥಿತಿ ಕೇಳುವಂತಿಲ್ಲ. ದ್ವಿಚಕ್ರ ವಾಹನ ತೆಗೆದುಕೊಂಡು ಹೋಗುವ ಸಂದರ್ಭದಲ್ಲಿ ಹಿಂದಿನಿಂದ ಓಡಿ ಬಂದು ಬೆನ್ನು ಹತ್ತಿ ಕಡಿಯಲು ಹೋಗುತ್ತವೆ. ಇದರಿಂದಾಗಿ ಎಷ್ಟೋ ಜನ ಬಿದ್ದು ಗಾಯುಗಳಾದ ಘಟನೆಗಳು ನಡೆದಿವೆ. ಹೀಗಾಗಿ ಭಯದಲ್ಲಿಯೇ ಮನೆ ಸೇರುವಂತಹ ವಾತಾವರಣ ಅವಳಿ ನಗರದೆಲ್ಲೆಡೆ ಕಂಡು ಬರುತ್ತಿರುವುದು ಸಾಮಾನ್ಯ.

ಪಾಲಿಕೆ ಗಮನಕ್ಕೆ ಹೇಗೆ…

ಹುಬ್ಬಳ್ಳಿ-ಧಾರವಾಡ ಅವಳಿ ನಗರದ ಜನಸಂಖ್ಯೆ ಸುಮಾರು 10 ಲಕ್ಷ ಮೀರಿದೆ. ಹೊಸ ಹೊಸ ಬಡಾವಣೆಗಳು ವರ್ಷದಿಂದ ವರ್ಷಕ್ಕೆ ಹುಟ್ಟಿಕೊಳ್ಳುತ್ತಿವೆ. ಬೀದಿ ನಾಯಿಗಳು ಸೇರಿದಂತೆ ಹಂದಿಗಳು ಸಹಿತ ಅದೇ ಪ್ರಮಾಣದಲ್ಲಿ ಬೆಳೆಯುತ್ತಾ ಹೋಗುತ್ತಿವೆ. ಇಷ್ಟೇಲ್ಲಾ ಮಾಹಿತಿ ಮಹಾನಗರ ಪಾಲಿಕೆ ಗಮನಕ್ಕೆ ಇದ್ದರೂ ಸಹಿತ ಯಾವುದೇ ಕ್ರಮಕ್ಕೆ ಮುಂದಾಗದೇ ಇರುವುದು ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಸಾರ್ವಜನಿಕರಿಂದ ಹಲವಾರು ದೂರುಗಳು ಪ್ರತಿ ದಿನ ಬರುತ್ತಿವೆ. ಅಲ್ಲದೇ ಪ್ರತಿಯೊಂದು ವಾರ್ಡ್ ನಲ್ಲಿಯೂ ಪಾಲಿಕೆ ಸಿಬ್ಬಂದಿ ಹಾಗೂ ಅಧಿಕಾರಿಗಳು ಕಾರ್ಯ ನಿರ್ವಹಿಸುವವರಿಗೆ ಗೊತ್ತಿದೆ. ಆದರೆ, ಯಾಕೆ  ನಾಯಿಗಳ ಹಿಡಿಯುವ ಕಾರ್ಯಕ್ಕೆ ಮುಂದಾಗುತ್ತಿಲ್ಲ ಎಂಬುದು ಯಕ್ಷ ಪ್ರಶ್ನೆಯಾಗಿದೆ.

ನಾಯಿಗಳ ಸಂತಾನಹರಣ ಚಿಕಿತ್ಸೆ…

ಪ್ರತಿ ವರ್ಷವು ಬೀದಿ ನಾಯಿಗಳಿಗೆ ಸಂತಾನಹರಣ ಚಿಕಿತ್ಸೆ ನೀಡಲಾಗುತ್ತದೆ. ಆದರೆ, ಅಲ್ಲೋ ಇಲ್ಲೋ ಒಂದೆರೆಡು ಕಡೆ ಮಾಡಿ ಪಾಲಿಕೆ ಸುಮ್ಮನೆ ಉಳಿದುಕೊಳ್ಳುತ್ತಾರೆ‌. ಇತ್ತೀಚಿನ ವರ್ಷಗಳಲ್ಲಿ ಮಾತ್ರ ಆ ಕೆಲಸಕ್ಕೆ ಕೈ ಹಾಕಿಲ್ಲ. ಏನೇ ಕೇಳಿದರೂ ಸಹಿತ ಸಿಬ್ಬಂದಿ ಕೊರತೆ ಇದೆ. ಕಾರ್ಯಾಚರಣೆಯು ಮುಂದುವರೆದಿದೆ. ಎಲ್ಲಾ ಕೆಲಸಗಳನ್ನು ಮಾಡುತ್ತಿದ್ದೇವೆ ಎಂಬ ಆಶ್ವಾಸನೆಗಳನ್ನು ನೀಡುತ್ತಾ ಕಾಲ ಕಳೆಯುತ್ತಿದ್ದಾರೆ. ಇನ್ನೂ ಆರೋಗ್ಯ ಸ್ಥಾಯಿ ಸಮಿತಿ ಇದ್ದು ಇಲ್ಲದಂತಾಗಿದೆ. ಕೆಲವೊಂದು ಸಭೆಗಳನ್ನು ಮಾಡಿದರೆ, ಅವರ ಕೆಲಸ ಮುಗಿದು ಬಿಡುತ್ತದೆ. ಉಳಿದಂತಹ ಸಮಸ್ಯೆಗಳ ಕಡೆಗೆ ಗಮನ ಹರಿಸದೇ ಇರುವುದರಿಂದ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಕ್ಯಾಂಪಸ್‌ನಲ್ಲಿಯೂ ಸಾಕಷ್ಟು…

ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿರುವ ದೊಡ್ಡ ದೊಡ್ಡ ಶಿಕ್ಷಣ ಸಂಸ್ಥೆಗಳ ಕ್ಯಾಂಪಸ್‌ನಲ್ಲಿಯೂ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಮಕ್ಕಳಿಗೆ ಕಡಿದ ಉದಾಹರಣೆಗಳು ಸಾಕಷ್ಟು ಬೆಳಕಿಗೆ ಬಂದಿವೆ. ಆಯಾ ಕ್ಯಾಂಪಸ್ ಆಡಳಿತ ಮಂಡಳಿಯೂ ಈ ಬಗ್ಗೆ ಪಾಲಿಕೆ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಇನ್ನಾದರೂ ಪಾಲಿಕೆ ಅಧಿಕಾರಿಗಳು ಗಮನ ಹರಿಸಿ ಬೀದಿ ನಾಯಿಗಳ ಹಾವಳಿ ತಪ್ಪಿಸಲು ಮುಂದಾಗಬೇಕು.

ಕೆಲವು ಯೋಜನೆಗಳು ಬಂದು ಸಾಕಷ್ಟು ಹಣ ಹರಿದು ಬಂದರೆ ಅಭಿವೃದ್ಧಿಯಾಗುವುದಿಲ್ಲ. ಜನತೆ ನೆಮ್ಮದಿಯಿಂದ ಜೀವನ ಸಾಗಿಸುವಂತಹ ವಾತಾವರಣವನ್ನು ಆಡಳಿತದ ವ್ಯವಸ್ಥೆ ನಿರ್ಮಾಣ ಮಾಡಬೇಕು. ಆದರೆ, ಇಂತಹ ವಿಷಯಗಳ ಕಡೆಗೆ ಗಮನ ಹರಿಸದೇ ಇರುವುದರಿಂದ ಜನತೆ ಸಹಜವಾಗಿಯೇ ಬೇಸತ್ತು ಹೋಗಿದ್ದಾರೆ. ಅದಕ್ಕಾಗಿ ಅಭಿವೃದ್ಧಿ ವಿಷಯಗಳ ಜೊತೆಗೆ ಕಾರ್ಯಾಚರಣೆ ನಡೆಸುವ ಮೂಲಕ ಜನತೆಗೆ ಯಾವುದೇ ರೀತಿಯಿಂದ ತೊಂದರೆಯಾಗದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ಪಾಲಿಕೆಯದ್ದು.

ಅವಳಿ ನಗರದಲ್ಲಿ ಹಂದಿಗಳ, ಬಿಡಾಡಿ ದನಗಳ, ಬಿಡಾಡಿ ನಾಯಿಗಳ ಕಾರ್ಯಾಚರಣೆ ನಡೆಸಲಾಗುತ್ತಿದೆ. ಬೀದಿ ನಾಯಿಗಳ ಸಂತತಿ ಕಡಿಮೆ ಮಾಡಲು ಅವುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಬರುವ ದಿನಗಳಲ್ಲಿ ಆದಷ್ಟು ಇನ್ನೂ ಹೆಚ್ಚಿನ ರೀತಿಯಲ್ಲಿ ಕಾರ್ಯಾಚರಣೆ ನಡೆಸಲಾಗುವುದು. ಶಿವಳ್ಳಿ ಹತ್ತಿರದ ಪಾಲಿಕೆ ಒಡೆತನದ ಜಾಗೆಯಲ್ಲಿ ಈ ಕುರಿತಂತಹ ಕಾಮಗಾರಿ ಹಂತಕ್ಕೆ ಬಂದಿದೆ.
-ಅರವಿಂದ ಜಮಖಂಡಿ
ಪಾಲಿಕೆ ಸಹಾಯಕ ಆಯುಕ್ತ

ನಾಯಿಗಳ ಕಾಟದಿಂದ ಕಷ್ಟ..

ಬೀದಿ ನಾಯಿಗಳ ಕಾಟದಿಂದ ಜೀವನ ನಡೆಸುವುದೇ ಕಷ್ಟವಾಗಿದೆ. ಯಾಕಾದರೂ ಇಲ್ಲಿ ಮನೆ ಮಾಡಿದೇವು ಎಂಬಂತಾಗಿದೆ. ಹಲವಾರು ಬಾರಿ ಪಾಲಿಕೆ ಗಮನಕ್ಕೆ ತರಲಾಗಿದೆ. ಯಾವುದೇ ಕ್ರಮಗಳನ್ನು ಕೈಗೊಳ್ಳಲು ಮುಂದಾಗುತ್ತಿಲ್ಲ.
-ಪ್ರತಿಭಾ ಕಾಡಕನಕರ
ಸ್ಥಳೀಯ ನಿವಾಸಿ


ಹಂಚಿಕೊಳ್ಳಿ

Leave a Reply

Your email address will not be published. Required fields are marked *