ಜಮಖಂಡಿ
ಭಾರತೀಯ ಸಂಸ್ಕೃತಿ ಧಾರ್ಮಿಕ ಪರಂಪರೆಯಲ್ಲಿ ಶಕ್ತಿಯ ಆರಾಧನೆಗೆ ಅತ್ಯಂತ ಪವಿತ್ರ ಸ್ಥಾನವಿದೆ. ಧರ್ಮದ ರಕ್ಷಣೆ ಮತ್ತು ಅಧರ್ಮದ ವಿನಾಶ ದಸರಾ ಧರ್ಮ ಸಮ್ಮೇಳನದ ಮೂಲ ಗುರಿಯಾಗಿದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರ ಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಶನಿವಾರ ದಸರಾ ಧರ್ಮ ಸಮ್ಮೇಳನಕ್ಕಾಗಿ ಜಮಖಂಡಿ ನಗರಕ್ಕೆ ಆಗಮಿಸಿದಾಗ ಭಕ್ತರು ಸಂಯೋಜಿಸಿದ ಶುಭಾಗಮನದ ಸ್ವಾಗತ ಸಮಾರಂಭದ ಸಾನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಜಗತ್ತಿನ ಸೃಷ್ಟಿ ಸ್ಥಿತಿ ಮತ್ತು ಲಯಕ್ಕೆ ಮೂಲವಾಗಿರುವ ಪರಾಶಕ್ತಿಯು ಜಗನ್ಮಾತೆಯಾಗಿ ಆದಿಶಕ್ತಿಯಾಗಿ ದುರ್ಗಿಯಾಗಿ ಚಾಮುಂಡೇಶ್ವರಿಯಾಗಿ ವಿವಿಧ ರೂಪಗಳಲ್ಲಿ ಪೂಜೆಗೊಳುತ್ತಾಳೆ. ಈ ಶಕ್ತಿಯೇ ಜೀವ ಜಗತ್ತಿನ ಚೈತನ್ಯ. ಸಕಲ ಜೀವಿಗಳ ಬದುಕಿನ ಆಧಾರ ಹಾಗೂ ಧರ್ಮ ರಕ್ಷಣೆಯ ಮಹಾನ್ ಸಂಕೇತವಾಗಿದೆ. ಜಮಖಂಡಿಯಲ್ಲಿ ಜರುಗಲಿರುವ ದಸರಾ ಧರ್ಮ ಸಮ್ಮೇಳನವು ಭಕ್ತಿ ಸಂಸ್ಕೃತಿ ಧರ್ಮ ನಿಷ್ಠೆ ಮತ್ತು ಜನಸಾಮರಸ್ಯದ ಮಹಾಪರ್ವವಾಗಿ ಕಂಗೊಳಿಸಲಿದೆ. ನಾಡಿನ ಜನಮನಗಳಲ್ಲಿ ಹೊಸ ಉತ್ಸಾಹ ನೋಡಿ ಬರಲಿದೆ. ಮನೆ ಮನಗಳಲ್ಲಿ ಮಂಗಳಕರ ಬೆಳಕನ್ನು ಹರಡಲಿದೆ ಎಂದರು.
ಸಮಾಜದಲ್ಲಿ ಶಾಂತಿ ಸಹ ಬಾಳ್ವೆ ಮತ್ತು ಸಾಮರಸ್ಯಗಳನ್ನು ವೃದ್ಧಿಸಲಿದೆ. ದಸರಾ ನಾಡಹಬ್ಬ ಕೇವಲ ಸಂಭ್ರಮ ಸಡಗರದ ಆಚರಣೆಯಲ್ಲ. ನಮ್ಮೊಳಗಿನ ದುರ್ಗುಣಗಳನ್ನು ಜಯಿಸುವ ಸಂಕಲ್ಪದ ದಿನಗಳಾಗಲಿ. ಕ್ರೋಧದ ಮೇಲೆ ಶಾಂತಿ ದ್ವೇಷದ ಮೇಲೆ ಪ್ರೀತಿ ಸ್ವಾರ್ಥದ ಮೇಲೆ ಸೇವೆ ಅಹಂಕಾರದ ಮೇಲೆ ವಿನಯ ಸತ್ಯದ ಚೈತನ್ಯವು ನಮ್ಮೆಲ್ಲರ ಬಾಳ ಬದುಕಿನಲ್ಲಿ ಮೂಡಿ ಬರಲಿದೆ. ಜಗನ್ಮಾತೆಯ ದಿವ್ಯ ಶಕ್ತಿಯು ರೈತರ ಬದುಕಿನಲ್ಲಿ ಸಮೃದ್ಧಿಯನ್ನು ವಿದ್ಯಾರ್ಥಿಗಳಲ್ಲಿ ಜ್ಞಾನವನ್ನು ಯುವಜನತೆಯಲ್ಲಿ ಸಾಧನೆಯ ಛಲವನ್ನು ಮಹಿಳೆಯರಲ್ಲಿ ಆತ್ಮವಿಶ್ವಾಸವನ್ನು ಹಿರಿಯರಲ್ಲಿ ಆರೋಗ್ಯವನ್ನು ಹಾಗೂ ಪ್ರತಿಯೊಬ್ಬರ ಹೃದಯದಲ್ಲಿ ಧರ್ಮ ನಿಷ್ಠೆ ಮತ್ತು ಮಾನವೀಯತೆಯ ಆದರ್ಶಗಳು ಬೆಳೆದು ಬರುವಂತಾಗಲಿ ಎಂದರು.
