ಧಾರವಾಡ
‘ಭಗವಂತನ ನಾಮ ಸಂಕೀರ್ತನದ ಮಹಿಮೆಯನ್ನು ತಿಳಿಯಬೇಕು. ಭಗವಂತನ ಶಕ್ತಿ, ಸಾಮರ್ಥ್ಯ, ಭಕ್ತರ ಮೇಲಿನ ಪ್ರೀತಿ ಎಲ್ಲವನ್ನೂ ಶುಕಾಚಾರ್ಯರು ಪರಿಕ್ಷಿತನಿಗೆ ತಿಳಿಸಿಕೊಡುತ್ತಾರೆ. ಅವರವರ ಯೋಗ್ಯತೆಗೆ ತಕ್ಕಂತೆ ಪರಮಾತ್ಮ ಫಲ ಕೊಡುತ್ತಾನೆ. ಸಾಧನೆಗೆ ತಕ್ಕಂತೆ ಫಲವನ್ನು ಕೊಡುತ್ತಾನೆ. ಭಗವಂತ ಭಕ್ತಿಗೆ ಮೆಚ್ಚುತ್ತಾನೆ. ಶ್ರದ್ಧೆ, ಸಾಧನೆಗೆ ಮೆಚ್ಚಿ ಅದಕ್ಕೆ ಯೋಗ್ಯತಾನುಸಾರವಾಗಿ ಫಲ ಕೊಡುತ್ತಾನೆ. ದೇವರ ಸ್ಮರಣೆ ಮಾಡಿದರೆ ದೇವರು ಅನುಗ್ರಹ ಮಾಡುತ್ತಾನೆಯಾದರೂ, ದ್ವೇಷದಿಂದ ವ್ಯವಹಾರ ಮಾಡುವವರಿಗೆ ಭಗವಂತ ರಕ್ಷಣೆ ಮಾಡುತ್ತಾನೆ ಎಂದು ತಿಳಿಯಬಾರದು. ದೇವರ ದರ್ಶನಕ್ಕೆ ಬಂದವರಿಗೆ ಒಳಗೆ ಬಿಡದಿದ್ದಕ್ಕಾಗಿ, ಜಯ ವಿಜಯರು ಶಾಪಕ್ಕೆ ಒಳಗಾದದ್ದು ಉಂಟು ಎಂದು ಶ್ರೀ ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮತೀರ್ಥರು ಹೇಳಿದರು.
ಧಾರವಾಡ ಉತ್ತರಾದಿ ಮಠದ ನೂತನ ಕಟ್ಟಡ ಆವರಣದಲ್ಲಿ ೩೧ನೆಯ ಚಾತುರ್ಮಾಸ್ಯವನ್ನು ಕೈಗೊಂಡಿರುವ ಉತ್ತರಾದಿ ಮಠದ ಶ್ರೀಪಾದಂಗಳಾದ ಶ್ರೀ ಸತ್ಯಾತ್ಮತೀರ್ಥರು ನಾಲ್ವತ್ತಮೂರನೆಯ ದಿನದ ಆಶೀರ್ವಚನ ಸಂದೇಶದಲ್ಲಿ ಮೇಲಿನಂತೆ ತಿಳಿಸಿದರು.
ಮುಂದುವರೆದು ‘ಯಾವುದೂ ಶಾಶ್ವತ ಅಲ್ಲ. ಕಾಲ ಹೋಗುವ ಮುನ್ನ ಸಾಧನೆ ಮಾಡಿಕೊಳ್ಳಿ. ಎಲ್ಲಾ ದುಃಖವನ್ನು ದೂರ ಮಾಡಿ ಧ್ಯಾನ ಮೊದಲಾದ ಸಾಧನೆಗಳನ್ನು ಮಾಡಿಕೊಳ್ಳಬೇಕು. ಪರಮಾತ್ಮನ ಕೃಪೆ ಇದ್ದರೆ ಅರಣ್ಯದಲ್ಲಿ ಸಹ ಸುರಕ್ಷಿತವಾಗಿ ಬದುಕಬಹುದು. ಕೃಪೆ ಇಲ್ಲದೆ ಹೋದರೆ ಮನೆಯಲ್ಲಿ ಇದ್ದರೂ ಬದುಕಲು ಸಾಧ್ಯವಿಲ್ಲ. ಭಗವಂತನ ಕೃಪೆ ಇದ್ದರೆ ಎಲ್ಲಿದ್ದರೂ ಸುರಕ್ಷಿತವಾಗಿರುತ್ತದೆ. ನಮ್ಮ ಪುಣ್ಯ ಎಷ್ಟೇ ಇರಲಿ, ಅದನ್ನು ಭಗವಂತನಿಗೆ ಸಮರ್ಪಿಸಿದರೆ ಮಾತ್ರ ಸುರಕ್ಷಿತವಾಗಿ ಉಳಿಯುತ್ತದೆ. ಮೋಕ್ಷ ಅಥವಾ ದೇವರು ಸಿಗಬೇಕಾದರೆ ನಮ್ಮ ಸಾಧನೆಯ ಪುಣ್ಯ ಎಷ್ಟೇ ಇರಲಿ, ಅದನ್ನು ದೇವರಿಗೆ ಸಮರ್ಪಿಸಿದರೆ ಮಾತ್ರ ನಮ್ಮನ್ನು ಪ್ರತಿ ಜನ್ಮದಲ್ಲಿ ಭಗವಂತ ನಮ್ಮನ್ನು ಸುಖವಾಗಿ ಇಟ್ಟಿರುತ್ತಾನೆ. ಇಡೀ ಜಗತ್ತಿಗೆ ಮೂಲನಾದವನು ಪರಮಾತ್ಮ. ಅವನೇ ಮೂಲ ರಾಮ. ದೇವತೆಗಳು, ವೇದಗಳು, ಸಜ್ಜನರನ್ನು ಪೀಡೆ ಕೊಟ್ಟು, ದ್ವೇಷ ಮಾಡುವವನ ಅಂತ್ಯ ಸಮೀಪ ಬಂದಿದೆ ಎಂದೇ ಅರ್ಥ ಎಂದು ಶ್ರೀ ಸತ್ಯಾತ್ಮತೀರ್ಥ ಗುರುಗಳು ಹೇಳಿದರು.

