ದೇವದತ್ ಪಡಿಕ್ಕಲ್ ಅಜೇಯ ಅರ್ಧ ಶತಕ; ಇನ್ನಿಂಗ್ಸ್ ಸೋಲು ತಪ್ಪಿಸಿಕೊಳ್ಳಲು ಭಾರತ(ಎ) ತಂಡದ ಪರದಾಟ

ಹಂಚಿಕೊಳ್ಳಿ

ಲಿಂಕನ್
ಕನ್ನಡಿಗ ದೇವದತ್ ಪಡಿಕ್ಕಲ್ ಅವರ ದಿಟ್ಟ ಅಜೇಯ ಅರ್ಧ ಶತಕದ ಹೊರತಾಗಿಯೂ ಭಾರತ(ಎ) ತಂಡ ನ್ಯೂಜಿಲೆಂಡ್(ಎ) ತಂಡದ ಎದುರು ಇಲ್ಲಿ ನಡೆದಿರುವ ಮೊದಲ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ಇನ್ನಿಂಗ್ಸ್ ಸೋಲು ತಪ್ಪಿಸಿಕೊಳ್ಳಲು ಪರದಾಡುತ್ತಿದೆ.

ಪಂದ್ಯದ ಮೊದಲ ದಿನವಾದ ಶನಿವಾರದಂದು ಭಾರತ(ಎ) ತಂಡ ತನ್ನ ಮೊದಲ ಸರದಿಯಲ್ಲಿ ಕೇವಲ ೧೧೩ಕ್ಕೆ ಆಲೌಟಾದ ನಂತರ ನ್ಯೂಜಿಲೆಂಡ್ ನಾಯಕ ರೈಸ್ ಮಾರಿಯು(೭೬) ಹಾಗೂ ಡೀನ್ ಫಾಕ್ಸ್ ಕ್ರಾಫ್ಟ್(೫೧) ಅವರುಗಳ ಸಮಯೋಚಿತ ಅರ್ಧ ಶತಕಗಳ ಸಹಾಯದಿಂದ ತನ್ನ ಮೊದಲ ಸರದಿಯಲ್ಲಿ ೩೧೭ ರನ್ ಗಳಿಸಿ ೨೦೪ ರನ್‌ಗಳ ಬೃಹತ್ ಮುನ್ನಡೆ ಸಾಧಿಸಿತು. ಭಾರತದ ಪರ ಅಂಶುಲ್ ಕಂಬೋಜ್(೩/೫೨) ಮತ್ತು ಆಕಿಬ್ ನಬಿ(೩/೬೯) ತಲಾ ೩ ವಿಕೆಟ್ ಕಬಳಿಸಿದರೆ ವೇಗಿ ಆಕಾಶ್ ದೀಪ್(೨/೫೭) ಎರಡು ಯಶ ಕಂಡರು.

ನಂತರ ಎರಡನೇ ಸರದಿಯಲ್ಲೂ ಭಾರತಕ್ಕೆ ಪ್ರಾರಂಭದಲ್ಲೇ ಆಘಾತ ಕಾದಿತ್ತು. ಯಶಸ್ವಿ ಜೈಸ್ವಾಲ್ ಕೇವಲ ೫ ರನ್ ಗಳಿಸಿ ಗಂಟು ಮೂಟೆ ಕಟ್ಟಿದರೆ, ಕನ್ನಡಿಗ ಕೆ.ಎಲ್. ರಾಹುಲ್ ಬರೀ ೪ ರನ್ ಗಳಿಸಿ ಹಿಟ್ ವಿಕೆಟ್ ಆದರು. ಆದರೆ ಆಗ ಜೊತೆಗೂಡಿದ ದೇವದತ್ ಪಡಿಕ್ಕಲ್(ಬ್ಯಾಟಿಂಗ್ ೫೬, ೮೯ ಎಸೆತ, ೯ ಬೌಂಡರಿ) ಹಾಗೂ ಸಾಯಿ ಸುದರ್ಶನ್(ಬ್ಯಾಟಿಂಗ್ ೩೯, ೧೦೪ ಎಸೆತ, ೫ ಬೌಂಡರಿ) ಮುರಿಯದ ೩ನೇ ವಿಕೆಟ್‌ಗೆ ೧೮೮ ಎಸೆತಗಳಲ್ಲಿ ಅತ್ಯಮೂಲ್ಯ ೯೬ ರನ್ ಕೂಡಿಸಿ ಭಾರತದ ಮಾನ ಕಾಪಾಡುವ ಜವಾಬ್ದಾರಿ ಹೊತ್ತಿದ್ದಾರೆ.

ಎರಡನೇ ದಿನದಾಟದ ಕೊನೆಗೆ ಭಾರತ ತನ್ನ ಎರಡನೇ ಸರದಿಯಲ್ಲಿ ೨ ವಿಕೆಟ್‌ಗಳಿಗೆ ೧೦೬ರ ಮೊತ್ತ ತಲುಪಿದ್ದು ಹೀನಾಯ ಇನಿಂಗ್ಸ್ ಸೋಲು ತಪ್ಪಿಸಿಕೊಳ್ಳಲು ಇನ್ನೂ ೯೮ ರನ್ ಗಳಿಸಬೇಕಾದ ಸವಾಲನ್ನೆದುರಿಸುತ್ತಿದೆ,

* ಸಂಕ್ಷಿಪ್ತ ಸ್ಕೋರುಗಳು: ಭಾರತ(ಎ): ೩೯.೩ ಓವರ್‌ಗಳಲ್ಲಿ ೧೧೩ ಹಾಗೂ ೩೬ ಓವರ್‌ಗಳಲ್ಲಿ ೨ ವಿಕೆಟ್‌ಗಳಿಗೆ ೧೦೬; ನ್ಯೂಜಿಲೆಂಡ್(ಎ): ೬೮.೩ ಓವರ್‌ಗಳಲ್ಲಿ ೩೧೭.


ಹಂಚಿಕೊಳ್ಳಿ

Leave a Reply

Your email address will not be published. Required fields are marked *