ಧಾರವಾಡ
ಹಿರಿಯ ಮನೋವೈದ್ಯ, ಖ್ಯಾತ ವೈದ್ಯ ಹಾಗೂ ಅಪಾರ ಅಭಿಮಾನಿಗಳ ಪ್ರೀತಿಗೆ ಪಾತ್ರರಾಗಿದ್ದ ಡಾ. ಆನಂದ ಪಾಂಡುರಂಗಿ ಅವರ ನಿಧನದ ಹಿನ್ನೆಲೆಯಲ್ಲಿ ಮಂಗಳವಾರ ಸಂಜೆ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ‘ಮನೋಚೇತನ ಭಾವನಮನ’ ಕಾರ್ಯಕ್ರಮ ನಡೆಯಿತು.
ಸಾವಿರಾರು ಅಭಿಮಾನಿಗಳು, ವೈದ್ಯಕೀಯ ಕ್ಷೇತ್ರದ ಗಣ್ಯರು, ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳು, ಸ್ನೇಹಿತರು ಹಾಗೂ ಹಿತೈಷಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಡಾ. ಆನಂದ ಪಾಂಡುರಂಗಿ ಅವರ ಸೇವೆ, ಸರಳತೆ, ಮಾನವೀಯ ಗುಣಗಳು ಹಾಗೂ ಸಮಾಜಮುಖಿ ಚಿಂತನೆಗಳನ್ನು ಸ್ಮರಿಸಿ ಭಾವಪೂರ್ಣ ನಮನ ಸಲ್ಲಿಸಿದರು.
ಮನೋವೈದ್ಯಕೀಯ ಕ್ಷೇತ್ರದಲ್ಲಿ ಅವರು ಸಲ್ಲಿಸಿದ ಗಣನೀಯ ಸೇವೆ, ಮಾನಸಿಕ ಆರೋಗ್ಯದ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ನಡೆಸಿದ ಪ್ರಯತ್ನಗಳು ಹಾಗೂ ರೋಗಿಗಳೊಂದಿಗೆ ಆತ್ಮೀಯವಾಗಿ ಬೆರೆತು ಅವರಲ್ಲಿ ಆತ್ಮವಿಶ್ವಾಸ ತುಂಬುತ್ತಿದ್ದ ರೀತಿಯನ್ನು ಕಾರ್ಯಕ್ರಮದಲ್ಲಿ ಸ್ಮರಿಸಲಾಯಿತು.
ಡಾ. ಆನಂದ ಪಾಂಡುರಂಗಿ ಅವರು ವೈದ್ಯರಾಗಿ ಮಾತ್ರವಲ್ಲದೆ, ಸಮಾಜದ ವಿವಿಧ ವರ್ಗಗಳೊಂದಿಗೆ ಆತ್ಮೀಯ ಸಂಬಂಧ ಹೊಂದಿದ್ದ ಮಾನವೀಯ ವ್ಯಕ್ತಿತ್ವವಾಗಿದ್ದರು. ಅವರ ಅಗಲಿಕೆ ವೈದ್ಯಕೀಯ ಕ್ಷೇತ್ರಕ್ಕೆ ಮಾತ್ರವಲ್ಲದೆ, ಧಾರವಾಡದ ಸಾಮಾಜಿಕ ಹಾಗೂ ಸಾಂಸ್ಕೃತಿಕ ವಲಯಕ್ಕೂ ತುಂಬಲಾರದ ನಷ್ಟವಾಗಿದೆ ಎಂದು ಅಭಿಮಾನಿಗಳು ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಗಣ್ಯರು ಹಾಗೂ ಅಭಿಮಾನಿಗಳು ಡಾ. ಆನಂದ ಪಾಂಡುರಂಗಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ಕುಟುಂಬದವರಿಗೆ ದುಃಖ ಭರಿಸುವ ಶಕ್ತಿ ದೊರೆಯಲಿ ಎಂದು ಪ್ರಾರ್ಥಿಸಿದರು.
