ಆರೋಗ್ಯ ಪೂರ್ಣ ಸಮಾಜ ನಿರ್ಮಾಣಕ್ಕೆ ಧರ್ಮ ಜ್ಞಾನ ಮತ್ತು ಸಂಸ್ಕಾರ ಮುಖ್ಯ: ಶ್ರೀ ರಂಭಾಪುರಿ ಜಗದ್ಗುರುಗಳು

ಹಂಚಿಕೊಳ್ಳಿ

ಲಕ್ಷ್ಮೇಶ್ವರ
ಧರ್ಮದಲ್ಲಿ ಗುರುವಿಗೆ ಅತ್ಯಂತ ಮಹತ್ವದ ಸ್ಥಾನವಿದೆ. ಗುರು ಎಂದರೆ ಕೇವಲ ಜ್ಞಾನವನ್ನು ಬೋಧಿಸುವವರಲ್ಲ. ಶಿಷ್ಯನಿಗೆ ಸನ್ಮಾರ್ಗವನ್ನು ತೋರಿಸಿ ಸತ್ಯ ಧರ್ಮ ನೀತಿ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸುವ ಮಾರ್ಗದರ್ಶಕರು. ಸುಸಂಸ್ಕೃತ ಮತ್ತು ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೆ ಧರ್ಮ ಜ್ಞಾನ ಮತ್ತು ಸಂಸ್ಕಾರ ಬಹಳ ಮುಖ್ಯವೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

ಬುಧವಾರ ತಾಲೂಕಿನ ಶ್ರೀಮದ್ ರಂಭಾಪುರಿ ಶಾಖಾ ಮುಕ್ತಿಮಂದಿರ ಕ್ಷೇತ್ರದಲ್ಲಿ ಲಿಂ. ಶ್ರೀಮದ್ ರಂಭಾಪುರಿ ವೀರಗಂಗಾಧರ ಜಗದ್ಗುರುಗಳ ಲಿಂಗಾಂಗ ಸಾಮರಸ್ಯದ 44ನೇ ವರ್ಷದ ಪುಣ್ಯ ಸ್ಮರಣೋತ್ಸವ ಧರ್ಮ ಸಮಾರಂಭದ ಸಾನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.

ಗುರು ಎಂದರೆ ಅಜ್ಞಾನವೆಂಬ ಕತ್ತಲೆಯನ್ನು ಕಳೆದು ಜ್ಞಾನದ ಬೆಳಕನ್ನು ನೀಡುವುದು ಗುರುವಿನ ಧರ್ಮ. ತಮ್ಮ ನಡೆ ನುಡಿ ಆಚಾರ ವಿಚಾರ ಮತ್ತು ಸೇವಾ ಮನೋಭಾವದ ಮೂಲಕ ಸಮಾಜಕ್ಕೆ ಆದರ್ಶವಾಗುತ್ತಾರೆ. ಸಮಾಜದಲ್ಲಿ ಶಾಂತಿ ಸಾಮರಸ್ಯವನ್ನು ಸ್ಥಾಪಿಸುವುದು ಗುರುವಿನ ಮಹತ್ತರ ಕಾರ್ಯವಾಗಿದೆ. ಧರ್ಮದ ನಿಜವಾದ ತತ್ವಗಳನ್ನು ಜನರಿಗೆ ತಿಳಿಸುವುದು ಮತ್ತು ಬಡವರ ದುರ್ಬಲರ ಮಹಿಳೆಯರ ಏಳಿಗೆಗಾಗಿ ಶ್ರಮಿಸುವುದು ಗುರುವಿನ ಕರ್ತವ್ಯವಾಗಿದೆ ಎಂದರು.

