ಧಾರವಾಡ
ಪಂ. ಮಳಗಿ ಜಯತೀರ್ಥಾಚಾರ್ಯರು ಶ್ರೀ ಉತ್ತರಾದಿ ಮಠಕ್ಕೆ ಸಲ್ಲಿಸಿರುವ ಸೇವೆ ಹಾಗೂ ಅವರ ಧಾರ್ಮಿಕ, ಸಾಹಿತ್ಯಿಕ ಮತ್ತು ಪ್ರವಚನ ಕ್ಷೇತ್ರದ ಸಾಧನೆ ಅಪಾರವಾಗಿದೆ ಎಂದು ಶ್ರೀ ಉತ್ತರಾದಿ ಮಠದ ಪೀಠಾಧಿಪತಿ ಶ್ರೀ ಸತ್ಯಾತ್ಮತೀರ್ಥರು ಹೇಳಿದರು.
ನಗರದ ಉತ್ತರಾದಿ ಮಠದ ನೂತನ ಕಟ್ಟಡದ ಆವರಣದಲ್ಲಿ ನಡೆಯುತ್ತಿರುವ 31ನೇ ಚಾತುರ್ಮಾಸ್ಯದ 44ನೇ ದಿನದ ಕಾರ್ಯಕ್ರಮದಲ್ಲಿ ಪಂ. ಮಳಗಿ ಜಯತೀರ್ಥಾಚಾರ್ಯರ ಕುರಿತು ರಚಿಸಲಾದ ‘ಸುಮೇರು’ ಗ್ರಂಥವನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಪಂ. ಮಳಗಿ ಜಯತೀರ್ಥಾಚಾರ್ಯರು ಉತ್ತರಾದಿ ಮಠದ ಪರಂಪರೆ ಹಾಗೂ ಮಠದ ಕುರಿತು ಹಲವು ಮಹತ್ವದ ಗ್ರಂಥಗಳನ್ನು ರಚಿಸಿದ್ದಾರೆ. ಅವರ ಕೃತಿಗಳು ಪ್ರತಿಯೊಂದು ಮನೆಯಲ್ಲೂ ನಿತ್ಯ ಪಠಣಕ್ಕೆ ಯೋಗ್ಯವಾಗಿವೆ. ಶ್ರೇಷ್ಠ ಉಪನ್ಯಾಸಕರಾಗಿಯೂ ಅವರು ಅಪಾರ ಖ್ಯಾತಿ ಗಳಿಸಿದ್ದಾರೆ ಎಂದು ಶ್ರೀ ಸತ್ಯಾತ್ಮತೀರ್ಥರು ಹೇಳಿದರು.
ಅವರ ಸಾಧನೆ ಹಾಗೂ ಸೇವೆಯನ್ನು ದಾಖಲಿಸುವ ನಿಟ್ಟಿನಲ್ಲಿ ‘ಸುಮೇರು’ ಗ್ರಂಥ ಹೊರಬರುತ್ತಿರುವುದು ಸಂತಸದ ಸಂಗತಿ. ಪಂ. ಮಳಗಿ ಜಯತೀರ್ಥಾಚಾರ್ಯರ ಮಕ್ಕಳು ಹಾಗೂ ಶಿಷ್ಯರು ಒಟ್ಟಾಗಿ ಈ ಗ್ರಂಥವನ್ನು ಹೊರತರುತ್ತಿರುವುದು ವಿಶೇಷ ಸಂತೋಷ ತಂದಿದೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪಂ. ವಿದ್ಯಾಧೀಶ ಆಚಾರ್ಯರು, ಪಂ. ಮಳಗಿ ಜಯತೀರ್ಥಾಚಾರ್ಯರು ಉತ್ತರಾದಿ ಮಠದ ಎಲ್ಲ ಯತಿಗಳ ಮಹಿಮೆಯನ್ನು ತಮ್ಮ ಪ್ರವಚನಗಳ ಮೂಲಕ ಶ್ರೋತೃಗಳಿಗೆ ಪರಿಚಯಿಸುತ್ತಿದ್ದರು. ಅವರ ಪ್ರವಚನದ ಸಂದರ್ಭದಲ್ಲಿ ಯತಿಗಳ ಮಹಿಮೆ ಮತ್ತು ತತ್ತ್ವಜ್ಞಾನವನ್ನು ಅತ್ಯಂತ ಪರಿಣಾಮಕಾರಿಯಾಗಿ ಜನರಿಗೆ ತಲುಪಿಸುತ್ತಿದ್ದರು ಎಂದರು.
ಅವರ ವಾಕ್ಶೈಲಿ ಶ್ರೋತೃಗಳನ್ನು ಸೆಳೆಯುವಂತಿತ್ತು. ಇಂತಹ ಮಹಾನ್ ಸಾಧಕರ ಕುರಿತು ಎಷ್ಟು ಮಾತನಾಡಿದರೂ ಕಡಿಮೆಯೇ ಎಂದು ಪಂ. ವಿದ್ಯಾಧೀಶ ಆಚಾರ್ಯರು ಅಭಿಪ್ರಾಯಪಟ್ಟರು.
‘ಸುಮೇರು’ ಗ್ರಂಥವು ಪಂ. ಮಳಗಿ ಜಯತೀರ್ಥಾಚಾರ್ಯರ ಸಾಹಿತ್ಯಿಕ, ಧಾರ್ಮಿಕ ಹಾಗೂ ಪ್ರವಚನ ಕ್ಷೇತ್ರದ ಸಾಧನೆಗಳನ್ನು ದಾಖಲಿಸುವ ಮಹತ್ವದ ಕೃತಿಯಾಗಿ ಹೊರಹೊಮ್ಮಿದೆ.