ಡಂಬಳ-ಗದಗದ ಜಗದ್ಗುರು ಡಾ.ತೋಂಟದ ಸಿದ್ಧರಾಮ ಸ್ವಾಮೀಜಿ, ಬೈರನಟ್ಟಿಯ ಶಾಂತಲಿಂಗ ಸ್ವಾಮೀಜಿ, ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ ಹಾಗೂ ರಾಮಕೃಷ್ಣ ಆಶ್ರಮದ ವಿಜಯಾನಂದ ಸರಸ್ವತಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಕೇಂದ್ರ ಶಿಕ್ಷಣ ಸಚಿವ ಪ್ರಹ್ಲಾದ ಜೋಶಿ ಮಾತನಾಡಿ, ದೂರ ದೂರದಿಂದ ರೋಗಿಗಳು ಬರುತ್ತಿದ್ದರು. ತಮ್ಮ ಜೀವನದ ಕೊನೆಯವರೆಗೂ ರೋಗಿಗಳನ್ನು ನೋಡಿದರು. ತಮ್ಮ ಬಳಿ ರೋಗಿಗಳು ಕಡಿಮೆಯಾಗಬೇಕು ಎನ್ನುವ ಆಸೆಗಳನ್ನು ಹೊಂದಿದ್ದರು ಎಂದರು.
ಆರ್ಎಸ್ಸೆಸ್ ಅಖಿಲ ಭಾರತ ವ್ಯವಸ್ಥಾ ಪ್ರಮುಖ ಮಂಗೇಶ ಭೇಂಡೆ ಮಾತನಾಡಿ, ಮನುಷ್ಯ ಹೇಗೆ ಬದಬೇಕು, ಯಾವ ಉದ್ದೇಶಕ್ಕೆ ಬದಬೇಕು ಎನ್ನುವ ಆದರ್ಶ ಜೀವನ ನಡೆಸಿದವರು ಆನಂದ ಪಾಂಡುರಂಗಿಯವರದ್ದು, ಇಷ್ಟು ಬೇಗ ಅವರಿಗೆ ಶ್ರದ್ದಾಂಜಲಿ ಸಲ್ಲಿಸುವುದು ಬರುತ್ತದೆ ಎನ್ನುವುದು ಗೊತ್ತಿರಲಿಲ್ಲ. ಅವರದ್ದು ಸಾರ್ಥಕ ಜೀವನ. ಮನುಷ್ಯ ಎಷ್ಟು ದಿನ ಬದುಕಿದ ಎನ್ನುವುದು ಮುಖ್ಯವಲ್ಲ. ಹೇಗೆ ಬದುಕಿದ ಎನ್ನುವುದು ಮುಖ್ಯ. ಪರೋಪಕಾರಿ ಜೀವನ ಅವರದ್ದಾಗಿತ್ತು ಎಂದರು.
ಮಾಜಿ ಸಭಾಪತಿಗಳಾದ ಬಸವರಾಜ ಹೊರಟ್ಟಿ, ವೀರಣ್ಣ ಮತ್ತಿಕಟ್ಟಿ, ಶಾಸಕರಾದ ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ, ಎನ್.ಎಚ್. ಕೋನರಡ್ಡಿ, ಮಾಜಿ ಸಂಸದ ಪ್ರೊ. ಐ.ಜಿ. ಸನದಿ, ಭಾರತೀಯ ವೈದ್ಯಕೀಯ ಸಂಸ್ಥೆಯ ಧಾರವಾಡ ಘಟಕದ ಅಧ್ಯಕ್ಷ ಡಾ. ಜಗದೀಶ ನಿರಡಿ, ಪಂ. ಎಂ. ವೆಂಕಟೇಶಕುಮಾರ, ಪಂ. ಪ್ರಸನ್ನಾಚಾರ್ಯ ಕಟ್ಟಿ, ಆದಿತ್ಯ ಪಾಂಡುರಂಗಿ, ಸೇರಿದಂತೆ ಅನೇಕ ಗಣ್ಯರು ಪಾಲ್ಗೊಂಡಿದ್ದರು.