ಶ್ರೀ ಗುರು ಧರ್ಮದ ದಾರಿದೀಪ. ಅವರ ಮಹಿಮೆ ಜ್ಞಾನದಲ್ಲಿ ಮಾತ್ರವಲ್ಲ ಸಮಾಜಕ್ಕೆ ನೀಡುವ ಬೋಧನೆ ಮತ್ತು ಉತ್ತಮ ಸಂಸ್ಕಾರಗಳಲ್ಲಿ ಅಡಗಿದೆ. ಗುರುವಿನ ಮಾರ್ಗದರ್ಶನದಿಂದ ವ್ಯಕ್ತಿಯ ಬದುಕು ಬೆಳಗುತ್ತದೆ. ಸಮಾಜದಲ್ಲಿ ಧರ್ಮ ಶಾಂತಿ ಮತ್ತು ಮಾನವೀಯತೆ ನೆಲೆಸುತ್ತದೆ. ಲಿಂ. ಶ್ರೀಮದ್ ರಂಭಾಪುರಿ ವೀರಗಂಗಾಧರ ಜಗದ್ಗುರುಗಳು ಭೂಲೋಕದ ಶಿವನಾಗಿ ಸಕಲ ಸಮುದಾಯಕ್ಕೆ ಆದರ್ಶ ಮೌಲ್ಯಗಳ ಮೂಲಕ ಧರ್ಮ ಮತ್ತು ಸಮಾಜವನ್ನು ಕಟ್ಟಿ ಬೆಳೆಸಿದ ಶ್ರೇಯಸ್ಸು ಅವರದು. ಶ್ರೀ ಜಗದ್ಗುರು ರೇಣುಕಾಚಾರ್ಯರ ಜೀವನ ದರ್ಶನದ ಅಮೂಲ್ಯ ವಿಚಾರಗಳನ್ನು ಜನಮನದ ಹೃದ್ಭೂಮಿಯಲ್ಲಿ ಬಿತ್ತಿ ಬೆಳೆದ ಯುಗಪುರುಷರು. ಅವರು ತೋರಿದ ದಾರಿ ಮಾಡಿದ ತಪಸ್ಸು ಮಾನವ ಸಂಕುಲವನ್ನು ಸದಾ ಕಾಪಾಡಲೆಂದು ಬಯಸಿದರು ಎಂದರು.

ಸಾನಿಧ್ಯ ವಹಿಸಿದ ಶ್ರೀ ಉಜ್ಜಯಿನಿ ಸಿದ್ದಲಿಂಗ ಜಗದ್ಗುರುಗಳು ತಮ್ಮ ಆಶೀರ್ವಚನದಲ್ಲಿ ಧರ್ಮ ಮತ್ತು ಆಧ್ಯಾತ್ಮಿಕ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸತ್ಯ ಶಾಂತಿ ಕರುಣೆ ಮತ್ತು ಮಾನವೀಯತೆಯನ್ನು ಪಾಲಿಸಬೇಕು. ಸಮಾಜದಲ್ಲಿ ಐಕ್ಯತೆ ಪರಸ್ಪರ ಗೌರವ ಮತ್ತು ಸಹಬಾಳ್ವೆ ಸದ್ಗುಣಗಳನ್ನು ಸಂಪಾದಿಸಿಕೊಳ್ಳಬೇಕು. ಶಿಕ್ಷಣ ಸಂಸ್ಕೃತಿ ಮತ್ತು ನೈತಿಕ ಮೌಲ್ಯಗಳನ್ನು ಬೆಳೆಸುವುದು ಗುರುವಿನ ಪರಮ ಧರ್ಮವಾಗಿದೆ. ಸಾಕ್ಷಾತ್ ಶಿವರೂಪಿಗಳಂತೆ ಕಂಗೊಳಿಸಿದ ಶ್ರೀಮದ್ ರಂಭಾಪುರಿ ವೀರಗಂಗಾಧರ ಜಗದ್ಗುರುಗಳು ಭಕ್ತರ ಬಾಳಿಗೆ ಭಗವಂತನಾಗಿ ಬೆಳಕು ತೋರಿದರು. ಯಾರೂ ಮಾಡದೆ ಇರುವ ಅದ್ಭುತ ಕಾರ್ಯಗಳನ್ನು ಮಾಡಿ ಜನಮನದಲ್ಲಿ ಸದಾ ಸ್ಮರಣೆಯರಾಗಿದ್ದಾರೆ ಎಂದರು.

