ಭಗವಂತ ಸರ್ವೋತ್ತಮ

ಹಂಚಿಕೊಳ್ಳಿ

ಧಾರವಾಡ
‘ಸರ್ವೋತ್ತಮನಾದ ಭಗವಂತ ಸಕಲ ಸಜ್ಜನರಿಗೆ ಒಳ್ಳೆಯದನ್ನು ಮಾಡುತ್ತ ಶುಕಾಚಾರ್ಯರಿಗೆ ಉಪದೇಶ ಮಾಡುತ್ತ ಹೋಗುತ್ತಾನೆ. ದುರ್ಯೋಧನ ಪರಾಭವ ಹೊಂದಿದರೂ ತನ್ನ ಅಹಂಕಾರ, ದುಷ್ಟತನ ಬಿಟ್ಟಿಲ್ಲ. ಸುದರ್ಶನ ಚಕ್ರದಿಂದ ಪಾಂಡವರನ್ನು ರಕ್ಷಿಸುತ್ತಾನೆ. ನಂತರ ಪರಮಾತ್ಮ ದ್ವಾರಕೆಗೆ ಹೊರಟ. ಪಾಂಡವರ ಕೂದಲಿಗೂ ತೊಂದರೆಯಾಗದಂತೆ ತಡೆದ ಪರಮಾತ್ಮ. ಸಕಲ ವಿಷವನ್ನು ಸೇವಿಸಿದ ಪ್ರಾಣದೇವರ ಅವತಾರವಾದ ಭೀಮಸೇನನನ್ನು ರಕ್ಷಿಸಿದವ ಭಗವಂತ. ಭೀಮಸೇನನ ಅವತಾರವಾದ ಆನಂದತೀರ್ಥರಿಗೆ, ಅವರ ಆಲೋಚನೆ, ಸಿದ್ಧಾಂತಕ್ಕೆ ಕೂದಲೆಳೆಯಷ್ಟೂ ತೊಂದರೆ ಆಗದಂತೆ ಎಲ್ಲಾ ವಾದ, ವಿವಾದ, ಪ್ರತಿವಾದಗಳಿಗೆ ಸಮರ್ಥ ಉತ್ತರ ನೀಡಿದವ, ರಕ್ಷಣೆ ಮಾಡಿದವ ಪರಮಾತ್ಮ. ಸಜ್ಜನರಿಗೆ ಯಾವುದೇ ಅನ್ಯಾಯವಾಗದ ಹಾಗೆ ದುರ್ಜನರನ್ನು ನಾಶ ಮಾಡಿದವನೇ ಭಗವಂತ ಎಂದು ಕುಂತಿ ಪರಮಾತ್ಮನ ಮಹಿಮೆಯನ್ನು ಕೊಂಡಾಡುತ್ತಾರೆ. ಗಾಯತ್ರಿ ಅನೇಕ ಪಾಪಗಳನ್ನು ಸುಟ್ಟು ಹಾಕಲಿಕ್ಕೆ ಸಿಕ್ಕ ದೊಡ್ಡ ಅಸ್ತ್ರ. ನಮ್ಮಲ್ಲಿ ಮಂತ್ರಗಳೆಂಬ ಅಸ್ತ್ರಗಳು ಇದ್ದು ಎಲ್ಲಾ ಅನರ್ಥಗಳನ್ನು ಸಮರ್ಥವಾಗಿ ತೆಗೆದು ಹಾಕಬಲ್ಲವು ಎಂದು ಶ್ರೀ ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮತೀರ್ಥರು ಹೇಳಿದರು.

ಧಾರವಾಡ ಉತ್ತರಾದಿ ಮಠದ ನೂತನ ಕಟ್ಟಡ ಆವರಣದಲ್ಲಿ  ೩೧ನೆಯ ಚಾತುರ್ಮಾಸ್ಯವನ್ನು ಕೈಗೊಂಡಿರುವ ಉತ್ತರಾದಿ ಮಠದ ಶ್ರೀಪಾದಂಗಳಾದ ಶ್ರೀ ಸತ್ಯಾತ್ಮತೀರ್ಥರು ಮೂವತ್ತೊಂಬತ್ತನೆಯ ದಿನದ ಮಂಗಳವಾರ ಆಶೀರ್ವಚನ ಸಂದೇಶದಲ್ಲಿ ಮೇಲಿನಂತೆ ತಿಳಿಸಿದರು.

ಮುಂದುವರೆದು ‘ಅಧರ್ಮ ಮಾಡಿದವರಿಗೆ ಯಾವ ಶಿಕ್ಷೆಯೋ, ಆ ಅಧರ್ಮವನ್ನು ಮಾಡಲು ಸೂಚಿಸಿದವನಿಗೆ ಅಷ್ಟೇ ಘೋರ ಶಿಕ್ಷೆ ಉಂಟು. ಕಲಿ ದೋಷಪೂರ್ಣ. ಅಧರ್ಮ, ಅನ್ಯಾಯದಿಂದ ಎಲ್ಲಿ ದುಷ್ಟತನ ಉಂಟಾಗಿದೆಯೋ ಅಲ್ಲಿ ನಿಶ್ಚಿತವಾಗಿ ಶಿಕ್ಷೆ ಉಂಟು. ಕಲಿಯ ನಿಗ್ರಹ ಮಾಡುತ್ತ ರಾಜ್ಯವಾಳುತ್ತಾನೆ ಪರೀಕ್ಷಿತ ರಾಜ. ಭಗವಂತನಲ್ಲಿ ಏಕಾಗ್ರ ಮನಸ್ಸು ಇಡುವುದು ಮುಖ್ಯ. ಅದಕ್ಕೆ ಶಮಾ ಎಂದು ಕರೆಯುತ್ತಾರೆ. ಹಿರಿಯರ ಸೇವೆ, ಜ್ಞಾನ ಸಂಪಾದಿಸುವುದು, ದಯೆ, ಧರ್ಮ ಇತ್ಯಾದಿ ಪಾಲನೆ ಮಾಡಬೇಕು. ತಪಸ್ವಿಗಳ ತಾಕತ್ತು ಇತರರಿಗೇನು ಗೊತ್ತು? ಯೋಗಿಗಳ ಸಾಮರ್ಥ್ಯ ಊಹಿಸಲು ಸಾಧ್ಯವಿಲ್ಲ. ಶಿವ – ಪಾರ್ವತಿ, ಲಕ್ಷ್ಮೀ – ನಾರಾಯಣ ಮೊದಲಾದವರು ವಿಷಯಾಕ್ತರಲ್ಲ , ಊಟ ಅಂದ ತಕ್ಷಣ , ಭಗವಂತನ ನೆನಪಿಸಿಕೊಳ್ಳಬೇಕು. ಭಗವಂತ ಸರ್ವೋತಮ ಎನ್ನುವುದನ್ನು ಅರಿಯಬೇಕು ಎಂದು ಶ್ರೀ ಸತ್ಯಾತ್ಮತೀರ್ಥ ಗುರುಗಳು ಹೇಳಿದರು.


ಹಂಚಿಕೊಳ್ಳಿ

Leave a Reply

Your email address will not be published. Required fields are marked *