ಕಲಬುರಗಿ
ಈಶಾನ್ಯ ಶಿಕ್ಷಕರ ಕ್ಷೇತ್ರ ಚುನಾವಣೆಯ ಮತ ಎಣಿಕೆ ಕಾರ್ಯ ಮಂಗಳವಾರ ಗುಲಬರ್ಗಾ ವಿಶ್ವವಿದ್ಯಾಲಯ ಗಣಿತ ವಿಭಾಗದ ಭಾಸ್ಕರ್ ಹಾಲ್ ನಲ್ಲಿ ಶಾಂತಿಯುತವಾಗಿ ಜರುಗಿದ್ದು, ಪ್ರಥಮ ಪ್ರಾಶಸ್ತ್ಯ ಮತ ಎಣಿಕೆಯಲ್ಲಿಯೇ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಶಶೀಲ್ ಜಿ. ನಮೋಶಿ ಅವರು ವಿನ್ನಿಂಗ್ ಕೋಟಾಕ್ಕಿಂತ 1,415 ಮತಗಳು ಹೆಚ್ಚು ಪಡೆಯುವ ಮೂಲಕ ಸತತ ಎರಡನೇ ಬಾರಿ ಗೆಲುವು ಸಾಧಿಸಿದ್ದಾರೆ.
ಕ್ಷೇತ್ರದ ಒಟ್ಟು 34,784 ಮತದಾರರ ಪೈಕಿ ಚಲಾವಣೆಯಾದ 30,253 ಮತಗಳ ಪ್ರಥಮ ಪ್ರಾಶಸ್ತ್ಯ ಮತ ಎಣಿಕೆ ಕಾರ್ಯ ಒಟ್ಟು ಮೂರು ಸುತ್ತಿನಲ್ಲಿ ನಡೆದಿದ್ದು, ಬಿ.ಜೆ.ಪಿ ಅಭ್ಯರ್ಥಿ ಶಶೀಲ ಜಿ. ನಮೋಶಿ ಅವರು ಕಾಂಗ್ರೆಸ್ ಅಭ್ಯರ್ಥಿ ಶರಣಪ್ಪ ಮಟ್ಟೂರು ಅವರಿಗಿಂತ ಒಟ್ಟಾರೆ 3,297 ಮತಗಳ ಮುನ್ನಡೆ ಸಾಧಿಸುವುದರ ಜೊತೆಗೆ ವಿನ್ನಿಂಗ್ ಕೋಟಾ ತಲುಪಿದ ಕಾರಣ ವಿಜಯಶಾಲಿಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಜಹೀರಾ ನಸೀಮ್ ಅವರು ಘೋಷಿಸಿ ವಿಜೇತ ಅಭ್ಯರ್ಥಿಗೆ ಪ್ರಮಾಣ ಪತ್ರ ವಿತರಿಸಿದರು.
ಪ್ರಥಮ ಪ್ರಾಶಸ್ತ್ಯ ಮತ ಎಣಿಕೆಯ ಮೂರು ಸುತ್ತಿನಲ್ಲಿಯೂ ಶಶೀಲ್ ಜಿ. ನಮೋಶಿ ಅವರು ಮುನ್ನಡೆ ಸಾಧಿಸಿದ್ದು ವಿಶೇಷವಾಗಿತ್ತು. ಮತದಾನವಾದ 30,253 ಮತದಲ್ಲಿ 28,380 ಮತ ಸಿಂಧುವಾಗಿದ್ದು, 1,873 ಮತಗಳು ತಿರಸ್ಕೃತ ವಾಗಿವೆ. ಎಂ.ಎಲ್.ಸಿ ಆಯ್ಕೆಗೆ ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ಒಟ್ಟು ಸಿಂಧು ಮತಗಳಲ್ಲಿ ಶೇ.50+1 ರಂತೆ 14,191 ಮತಗಳು ವಿನ್ನಿಂಗ್ ಕೋಟಾ ಎಂದು ಘೋಷಿಸಿ, ಪ್ರಥಮ ಪ್ರಾಶಸ್ತ್ಯ ಮತ ಎಣಿಕೆಯಲ್ಲಿ 15,596 ಮತಗಳನ್ನು ಪಡೆದು ವಿನ್ನಿಂಗ್ ಕೋಟಾ ತಲುಪಿದ್ದರಿಂದ ಬಿ.ಜೆ.ಪಿ ಅಭ್ಯರ್ಥಿ ಶಶೀಲ್ ಜಿ. ನಮೋಶಿ ಅವರ ಗೆಲುವನ್ನು ಘೋಷಿಸಲಾಯಿತು.
ಅಭ್ಯರ್ಥಿಗಳು ಪಡೆದ ಮತಗಳ ವಿವರ:
ಪ್ರಥಮ ಪ್ರಾಶಸ್ತ್ಯ ಮತ ಎಣಿಕೆಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶರಣಪ್ಪ ಮಟ್ಟೂರ-12,299, ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಶಶೀಲ್ ಜಿ. ನಮೋಶಿ-15,596, ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಸಾಯಬಣ್ಣಾ ಜಮಾದಾರ-40, ಜನತಾ ದಳ(ಸಂಯುಕ್ತ) ಪಕ್ಷದ ಅಭ್ಯರ್ಥಿ ಶಂಕರೆಡ್ಡಿ ಪಾಟೀಲ-44 ಮತಗಳು ಪಡೆದರು.