ಮಾಜಿ ಮುಖ್ಯಮಂತ್ರಿ ಮತ್ತು ಹಾವೇರಿ ಲೋಕಸಭಾ ಸದಸ್ಯ ಬಸವರಾಜ ಬೊಮ್ಮಾಯಿ ಸಮಾರಂಭ ಉದ್ಘಾಟಿಸಿ ಮಾತನಾಡಿ, ಜಾತಿ ಮತಗಳ ಭೇದ ಭಾವಕ್ಕಿಂತ ಮಾನವೀಯತೆಗೆ ಆದ್ಯತೆ ನೀಡಬೇಕು. ಧರ್ಮ ನಮ್ಮ ಬದುಕಿಗೆ ಬೆಳಕಾಗಲಿ. ಭಕ್ತಿಯು ನಮ್ಮ ಮನಸ್ಸಿಗೆ ಶಾಂತಿಯನ್ನು ಕೊಡಲಿ. ಮಾನವೀಯತೆಯು ನಮ್ಮ ನಡೆನುಡಿಗಳಿಗೆ ಆಧಾರವಾಗಿರಲಿ. ಭಾರತದ ಧಾರ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಯಲ್ಲಿ ಮಠಗಳು ಹಾಗೂ ಪೀಠಗಳು ಮಹತ್ವದ ಸ್ಥಾನವನ್ನು ಹೊಂದಿವೆ. ಇವು ಕೇವಲ ಧಾರ್ಮಿಕ ಕೇಂದ್ರಗಳಲ್ಲದೆ ಸಮಾಜಕ್ಕೆ ನೀತಿ ಸಂಸ್ಕಾರ ಮಾನವೀಯತೆ ಮತ್ತು ಸೇವಾ ಮನೋಭಾವವನ್ನು ಬೋಧಿಸುವ ಮಾರ್ಗದರ್ಶಕ ಕೇಂದ್ರಗಳಾಗಿವೆ. ಲಿಂ. ಶ್ರೀ ರಂಭಾಪುರಿ ವೀರಗಂಗಾಧರ ಜಗದ್ಗುರುಗಳು ತಮ್ಮ ಶ್ರಮ ಸಾಧನೆ ಮತ್ತು ತಪಸ್ಸಿನ ಬಲದಿಂದ ಸಕಲ ಭಕ್ತರಿಗೆ ಸಾಮರಸ್ಯ ಸೌಹಾರ್ದತೆ ಬೆಳೆಸಿದ ಪರಮಾಚಾರ್ಯರು. ಅವರ ಕೃಪಾಶೀರ್ವಾದ ಎಲ್ಲರ ಮೇಲಿರಲಿ ಎಂದು ಪ್ರಾರ್ಥಿಸಿದರು.

ದಾವಣಗೆರೆ ಲೋಕಸಭಾ ಸದಸ್ಯ ಡಾ. ಪ್ರಭಾ ಮಲ್ಲಿಕಾರ್ಜುನ ಮಾತನಾಡಿ, ವೀರಶೈವ ಧರ್ಮ ಅತ್ಯಂತ ಪುರಾತನ ಧರ್ಮವಾಗಿದ್ದು ಸಕಲ ಜೀವಾತ್ಮರಿಗೆ ಒಳಿತನ್ನೆ ಮಾಡುತ್ತಾ ಬಂದಿದೆ. ಶ್ರೀ ಜಗದ್ಗುರು ರೇಣುಕಾದಿ ಪಂಚಾಚಾರ್ಯರ ಧಾರ್ಮಿಕ ಮತ್ತು ಸಾಮಾಜಿಕ ಚಿಂತನಗಳು ಬದುಕಿ ಬಾಳುವ ಜನಾಂಗಕ್ಕೆ ಆಶಾಕಿರಣ. ಲಿಂ. ಶ್ರೀಮದ್ ರಂಭಾಪುರಿ ವೀರಗಂಗಾಧರ ಜಗದ್ಗುರುಗಳು ತಮ್ಮ ತಪ:ಶಕ್ತಿಯಿಂದ ಬಾಳ ಬದುಕಿಗೆ ಬೆಳಕು ತೋರಿದ್ದನ್ನು ಎಂದಿಗೂ ಮರೆಯಲಾಗದು ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ವಿಧಾನ ಸಭೆಯ ಸಭಾಧ್ಯಕ್ಷ ಜಿ.ಎಸ್. ಪಾಟೀಲರು ಮಾತನಾಡಿ, ಧರ್ಮವು ಮಾನವ ಜೀವನಕ್ಕೆ ಶಿಸ್ತು ಸಂಯಮ ಮತ್ತು ಸನ್ನಡತೆಯನ್ನು ನೀಡುವ ಶಕ್ತಿಯಾಗಿದೆ. ಧಾರ್ಮಿಕ ಪರಂಪರೆಯ ಮುಖ್ಯ ಉದ್ದೇಶ ಮಾನವರಲ್ಲಿ ಸತ್ಯ ಪ್ರಾಮಾಣಿಕತೆ ದಯೆ ಕರುಣೆ ಮತ್ತು ಪರೋಪಕಾರದ ಗುಣಗಳನ್ನು ಬೆಳೆಸುವುದಾಗಿದೆ. ಯುವ ಜನತೆ ದೇಶದ ಭವಿಷ್ಯದ ಶಕ್ತಿಯಾಗಿದ್ದಾರೆ. ಅವರು ಶಿಕ್ಷಣ ಶಿಸ್ತು ಪರಿಶ್ರಮ ಪ್ರಾಮಾಣಿಕತೆ ಮತ್ತು ಸೇವಾ ಭಾವವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಬಾಳುವಂತಾಗಬೇಕು. ಈ ದಿಶೆಯಲ್ಲಿ ಶ್ರೀ ಶ್ರೀಮದ್ ರಂಭಾಪುರಿ ವೀರಗಂಗಾಧರ ಜಗದ್ಗುರುಗಳು ಅವಿರತ ಶ್ರಮಿಸಿ ಸಮಾಜಕ್ಕೆ ಅಮೂಲ್ಯ ಮಾರ್ಗದರ್ಶನ ಮಾಡಿದ್ದನ್ನು ಸ್ಮರಿಸಿದರು.

