ಉಣಕಲ್ಲ ಕೆರೆಗೆ ಪಿಶಾಚಿ ತಾವರೆ

ಹಂಚಿಕೊಳ್ಳಿ

ಹುಬ್ಬಳ್ಳಿ ಐತಿಹಾಸಿಕ ಉಣಕಲ್ಲ ಕೆರೆಗೆ ಪಿಶಾಚಿ ತಾವರೆ ಎಂಬ ಜಲಕಳೆ ಬೆಂಬಿಡದೇ ಕಾಡುತ್ತಿದೆ. ಕಳೆದ ಹತ್ತಾರು ವರ್ಷಗಳಿಂದ ಸಂಗ್ರಹವಾಗುತ್ತಿರುವ ಕಳೆಯ ವಿರುದ್ಧ ಹಲವಾರು ಬಾರಿ ಸಮರ ಸಾರಿದ್ದರೂ ಹೆಚ್ಚು ಪ್ರಯೋಜನಕ್ಕೆ ಬಂದಂತೆ ಕಾಣುತ್ತಿಲ್ಲ.
ಒಂದಿಷ್ಟು ದಿನ ಕಾಣದಾಗುವ ಜಲಕಳೆ ಆಗಾಗ ತನ್ನ ದರ್ಶನ ನೀಡುತ್ತಲೇ ಇದೆ. ಹಾಗಾಗಿ ನಿರ್ವಹಣೆ ಹೊಣೆ ಹೊತ್ತಿರುವ ಮಹಾನಗರ ಪಾಲಿಕೆಯು ಸದಾ ಒಂದು ಜೆಸಿಬಿ ಸಮೇತ ಜಲಕಳೆ ತೆರವು ಮಾಡಲು ಸಜ್ಜಾಗಿ ಕುಳಿತುಕೊಳ್ಳಬೇಕಾಗಿದೆ.


