ದೇವರು ಮರಣ ಮರೆಯದಿರು ಮನುಜ

ಹಂಚಿಕೊಳ್ಳಿ

ನರಗುಂದ
ಮಾನವ ಜೀವನ ದೇವರು ಕೊಟ್ಟ ಅಮೂಲ್ಯ ವರ. ಅರಿವುಳ್ಳ ಜನ್ಮದಲ್ಲಿ ಬಂದು ಶಿವಜ್ಞಾನ ಮತ್ತು ಗುರು ಕಾರುಣ್ಯ ಪಡೆದು ಬಾಳಬೇಕು. ಮಾನವ ಜೀವನದಲ್ಲಿ ದೇವರು ಮತ್ತು ಮರಣವನ್ನು ಎಂದಿಗೂ ಯಾರೂ ಮರೆಯಲಾಗದೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

ತಾಲೂಕಿನ ಕೊಣ್ಣೂರು ಗ್ರಾಮದ ಚಿಕ್ಕಮಠದಲ್ಲಿ ಶ್ರೀ ಜಗದ್ಗುರು ವಿಶ್ವಾರಾಧ್ಯ ಮೂರ್ತಿ ಪ್ರತಿಷ್ಠಾಪನೆ ಅಂಗವಾಗಿ ಜರುಗಿದ ಜನಜಾಗೃತಿ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.

ನಾವು ನಿಂತ ನೆಲ ಕುಡಿಯುವ ನೀರು ತಿನ್ನುವ ಅನ್ನ ಉಸಿರಾಡುವ ಗಾಳಿ ದೇವರು ಕೊಟ್ಟ ಅಮೂಲ್ಯ ಕೊಡುಗೆ. ಇವುಗಳಿಲ್ಲದೆ ಮನುಷ್ಯ ಬದುಕಿ ಬಾಳಲು ಸಾಧ್ಯವಾಗದು. ಭೌತಿಕ ಬದುಕಿನಲ್ಲಿ ಕೃತಜ್ಞತೆ ಹೇಳುವ ಮನುಷ್ಯ ಇಷ್ಟೆಲ್ಲ ಅಮೂಲ್ಯ ಸಂಪನ್ಮೂಲ ಕೊಟ್ಟಿರುವ ದೇವರನ್ನು ಸ್ಮರಿಸುವುದು ನಮ್ಮೆಲ್ಲರ ಧರ್ಮವಾಗಬೇಕು. ದೇವರು ಎಲ್ಲರಲ್ಲಿಯೂ ಇದ್ದಾನೆ. ಆದರೆ ದೇವರಲ್ಲಿ ಎಲ್ಲರೂ ಇಲ್ಲ. ಇದು ಸತ್ಯವಾದ ಮಾತು ಎಂದರು.

ಸಾನ್ನಿಧ್ಯ ವಹಿಸಿದ ಶ್ರೀ ಕಾಶಿ ಡಾ. ಮಲ್ಲಿಕಾರ್ಜುನ ವಿಶ್ವಾರಾಧ್ಯ ಜಗದ್ಗುರುಗಳು ತಮ್ಮ ಆಶೀರ್ವಚನದಲ್ಲಿ ಭೌತಿಕ ಬದುಕು ಸಮೃದ್ಧಗೊಂಡಂತೆ ಆಂತರಿಕ ಬದುಕು ಸಹ ಶ್ರೀಮಂತಗೊಳ್ಳಬೇಕು. ಧರ್ಮದ ಉದಾತ್ತವಾದ ಮೌಲ್ಯಗಳನ್ನು ಬದುಕಿನ ಆಚರಣೆಯಲ್ಲಿ ತಂದಾಗ ಮಾತ್ರ ಬದುಕು ಸಾರ್ಥಕವಾಗುತ್ತದೆ. ವೀರಶೈವ ಧರ್ಮದಲ್ಲಿ ಏನೆಲ್ಲ ಆಧ್ಯಾತ್ಮ ಸಂಪತ್ತು ಇದೆ. ಅದನ್ನು ಅರಿಯುವ ಮತ್ತು ಆಚರಿಸುವ ಮನೋ ಪ್ರವೃತ್ತಿ ಬೆಳೆದು ಬರಬೇಕೆಂದರು.

ನೇತೃತ್ವ ವಹಿಸಿದ ಚಿಕ್ಕಮಠದ ಶ್ರೀ ಸಿದ್ದಲಿಂಗ ಶಿವಾಚಾರ್ಯ ಸ್ವಾಮಿಗಳವರು ಮಾತನಾಡಿ, ಕೊಣ್ಣೂರ ಗ್ರಾಮದ ಭಕ್ತರ ಭಾಗ್ಯ ದೊಡ್ಡದು. ಬಹುದಿನಗಳ ಕನಸು ಇಂದು ನನಸಾಗಿರುವುದು ಸಂತೋಷ. ಗೌರಿ ಗಣೇಶನೊಂದಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಹಾಗೂ ಕಾಶಿ ಜಗದ್ಗುರುಗಳು ಕೊಣ್ಣೂರಿಗೆ ಆಗಮಿಸಿರುವುದು ನಮ್ಮೆಲ್ಲರ ಪುಣ್ಯದ ಫಲ ಎಂದರು.

ನರಗುಂದ, ಆಲಮೇಲ, ಮಮದಾಪುರ ಇನ್ನೂ ಅನೇಕ ಮಠಾಧೀಶರು ಪಾಲ್ಗೊಂಡಿದ್ದರು. ಸಮಾರಂಭಕ್ಕೂ ಮುನ್ನ ಗ್ರಾಮದಲ್ಲಿ ಉಭಯ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವ ಸಂಭ್ರಮದಿಂದ ಜರುಗಿತು. ಸಹಸ್ರಾರು ಭಕ್ತರು ಪಾಲ್ಗೊಂಡು ಉಭಯ ಜಗದ್ಗುರುಗಳ ಆಶೀರ್ವಾದಕ್ಕೆ ಪಾತ್ರರಾದರು. ಉತ್ಸವದಲ್ಲಿ ಕುಂಭ ಹೊತ್ತ ಮಹಿಳೆಯರು ಆರತಿ ಹಿಡಿದ ಸುಮಂಗಲೆಯರು ಭಜನೆ ವೀರಗಾಸೆ ಕಲಾವಿದರು ಪಾಲ್ಗೊಂಡಿದ್ದರು. ನಂತರ ಅನ್ನ ದಾಸೋಹ ಜರುಗಿತು.


ಹಂಚಿಕೊಳ್ಳಿ

Leave a Reply

Your email address will not be published. Required fields are marked *