ಧರ್ಮವೇ ಸಮಾಜದ ಆಧಾರ. ಮಾನವೀಯತೆ ಜೀವನದ ಪರಮ ಮೌಲ್ಯ. ಧರ್ಮದ ಬೆಳಕು ಪ್ರಜ್ವಲಿಸಲಿ. ಸತ್ಯದ ಮಾರ್ಗ ಬಾಳಿಗೆ ಬೆಳಕು ತೋರಲಿ ಸಕಲ ಜೀವಿಗಳಿಗೂ ಒಳಿತಾಗಬೇಕೆಂಬುದೇ ದಸರಾ ಹಬ್ಬದ ಮೂಲ ಆಶಯವಾಗಿದೆ. ಶ್ರೀ ಜಗದ್ಗುರು ರೇಣುಕಾಚಾರ್ಯರ ವಿಶ್ವಬಂದುತ್ವದ ಸಾಮರಸ್ಯದ ವಿಚಾರಧಾರೆಗಳು ಜನಮನದ ವಿಕಾಸಕ್ಕೆ ಅಡಿಪಾಯವಾಗಿವೆ. ಜಮಖಂಡಿಯಲ್ಲಿ ಜರುಗಲಿರುವ ದಸರಾ ಧರ್ಮ ಸಮ್ಮೇಳನ ಈ ಹಿಂದಿನ ಎಲ್ಲ ದಸರಾ ಮಹೋತ್ಸವದ ದಾಖಲೆಗಳನ್ನು ಮೀರಿ ಬಹಳ ದೊಡ್ಡ ಪ್ರಮಾಣದಲ್ಲಿ ಜರುಗಲಿದೆ ಎಂಬ ಆತ್ಮವಿಶ್ವಾಸ ನಮಗಿದೆ ಎಂದು ಹರುಷ ವ್ಯಕ್ತಪಡಿಸಿದರು.
ಸ್ವಾಗತ ಶುಭಾಗಮನ ಸಮಾರಂಭದಲ್ಲಿ ಯಡಿಯೂರು ಕ್ಷೇತ್ರದ ರೇಣುಕ ಶಿವಾಚಾರ್ಯರು, ಜಮಖಂಡಿ ಕಲ್ಯಾಣ ಮಠದ ಗೌರಿಶಂಕರ ಶಿವಾಚಾರ್ಯರು, ಮುತ್ತಿನಕಂತೆ ಮಠದ ಶಿವಲಿಂಗ ಶಿವಾಚಾರ್ಯರು, ಮಳಲಿ ಮಠದ ಡಾ. ನಾಗಭೂಷಣ ಶಿವಾಚಾರ್ಯರು, ಸಂಗೊಳ್ಳಿ ಗುರುಲಿಂಗ ಶಿವಾಚಾರ್ಯರು, ಹೆಡಗಾಪುರ, ಕಮಡೊಳ್ಳಿ, ಕರ್ಜಗಿ, ಅಂಬಾಜೋಗಾಯಿ ಸೇರಿದಂತೆ ಹಲವಾರು ಮಠಾಧೀಶರು ಮತ್ತು ವಿವಿಧ ಸಮಾಜದ ಮುಖಂಡರು ಪಾಲ್ಗೊಂಡಿದ್ದರು.
ಜಮಖಂಡಿ ಕ್ಷೇತ್ರದ ಶಾಸಕರು ಸ್ವಾಗತ ಸಮಿತಿಯ ಮುಖ್ಯಸ್ಥರಾದ ನಾಡೋಜ ಜಗದೀಶ್ ಗುಡಗುಂಟಿ ಸರ್ವರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ 11 ದಿನಗಳ ಕಾಲ ಜರುಗಲಿರುವ ದಸರಾ ಧರ್ಮ ಸಮ್ಮೇಳನದಲ್ಲಿ ಎಲ್ಲರೂ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದರು.
ಜಮಖಂಡಿಗೆ ಆಗಮಿಸಿದ ಶ್ರೀ ರಂಭಾಪುರಿ ಜಗದ್ಗುರುಗಳನ್ನು ಸಾರೋಟ ಭವ್ಯ ಮೆರವಣಿಗೆ ಮೂಲಕ ಬರಮಾಡಿಕೊಂಡರು. ಮೆರವಣಿಗೆಯಲ್ಲಿ ವಿವಿಧ ಕಲಾತಂಡಗಳು ವೀರಗಾಸೆ ಭಜನಾ ಮಂಡಳಿ ಕುಂಭ ಹೊತ್ತ ಮಹಿಳೆ ಯರು ಆರತಿ ಹಿಡಿದ ಸುಮಂಗಲೆಯರು ಮತ್ತು ಉತ್ಸವ ಸಮಿತಿಯ ಪದಾಧಿಕಾರಿಗಳು ಪಾಲ್ಗೊಂಡಿದ್ದರು. ಸಮಾರಂಭದ ನಂತರ ಬಂದ ಎಲ್ಲ ಭಕ್ತರಿಗೂ ಪ್ರಸಾದ ವಿನಿಯೋಗ ಜರುಗಿತು.

