ಬೆಂಗಳೂರು
ನಾಯಕಿ ವೈಷ್ಣವಿ ಹೊಸಳ್ಳಿ ಅವರ ಎರಡನೇ ಅರ್ಧ ಶತಕ ಹಾಗೂ ಮಾಯಕ್ಕಾ ಕೊರವಿ ಮತ್ತು ಸಹನಾ ರಾಮದುರ್ಗ ಅವರುಗಳ ಮಾರಕ ಬೌಲಿಂಗ್ ನೆರವಿನಿಂದ ಧಾರವಾಡ ವಲಯ ತಂಡ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ(ಕೆ.ಎಸ್.ಸಿ.ಎ.) ಆಶ್ರಯದಲ್ಲಿ ನಡೆದಿರುವ ೧೫ ವರ್ಷದವರೊಳಗಿನ ಬಾಲಕಿಯರ ಗ್ರಾಮೀಣ ಅಂತರ-ವಲಯ ಕ್ರಿಕೆಟ್ ಪಂದ್ಯಾವಳಿಯಲ್ಲಿ ಸತತ ಎರಡನೇ ಗೆಲುವು ದಾಖಲಿಸಿತು.
ನಗರದ ಹೊರ ವಲಯದಲ್ಲಿರುವ ಆಲೂರು-೨(ಗೋಲ್ಡನ್ ಓವಲ್) ಮೈದಾನದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಧಾರವಾಡ ವಲಯ ನಿಗದಿತ ೩೦ ಓವರ್ಗಳಲ್ಲಿ ೬ ವಿಕೆಟ್ಗಳಿಗೆ ೧೬೦ರ ಮೊತ್ತ ದಾಖಲಿಸಿದರೆ, ಉತ್ತರವಾಗಿ ತುಮಕೂರು ವಲಯ ೧೯.೩ ಓವರ್ಗಳಲ್ಲಿ ಕೇವಲ ೬೯ ರನ್ಗಳಿಗೆ ಸರ್ವಪತನ ಕಂಡು ಧಾರವಾಡ ವಲಯಕ್ಕೆ ೯೨ ರನ್ಗಳ ಗೆಲುವು ನೀಡಿತು.
ಮೊದಲು ೫೩ ಎಸೆತಗಳಲ್ಲಿ ೧೪ ಬೌಂಡರಿ ಹಾಗೂ ಒಂದು ಸಿಕ್ಸರ್ ಇದ್ದ ೭೦ ರನ್ ಸಿಡಿಸಿದ ವೈಷ್ಣವಿ ಹೊಸಳ್ಳಿ ಧಾರವಾಡ ವಲಯದ ಬ್ಯಾಟಿಂಗಿನಲ್ಲಿ ಮಿಂಚಿದರೆ, ನಂತರ ಬಲಗೈ ಮಧ್ಯಮ ವೇಗಿ ಮಾಯಕ್ಕ ಕೊರವಿ(೩ ಓವರ್ಗಳಲ್ಲಿ ೯ ರನ್ಗಳಿಗೆ ೪ ವಿಕೆಟ್) ಹಾಗೂ ಬಲಗೈ ಲೆಗ್-ಸ್ಪಿನ್ನರ್ ಸಹನಾ ರಾಮದುರ್ಗ(೧.೩ ಒವರ್ಗಳಲ್ಲಿ ೨ ರನ್ಗಳಿಗೆ ೨ ವಿಕೆಟ್) ತುಮಕೂರಿನ ಕುಸಿತಕ್ಕೆ ಕಾರಣರಾದರು. ಮಾಯಕ್ಕ-ಸಹನಾ ದಾಳಿಯೆದುರು ತುಮಕೂರಿನ ಕೊನೆಯ ಏಳು ವಿಕೆಟ್ಗಳು ಕೇವಲ ೧೩ ರನ್ಗಳಿಗೆ ಉದುರಿದವು. ಸೋನಾಕ್ಷಿ ಗುಡದೈಗೋಳ(೩೨, ೫೬ ಎಸೆತ, ೪ ಬೌಂಡರಿ) ವಿಜಯಿಗಳ ಪರ ಮಿಂಚಿದ ಇನ್ನೋರ್ವ ಬ್ಯಾಟರ್.
ಮೊದಲ ಪಂದ್ಯದಲ್ಲಿ ಮೈಸೂರಿನ ಎದುರು ೧೧೨ ರನ್ಗಳಿಂದ ಸೋತಿದ್ದ ಧಾರವಾಡ ವಲಯ ತಂಡ ನಂತರ ಚೇತರಿಸಿಕೊಂಡು ಎರಡನೇ ಪಂದ್ಯದಲ್ಲಿ ರಾಯಚೂರು ವಲಯದ ಎದುರು ೩ ರನ್ಗಳ ರೋಚಕ ಜಯ ಸಾಧಿಸಿತ್ತು.

