೪೪ ವರ್ಷಗಳ ನಂತರ ಭಾರತದ ವನಿತೆಯರಿಗೆ ಏಷ್ಯನ್ ಹಾಕಿ ಚಿನ್ನ, ೨೦೨೮ರ ಒಲಿಂಪಿಕ್ಸ್‌ಗೆ ನೇರ ಪ್ರವೇಶ

ಹಂಚಿಕೊಳ್ಳಿ

ನಾಗೋಯಾ(ಜಪಾನ)
ಏಷ್ಯನ್ ಕ್ರೀಡೆಗಳಲ್ಲಿ ಮಹಿಳಾ ಹಾಕಿ ಚಿನ್ನಕ್ಕಾಗಿ ೪೪ ವರ್ಷಗಳ ಕಾಯುವಿಕೆ ಕೊನೆಗೂ ಮುಗಿದಿದೆ.

ಶುಕ್ರವಾರ ನಡೆದ ಫೈನಲ್ಸ್ ನಲ್ಲಿ ಹಾಲಿ ಚಾಂಪಿಯನ್ ಚೀನದ ಎದುರು ೧-೦ ಗೋಲಿನ ರೋಚಕ ಗೆಲುವನ್ನು ದಾಖಲಿಸಿದ ಸಲಿಮಾ ಟೆಟೆ ಸಾರಥ್ಯದ ಭಾರತ ತಂಡ ಚಿನ್ನದ ಪದಕವನ್ನು ಬಾಚಿಕೊಂಡಿಲ್ಲದೇ ೨೦೨೮ರಲ್ಲಿ ಲಾಸ್ ಏಂಜೆಲ್ಸ್ ನಲ್ಲಿ ನಡೆಯಲಿರುವ ಒಲಿಂಪಿಕ್ಸ್ ‌ಗೂ ನೇರ ಪ್ರವೇಶ ದೊರಕಿಸಿಕೊಂಡಿತು.

ಪಂದ್ಯದ ೧೦ನೇ ನಿಮಿಷದಲ್ಲಿ ಲಾಲ್ರೆಮ್‌ಸಿಯಾಮಿ ಹ್ಮಾರ್ಜೊತೆ ಬಾರಿಸಿದ ಗೋಲು ಪಂದ್ಯದ ಹಣೆಬರಹ ಬರೆಯಿತು. ಸಲಿಮಾ ಟೆಟೆ ನೀಡಿದ ನಿಖರ ಪಾಸ್‌ನಲ್ಲಿ ಸಾಕ್ಷಿ ಮೂಲಕ ಚೆಂಡು ಪಡೆದ ಲಾಲ್ರೆಮ್‌ಸಿಯಾಮಿ ಅದ್ಭುತವಾದ ರಿವರ್ಸ್ ಹಿಟ್‌ನಲ್ಲಿ ಚೀನದ ಗೋಲು ಕೀಪರ್‌ಗೆ ಯಾವುದೇ ಅವಕಾಶ ನೀಡದೇ ಗೊಲು ಪೆಟ್ಟಿಗೆ ಸೇರಿಸಿ ಚಿನ್ನಕ್ಕೆ ಲಗ್ಗೆ ಹಾಕಿದರು.

