ಧಾರವಾಡ
ಗಾಂಧೀಜಿಯವರದ್ದು ಮಾದರಿ ವ್ಯಕ್ತಿತ್ವ. ಅವರ ಆದರ್ಶತೆ ಹಾಗೂ ತತ್ವಗಳ ಪಾಲನೆ ಇಂದಿನ ಅಗತ್ಯವಾಗಿದೆ ಎಂದು ಶ್ರೀ ಸಾಯಿ ಕಾಲೇಜಿನ ವ್ಯವಸ್ಥಾಪಕ ನಿರ್ದೇಶಕಿ ಡಾ. ವೀಣಾ ಬಿರಾದಾರ ಹೇಳಿದರು.
ನಗರದ ಸಿದ್ದವೀರ್ ಸತ್ಸಂಗ ಮತ್ತು ಬಾಸೆಲ್ ಮಿಷನ್ ಶಿಕ್ಷಕರ ತರಬೇತಿ ಕೇಂದ್ರದ ಆಶ್ರಯದಲ್ಲಿ ಶುಕ್ರವಾರ ನಡೆದ ಗಾಂಧೀಜಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಗಾಂಧೀಜಿ ಮನುಕುಲದ ಅಸ್ಮಿತೆ. ನಾವು ಶಿಕ್ಷಕರಾಗಬಹುದು, ಸಾಹಿತಿ ಅಗಬಹುದು, ರಾಜಕಾರಣಿ ಆಗಬಹುದು, ಅಧಿಕಾರಿ ಆಗಬಹುದು, ಆದರೆ ಗಾಂಧೀಜಿ ಆಗಲು ಸಾಧ್ಯವಿಲ್ಲ ಎಂದು ತಿಳಿಸಿದರು.
ಸಿದ್ದವೀರ್ ಸತ್ಸಂಗ ಸಂಸ್ಥಾಪಕ ಅಧ್ಯಕ್ಷ ಡಾ ನಿತಿನ್ ಚಂದ್ರ ಹತ್ತಿಕಾಳ ಮಾತನಾಡಿ, ಇಂದಿನ ಜನಾಂಗ ಗಾಂಧೀಜಿಯವರನ್ನು ಮರೆಯುತ್ತಿರುವ ಈ ಸಂದರ್ಭದಲ್ಲಿ ಗಾಂಧೀಜಿ ತತ್ವಗಳ ಬಗ್ಗೆ ಜಾಗೃತಿ ಮೂಡಿಸುವುದು ಅಗತ್ಯವಿದೆ ಎಂದರು.
ಇದೆ ಸಂದರ್ಭದಲ್ಲಿ ಸಮಾಜದ ವಿವಿಧ ರಂಗಗಳಲ್ಲಿ ಸಾಧನೆಗೈದ ಶಾಂತಮ್ಮ ಗುಜ್ಜಳ, ಡಾ. ತಾ.ಭ. ಚವ್ಹಾಣ, ರಾಜೇಶ್ವರಿ ಹತ್ತಿಕಾಳ, ಅನ್ನಪೂರ್ಣ ತಾಳಿಕೋಟಿ, ಬಿ.ಆರ್. ಜಕಾತಿ, ಏನ್.ಬಿ. ದ್ಯಾಪುರ ಅವರನ್ನು ಸನ್ಮಾನಿಸಲಾಯಿತು.
ಬಾಸೆಲ್ ಮಿಷನ್ ಶಿಕ್ಷಕರ ತರಬೇತಿ ಕೇಂದ್ರದ ಪ್ರಾಚಾರ್ಯ ಡಾ. ಸುಜಯ್ ಹೊಂಗಲ್ ಅಧ್ಯಕ್ಷತೆ ವಹಿಸಿದ್ದರು. ಗಣೇಶ್ ಕದಂ ಸ್ವಾಗತಿಸಿದರೆ, ವಿಲ್ಸನ್ ಮೈಲಿ ವರದಿ ವಾಚನ ಮಾಡಿದರು. ಬಸವರಾಜ್ ತಾಳಿಕೋಟಿ ಕಾರ್ಯಕ್ರಮ ನಿರ್ವಹಣೆ ಮಾಡಿದರು. ಆಶಾ ರಾಮಗಿರಿ ವಂದಿಸಿದರು. ರವೀಂದ್ರ ಕಟೋಡಿ, ಶಿರಿನ ಜಾಧವ, ಪ್ರಕಾಶ್ ಶೆಟ್ಟಿ, ಮುರುಗೇಶ್, ಪ್ರೊ ನೆಹಲಾನಿ, ದೀಪಕ್ ಪಾಟೀಲ್, ಚಿಂತನ್ ಎಚ್, ಗೋಪಾಲ್ ಸುಲಾಖೆ ಮೊದಲದವರು ಉಪಸ್ಥಿತರಿದ್ದರು.
