ವೀರಭದ್ರಸ್ವಾಮಿ ಆದರ್ಶ ಅಳವಡಿಸಿಕೊಳ್ಳಿ

ಹಂಚಿಕೊಳ್ಳಿ

ಹುಬ್ಬಳ್ಳಿ
ಸಮಾಜದಲ್ಲಿ ದುಷ್ಟ ಶಕ್ತಿಗಳು ಅಸಮಾನತೆ ಅಶಾಂತಿ ಮತ್ತು ಮೌಲ್ಯಗಳ ಕುಸಿತ ಹೆಚ್ಚುತ್ತಿರುವ ಸಂದರ್ಭದಲ್ಲಿ ವೀರಭದ್ರನ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಅಗತ್ಯ. ಯುವಕರು ಧರ್ಮದೊಂದಿಗೆ ಆಧುನಿಕ ಶಿಕ್ಷಣ ಸಾಮಾಜಿಕ ಜವಾಬ್ದಾರಿ ಮತ್ತು ರಾಷ್ಟ್ರಪ್ರೇಮವನ್ನು ಬೆಳೆಸಿಕೊಳ್ಳಬೇಕಾದ ಅಗತ್ಯವಿದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

ಮಂಗಳವಾರ ವಿದ್ಯಾನಗರದ ಶ್ರೀ ರಂಭಾಪುರಿ ಜಗದ್ಗುರು ವೀರಗಂಗಾಧರ ಸಮುದಾಯ ಭವನದ ಆವರಣದಲ್ಲಿ ಜರುಗಿದ ಶ್ರೀ ವೀರಭದ್ರೇಶ್ವರ ಜಯಂತ್ಯುತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.

ವೀರಭದ್ರ ಎಂದರೆ ಕೇವಲ ಶಸ್ತ್ರಧಾರಿ ದೈವದ ರೂಪವಲ್ಲ. ಧರ್ಮ ರಕ್ಷಣೆ ದುಷ್ಟ ಶಕ್ತಿಗಳ ದಮನವೇ ವೀರಭದ್ರಸ್ವಾಮಿ ಅವತಾರದ ಮೂಲ ಉದ್ದೇಶವಾಗಿದೆ. ವಿವೇಕ ಧೈರ್ಯ ಶಿಸ್ತು ಕರ್ತವ್ಯನಿಷ್ಠೆ ಮತ್ತು ಧರ್ಮಬದ್ಧ ಜೀವನವೇ ನಿಜವಾದ ವೀರತ್ವ. ವೀರಭದ್ರೇಶ್ವರಸ್ವಾಮಿ ದೇವಾಲಯಗಳು ಕೇವಲ ಪೂಜಾ ಕೇಂದ್ರಗಳಲ್ಲ. ಅವು ನಮ್ಮ ಜನಪರ ಸಂಸ್ಕೃತಿ ಶೈವ ಪರಂಪರೆ ಕಲೆ ಆಚರಣೆ ಮತ್ತು ಸಮುದಾಯದ ಐತಿಹಾಸಿಕ ನೆನಪುಗಳನ್ನು ಉಳಿಸಿಕೊಂಡಿರುವ ಸಾಂಸ್ಕೃತಿಕ ಕೇಂದ್ರಗಳಾಗಿವೆ ಎಂದರು.

ಸದಾನಂದ ಡಂಗನವರ, ಚಂದ್ರಶೇಖರ ಜುಟ್ಟಲ, ವಿ.ಜಿ. ಪಾಟೀಲ, ಆರ್.ಎಂ. ಹಿರೇಮಠ, ಬಂಗಾರೇಶ ಹಿರೇಮಠ, ಬಸವರಾಜ ಸುಳ್ಳದ, ಡಾ. ರಾಮು ಮೂಲಗಿ, ಸಂಶಿ ಉಮೇಶ, ಸುಮಂಗಲಾ ಹಿರೇಮಠ ಮೊದಲಾದ ಗಣ್ಯರು ಪಾಲ್ಗೊಂಡಿದ್ದರು. ಮ್ಯಾನೇಜರ್ ಜಿ.ವಿ. ಹಿರೇಮಠ ಸ್ವಾಗತಿಸಿ ನಿರೂಪಿಸಿದರು.


ಹಂಚಿಕೊಳ್ಳಿ

Leave a Reply

Your email address will not be published. Required fields are marked *