ಭಾರತದ ಆರಂಭಿಕ ಮುನ್ನಡೆಯ ನಂತರ ಪಂದ್ಯದ ಮೇಲೆ ನಿಯಂತ್ರಣ ಪಡೆಯಲು ಯತ್ನಿಸಿದ ಚೀನ ಸತತ ಒತ್ತಡ ಹೇರಿತಾದರೂ ಭಾರತದ ರಕ್ಷಣಾ ಪಡೆ ಅಚಲವಾಗಿ ನಿಂತಿತು. ನವನೀತ್ ಕೌರ್ ಗೋಲ್ ಲೈನ್ ಮೇಲೆ ನಿಂತು ಚೀನದ ಪೆನಾಲ್ಟಿ ಕಾರ್ನರ್ ಪ್ರಯತ್ನವನ್ನು ತಡೆದರೆ, ಗೋಲು ಕೀಪರ್ ಸವಿತಾ ಪೂನಿಯಾ ಪಂದ್ಯದ ನಿರ್ಣಾಯಕ ಘಟ್ಟದಲ್ಲಿ ಎದುರಾಳಿಗಳಿಗೆ ದೊರೆತ ಪೆನಾಲ್ಟಿ ಸ್ಟೊಕ್’ನಲ್ಲಿ ಒಂದೇ ಕೈಯಲ್ಲಿ ಚೆಂಡನ್ನು ಅತ್ಯದ್ಭುತವಾಗಿ ತಡೆದು ತಂಡದ ಮುನ್ನಡೆಯನ್ನು ಕಾಪಾಡಿಕೊಂಡರು. ಕೊನೆಯ ಹಂತದಲ್ಲಿ ಚೀನ ತನ್ನ ಗೋಲು ಕೀಪರ್ ಹಿಂಪಡೆದು ಹೆಚ್ಚುವರಿ ಆಟಗಾರ್ತಿಯನ್ನು ಕಣಕ್ಕಿಳಿಸಿ ಸಮ ಗೋಲಿಗಾಗಿ ಸರ್ವ ಪ್ರಯತ್ನ ಮಾಡಿತಾದರೂ, ಭಾರತ ಸಂಯಮ ಕಳೆದುಕೊಳ್ಳದೇ ದಿಟ್ಟ ಆಟವಾಡಿ ಗೆಲುವನ್ನು ತನ್ನದಾಗಿಸಿಕೊಂಡಿತು.

೪೪ ವರ್ಷಗಳ ನಂತರ:
೧೯೮೨ರಲ್ಲಿ ನವದೆಹಲಿಯಲ್ಲಿ ಏಷ್ಯನ್ ಕ್ರೀಡೆಗಳಲ್ಲಿ ಮೊದಲ ಬಾರಿಗೆ ಹಾಕಿ ಸೇರ್ಪಡೆಯಾದಾಗ ಚಿನ್ನ ಗೆದ್ದಿದ್ದ ಭಾರತ ನಂತರ ೧೯೯೮ ಹಾಗೂ ೨೦೧೮ರಲ್ಲಿ ಮತ್ತೆ ಫೈನಲ್ ತಲುಪಿತ್ತಾದರೂ, ಬೆಳ್ಳಿ ಪದಕದಿಂದಲೇ ತೃಪ್ತಿ ಪಟ್ಟುಕೊಂಡಿತ್ತು. ಈಗ ೪೪ ವರ್ಷಗಳ ನಂತರ ಮರಳಿ ಚಿನ್ನ ಪಡೆಯುವ ಮೂಲಕ ಸಲಿಮಾ ಟೆಟೆ ಪಡೆ ಹೊಸ ಇತಿಹಾಸ ಬರೆದಿದೆ. ಪ್ರಸಕ್ತ ಕ್ರೀಡಾಕೂಟದಲ್ಲಿ ಎ’ ಗುಂಪಿನಲ್ಲಿದ್ದ ಭಾರತ, ಗುಂಪು ಮಟ್ಟದ ನಾಲ್ಕಕ್ಕೆ ನಾಲ್ಕೂ ಪಂದ್ಯಗಳನ್ನು ಜಯಿಸಿ ನಂತರ ಸೆಮಿಫೈನಲ್‌ನಲ್ಲೂ ದಕ್ಷಿಣ ಕೊರಿಯಾವನ್ನು ೨-೦ ಅಂತರದಿಂದ ಸೋಲಿಸಿತ್ತು.


ಹಂಚಿಕೊಳ್ಳಿ

Leave a Reply

Your email address will not be published. Required fields are marked *