ಪ್ರಶಸ್ತಿ: ಮಲೆಬೆನ್ನೂರಿನ ಬಿ.ಎಂ. ನಂಜಯ್ಯನವರಿಗೆ ‘ಶ್ರೀ ರಂಭಾಪುರಿ ಜಗದ್ಗುರು ವೀರಗಂಗಾಧರ’ ಪ್ರಶಸ್ತಿಯನ್ನು ಉಭಯ ಜಗದ್ಗುರುಗಳು ದಯಪಾಲಿಸಿ ಶುಭ ಹಾರೈಸಿದರು. ಶಾಸಕ ಚಂದ್ರು ಲಮಾಣಿ, ಮಾಜಿ ಶಾಸಕ ಜಿ.ಎಸ್. ಗಡ್ಡದ್ದೇವರಮಠ ಪಾಲ್ಗೊಂಡಿದ್ದರು.

ನೇತೃತ್ವ ವಹಿಸಿದ ಮುಕ್ತಿಮಂದಿರ ಕ್ಷೇತ್ರದ ಪಟ್ಟಾಧ್ಯಕ್ಷರಾದ ವಿಮಲ ರೇಣುಕ ಮುಕ್ತಿಮುನಿ ಶಿವಾಚಾರ್ಯರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಮ್ಮಿಗನೂರು ಬಂಕಾಪುರ ಗಿರಿಸಾಗರ ಬಿಲ್ವಕೆರೂರು ಸುಳ್ಳ ಸಿದ್ದರಬೆಟ್ಟಕ್ಷೇತ್ರ ಮಳಲಿ ಸಂಸ್ಥಾನಮಠ ಹಿರೇವಡ್ಡಟ್ಟಿ ಕಲಾದಗಿ ಅರಗಿನದೋಣಿ ಕರೆವಾಡಿಮಠ ಇನ್ನೂ ಮೊದಲಾದ ಮಠಾಧೀಶರು ಮತ್ತು ಗಣ್ಯರು ಪಾಲ್ಗೊಂಡಿದ್ದರು.

ಸವಣೂರಿನ ಡಾ.ಗುರುಪಾದಯ್ಯ ಸಾಲಿಮಠ ನಿರೂಪಿಸಿದರು.
ಬಂದ ಎಲ್ಲ ಸದ್ಭಕ್ತರಿಗೆ ಮಲೆಬೆನ್ನೂರು ಶಿಷ್ಯ ಸದ್ಭಕ್ತರು ಅನ್ನ ದಾಸೋಹ ಸೇವೆ ಸಲ್ಲಿಸಿದರು. ಸಮಾರಂಭಕ್ಕೂ ಮುನ್ನ ಲಿಂ. ಶ್ರೀಮದ್ ರಂಭಾಪುರಿ ವೀರಗಂಗಾಧರ ಜಗದ್ಗುರುಗಳ ಸಂಭ್ರಮದ ಅಡ್ಡಪಲ್ಲಕ್ಕಿ ಮಹೋತ್ಸವ ಸಕಲ ವಾದ್ಯ ವೈಭವಗಳೊಂದಿಗೆ ಸಂಭ್ರಮದಿಂದ ಜರುಗಿತು.


ಹಂಚಿಕೊಳ್ಳಿ

Leave a Reply

Your email address will not be published. Required fields are marked *