ದಶಕಗಳಿಂದ ಉಣಕಲ್ಲ ಕೆರೆ ನೀರು ಸಹ ಮಲೀನಗೊಂಡಿದೆ. ಅದರಲ್ಲಿನ ಆಮ್ಲಜನಕದ ಪ್ರಮಾಣ ಕಡಿಮೆಯಾಗಿ ಸುಲಭವಾಗಿ ಜಲಕಳೆ ಹುಟ್ಟಿಕೊಳ್ಳಲು ಹಾಗೂ ಹರಡಲು ಕಾರಣವಾಗಿದೆ ಎಂಬುದು ತಜ್ಞರ ಅಭಿಮತ.
ಆಮ್ಲಜನಕ ಪ್ರಮಾಣ ಕಡಿಮೆಯಾಗಲು ಮುಖ್ಯ ಕಾರಣ ಒಳಚರಂಡಿ ನೀರು ಕೆರೆ ಸೇರುವುದು. ಒಳಚರಂಡಿ ಕೊಳಚೆ ಸೇರುವುದನ್ನು ತಡೆಯಲು ಈಗಾಗಲೇ ಹತ್ತಾರು ಕೋಟಿ ರೂಪಾಯಿ ವ್ಯಯ ಮಾಡಲಾಗಿದೆ.
ಸ್ಮಾರ್ಟ್​ ಸಿಟಿ ಯೋಜನೆಯಡಿ ಉಣಕಲ್ಲ ಕೆರೆ ಹಾಗೂ ಉದ್ಯಾನದ ಸಮಗ್ರ ಅಭಿವೃದ್ಧಿಗೆ 51 ಕೋಟಿ ರೂ. ಯೋಜನೆ ರೂಪಿಸಿ ಜಾರಿ ಮಾಡಲಾಗಿದೆ. ಎರಡು ವರ್ಷದ ಹಿಂದೆ ಸಂರ್ಪೂಣ ಜಲಕಳೆ ನಿರ್ಮೂಲನೆ ಮಾಡಿ ಕೆರೆಯಲ್ಲಿ ಬೋಟಿಂಗ್​ ವ್ಯವಸ್ಥೆ, ಉದ್ಯಾನ ಅಭಿವೃದ್ಧಿ, ವಾಕಿಂಗ್​ ಪಾಥ್​ ಸೇರಿ ಹಲವು ಅಭಿವೃದ್ಧಿ ಕಾರ್ಯ ನಡೆಸಲಾಗಿದೆ.
ಆದರೆ, ಇದೀಗ ಮುಂಗಾರು ಪೂರ್ವ ಮಳೆ ಭರ್ಜರಿಯಾಗಿ ಬೀಳುತ್ತಿರುವದರ ಮಧ್ಯೆ ಜಲಕಳೆ ಮತ್ತೆ ತುಂಬಿಕೊಳ್ಳುತ್ತಿದೆ.
ಸ್ಮಾರ್ಟ್​ ಸಿಟಿ ಕಾಮಗಾರಿಗೂ ಮೊದಲು ಹೈದ್ರಾಬಾದ ಮೂಲದ ಕಂಪನಿಯೊಂದು ಕೋಟ್ಯಂತರ ರೂ. ಬಳಸಿ ಜಲಕಳೆ ನಿರ್ಮೂಲನೆಗೆ ಮುಂದಾಗಿತ್ತು. ಅದು ಸಹ ಅರ್ಧಕ್ಕೆ ನಿಂತಿತ್ತು.
ಹೀಗೆ ಹಲವಾರು ಬಾರಿ ಜಲಕಳೆ ನಿರ್ಮೂಲನೆಗೆ ಪ್ರಯತ್ನಗಳು ನಡೆದಿದೆ. ಎಷ್ಟೇ ಆದರೂ, ಜಲಕಳೆ ಮತ್ತೆ ವಕ್ಕರಿಸುತ್ತಿರುವುದು ಏಕೆ ಎಂಬ ಪ್ರಶ್ನೆ ಸಾಮಾನ್ಯ ಜನರಿಂದ ಕೇಳಿ ಬರುತ್ತಿದೆ.
ಮೂರ್ನಾಲ್ಕು ದಿನದಿಂದ ಕೆರೆಯ ಒಂದು ಬದಿ ಜಲಕಳೆ ಸಂಗ್ರಹಗೊಂಡಿದ್ದು, ಇತ್ತೀಚೆಗೆ ಆರಂಭಿಸಲಾಗಿರುವ ಬೋಟಿಂಗ್​ ಹಾಗೂ ಜಲಸಾಹಸ ಕ್ರೀಡೆಗಳಿಗೆ ತೊಂದರೆಯಾಗಿದೆ. ಕುಟುಂಬ, ಸ್ನೇಹಿತರೊಂದಿಗೆ ಬೋಟಿಂಗ್​ ತೆರಳುವ ದೊಡ್ಡ ಬೋಟ್​ ಜಲಕಳೆ ಮಧ್ಯೆ ಸಿಲುಕಿದೆ. ಆದರೂ, ಬೋಟಿಂಗ್​ ನಿಲ್ಲಿಸಿಲ್ಲ. ಪ್ರವಾಸಿಗರು ಬಂದಾಗ ಜಲಕಳೆ ಮಧ್ಯೆಯೇ ಬೋಟಿಂಗ್​ ಮಾಡಲಾಗುತ್ತಿದೆ.
ಕಳೆ ಒಂದಿಷ್ಟು ಅಡೆತಡೆ ಮಾಡಿದರೂ ಅದರಲ್ಲೇ ಪ್ರವಾಸಿಗರಿಗೆ ಅನುಕೂಲ ಮಾಡಿಕೊಡಲಾಗುತ್ತಿದೆ ಎಂದು ಬೋಟಿಂಗ್​ ನಿರ್ವಹಣೆ ಮಾಡುತ್ತಿರುವ ಸಿಬ್ಬಂದಿ ಹೇಳುತ್ತಾರೆ.

ಕೆರೆಯ ಇತಿಹಾಸ…
1893ರಲ್ಲಿ ಸರ್​ ಎಂ. ವಿಶ್ವೇಶ್ವರಯ್ಯ ಅವರು ಸುಮಾರು 270 ಎಕರೆ ವಿಸ್ತೀರ್ಣದಲ್ಲಿ ಉಣಕಲ್ಲ ಕೆರೆ ನಿಮಿರ್ಸಿದರು. ಸದ್ಯ ಇದರ ಸುತ್ತ ವಾಕಿಂಗ್​ ಪಾತ್​ ನಿಮಿರ್ಸಲಾಗಿದೆ. 4.5 ಕಿ.ಮೀ. ವಾಕಿಂಗ್​ ಪಾತ್​ ಇದೆ. ಸುತ್ತಲೂ ಲೈಟಿಂಗ್​ ಅಳವಡಿಸಲಾಗಿದೆ. ಒಟ್ಟಾರೆ, ಸೌಂದರೀಕರಣ ಮಾಡಿರುವುದರಿಂದ ನೋಡಲು ಅಂದವಾಗಿದೆ. ಇದರ ಮಧ್ಯೆ ಜಲಕಳೆ ಕಂಟಕವಾಗಿ ಕಾಣಿಸಿಕೊಳ್ಳುತ್ತಿದೆ.


ಹಂಚಿಕೊಳ್ಳಿ

Leave a Reply

Your email address will not be published. Required fields are marked *