ಧಾರವಾಡ: ಎಸ್ಡಿಎಂ ಎಂಜಿನಿಯರಿಂಗ್ ಕಾಲೇಜಿನ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಎಂಜಿನಿಯರಿಂಗ್ ವಿಭಾಗದ ವತಿಯಿಂದ ಎಐಸಿಟಿಇ ಪ್ರಾಯೋಜಿತ ಆರು ದಿನಗಳ ಅಟಲ್ ಫ್ಯಾಕಲ್ಟಿ ಡೆವಲಪ್ಮೆಂಟ್ ಕಾರ್ಯಕ್ರಮಕ್ಕೆ ಸೋಮವಾರ ಚಾಲನೆ ನೀಡಲಾಯಿತು.
ಸೆ.21ರಿಂದ 26ರವರೆಗೆ ನಡೆಯಲಿರುವ ಕಾರ್ಯಕ್ರಮವನ್ನು ಇನ್ಫೋಸಿಸ್ ಹುಬ್ಬಳ್ಳಿ ಕೇಂದ್ರದ ಮುಖ್ಯಸ್ಥ ಹಾಗೂ ಇನ್ಫೋಸಿಸ್ ಲಿಮಿಟೆಡ್ನ ಅಸೋಸಿಯೇಟ್ ಉಪಾಧ್ಯಕ್ಷ ಅಲ್ಲಾಬಕ್ಷ್ ಅಸಾದುಲ್ಲಾ ಉದ್ಘಾಟಿಸಿದರು. ಆಧುನಿಕ ಎಐ ತಂತ್ರಜ್ಞಾನಗಳ ಬಳಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸುಧಾರಿತ ತಂತ್ರಜ್ಞಾನ ಮತ್ತು ಉಷ್ಣ ನಿರ್ವಹಣೆಯ ಅಗತ್ಯವಿದೆ. ಎಐ ಆಧಾರಿತ ವ್ಯವಸ್ಥೆಗಳಲ್ಲಿ ಎಫ್ಪಿಜಿಎ ತಂತ್ರಜ್ಞಾನವು ವಿದ್ಯುತ್ ಉಳಿತಾಯಕ್ಕೆ ಸಹಕಾರಿಯಾಗುತ್ತದೆ ಎಂದು ಅವರು ಹೇಳಿದರು. ಎಐ ಅನ್ನು ಜವಾಬ್ದಾರಿಯುತವಾಗಿ ಬಳಸಬೇಕು ಎಂದರು.
ಐಐಟಿ ಧಾರವಾಡದ ಡೀನ್ ಹಾಗೂ ಅಸೋಸಿಯೇಟ್ ಪ್ರೊಫೆಸರ್ ಡಾ. ನವೀನ್ ಎಂ.ಬಿ. ಮಾತನಾಡಿ, ಎಐಯೊಂದಿಗೆ ಪರಿಣಾಮಕಾರಿಯಾಗಿ ಕೆಲಸ ಮಾಡಲು ಸಂಬಂಧಿಸಿದ ಕ್ಷೇತ್ರದ ಆಳವಾದ ಜ್ಞಾನ ಅಗತ್ಯ. ಎಐನ ನಿರಂತರ ಬೆಳವಣಿಗೆ ಮುಂದಿನ ದಿನಗಳಲ್ಲಿ ಸಮಾಜಕ್ಕೆ ಹಲವು ರೀತಿಯಲ್ಲಿ ಉಪಯುಕ್ತವಾಗಲಿದೆ ಎಂದು ಹೇಳಿದರು.
ಪ್ರಭಾರ ಪ್ರಾಂಶುಪಾಲೆ ಡಾ. ವಿಜಯಾ ಸಿ. ಅಧ್ಯಕ್ಷತೆ ವಹಿಸಿದ್ದರು. ಕಾರ್ಯಾಗಾರಗಳ ಮೂಲಕ ಅಧ್ಯಾಪಕರ ಜ್ಞಾನ ಹೆಚ್ಚಿಸುವುದು ಹಾಗೂ ಸಂಶೋಧನಾ ಸಹಯೋಗಕ್ಕೆ ಉತ್ತೇಜನ ನೀಡುವುದು ಮುಖ್ಯವಾಗಿದೆ. ಕಾರ್ಯಾಗಾರದಲ್ಲಿ ಕಲಿತ ವಿಷಯಗಳನ್ನು ಪಠ್ಯಕ್ರಮದ ಮೂಲಕ ವಿದ್ಯಾರ್ಥಿಗಳಿಗೆ ತಲುಪಿಸುವಂತೆ ಅವರು ಸಲಹೆ ನೀಡಿದರು.
ಕಾರ್ಯಾಗಾರದ ಸಂಯೋಜಕ ಡಾ. ಸತೀಶ್ ಎಸ್. ಭೈರಣ್ಣನವರ್ ಎಫ್ಡಿಪಿಯ ಉದ್ದೇಶಗಳನ್ನು ವಿವರಿಸಿದರು. ವಿಭಾಗದ ಮುಖ್ಯಸ್ಥ ಡಾ. ಎಸ್.ಎ. ಜೋಶಿ ಸ್ವಾಗತಿಸಿದರು. ಡಾ. ಎಸ್.ವಿ. ವಿರಕ್ತಮಠ ವಂದಿಸಿದರು. ಪ್ರೊ. ಭಾರ್ಗವಿ ಉಣಕಲ್ ಅತಿಥಿಗಳನ್ನು ಪರಿಚಯಿಸಿದರು. ಕುಮಾರಿ ವೈಷ್ಣವಿ ಪ್ರಾರ್ಥನೆ ಸಲ್ಲಿಸಿದರು. ಸಹ-ಸಂಯೋಜಕಿ ಪ್ರೊ. ರೇಷ್ಮಾ ನದಾಫ್ ಕಾರ್ಯಕ್ರಮ ನಿರೂಪಿಸಿದರು.
ಆರು ದಿನಗಳ ಈ ಕಾರ್ಯಕ್ರಮದಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ನ ಅನ್ವಯಿಕೆಗಳು ಹಾಗೂ ವೈದ್ಯಕೀಯ ಚಿತ್ರಗಳ ಮೂಲಕ ಗಡ್ಡೆ ಮತ್ತು ಗಾಯಗಳ ಪತ್ತೆಯಲ್ಲಿ ಎಫ್ಪಿಜಿಎ ತಂತ್ರಜ್ಞಾನದ ಬಳಕೆ ಕುರಿತು ಅಧ್ಯಾಪಕರಿಗೆ ತರಬೇತಿ ನೀಡಲಾಗುತ್ತದೆ.