ಅದೇ ರೀತಿ ಪಕ್ಷೇತರ ಅಭ್ಯರ್ಥಿಗಳಾದ ಕವಿರಾಜ ನಾಗಣ್ಣ ಮೋತಕಪಲ್ಲಿ- 49, ಟಿ.ಕೆ. ದಾಸರ- 06, ಮಹಬೂಬ್ ಮೊಹಮ್ಮದ ಖಾಜಾ ಹುಸೇನ್ ವಂಟೇಲಿ-10, ರಾಜಕುಮಾರ ಕೆ. ಕಲಬುರಗಿ-167, ರಾಜು ದೇವಪ್ಪ ಸೊನ್ನ-127, ಶರಣು ಪಿ. ಸುಗೂರು-13, ಶಶಿಧರ ಬಸವರಾಜ-04, ಶಿವಶಂಕರ ಅಣ್ಣಪ್ಪ ತರನಳ್ಳಿ-12 ಹಾಗೂ ಡಾ.ಸುರೇಶ ದಾವೀದಪ್ಪ ಅವರು 13 ಮತಗಳು ಪಡೆದಿದ್ದಾರೆ.
ಧನ್ಯವಾದ ತಿಳಿಸಿದ ಚುನಾವಣಾಧಿಕಾರಿ:
ಈಶಾನ್ಯ ಶಿಕ್ಷಕರ ಕ್ಷೇತ್ರ ಚುನಾವಣೆಯ ಮತದಾನ, ಮತ ಎಣಿಕೆ ಸೇರಿದಂತೆ ಒಟ್ಟಾರೆಯಾಗಿ ಮುಕ್ತ, ನ್ಯಾಯಸಮ್ಮತ ಹಾಗೂ ಪಾರದರ್ಶಕವಾಗಿ ಚುನಾವಣೆ ನಡೆಸಲು ಸಹಕರಿಸಿದ ಏಳು ಜಿಲ್ಲೆಯ ಜಿಲ್ಲಾಧಿಕಾರಿಗಳು, ಮಹಾನಗರ ಪಾಲಿಕೆ ಆಯುಕ್ತರು, ಸಹಾಯಕ ಆಯುಕ್ತರು, ತಹಶೀಲ್ದಾರರು, ಪೋಲಿಂಗ್, ಮತ ಎಣಿಕೆ ಅಧಿಕಾರಿ-ಸಿಬ್ಬಂದಿ ಹಾಗೂ ವಿಶೇಷವಾಗಿ ರಾಜಕೀಯ ಪಕ್ಷದ ಮುಖಂಡರು, ಅಭ್ಯರ್ಥಿಗಳು ಹಾಗೂ ಮತದಾರರಿಗೆ ಚುನಾವಣಾಧಿಕಾರಿ ಜಹೀರಾ ನಸೀಮ್ ಇದೇ ಸಂದರ್ಭದಲ್ಲಿ ಧನ್ಯವಾದ ತಿಳಿಸಿದರು.
ಚುನಾವಾಣಾ ವೀಕ್ಷಕ ಶಿವಕುಮಾರ ಕೆ.ಬಿ. ಅವರ ಸಮಕ್ಷಮ ಬೆಳಿಗ್ಗೆ 8 ಗಂಟೆಯಿಂದಲೆ ಆರಂಭವಾದ ಮತ ಎಣಿಕೆಯು ಸುಸೂತ್ರವಾಗಿ ನಡೆಯಿತು. ಕಾನೂನು ಸುವ್ಯವಸ್ಥೆ ಕಾಪಾಡಲು ನೂರಾರು ಸಂಖ್ಯೆಯಲ್ಲಿ ಅಗತ್ಯ ಪೊಲೀಸ್ ಭದ್ರತೆ ಕಲ್ಪಿಸಲಾಗಿತ್ತು.
ಕಲಬುರಗಿ ಡಿ.ಸಿ. ಇಕ್ರಂ ಶರೀಫ, ಯಾದಗಿರಿ ಡಿ.ಸಿ.ರಾಹುಲ ಪಾಂಡ್ವೆ, ಬೀದರ ಡಿ.ಸಿ. ಶಿಲ್ಪಾ ಶರ್ಮಾ, ರಾಯಚೂರು ಡಿ.ಸಿ. ಪೂವಿತಾ ಎಸ್., ಬಳ್ಳಾರಿ ಡಿ.ಸಿ ಡಾ.ಕೆ.ನಾಗೇಂದ್ರ ಪ್ರಸಾದ, ಕೊಪ್ಪಳ ಡಿ.ಸಿ. ಡಾ.ಸುರೇಶ ಬಿ. ಇಟ್ನಾಳ , ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ ಅವಿನಾಶ ಶಿಂಧೆ, ಕಲಬುರಗಿ ಜಿಲ್ಲಾ ಪಂಚಾಯತ್ ಸಿ.ಇ.ಓ ರಾಹುಲ ಸಂಕನೂರ ಸೇರಿದಂತೆ ಅನೇಕ ಅಧಿಕಾರಿಗಳು ಎಣಿಕೆ ಪ್ರಕ್ರಿಯಲ್ಲಿ ಭಾಗಿಯಾಗಿದ್ದರು.

