ವಡೋದರಾ
ಭರ್ಜರಿ ಶತಕ ಸಿಡಿಸಿದ ಮಾಜಿ ನಾಯಕಿ ಹರ್ಮನ್ಪ್ರೀತ್ ಕೌರ್ ಹಾಗೂ ದೀಪ್ತಿ ಶರ್ಮಾ, ದಾಖಲೆಯ ೫ನೇ ವಿಕೆಟ್ ಜೊತೆಯಾಟದಲ್ಲೂ ಪಾಲ್ಗೊಳ್ಳುವುದರೊಂದಿಗೆ ಭಾರತ ಭಾನುವಾರ ರಾತ್ರಿ ನಡೆದ ಎರಡನೇ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಪ್ರವಾಸಿ ಜಿಂಬಾಬ್ವೆಯನ್ನು ೧೨೧ ರನ್ಗಳಿಂದ ಹಣಿಯಿತು.
ಇದರೊಂದಿಗೆ ಸ್ಮೃತಿ ಮಂಧಾನ ಪಡೆ ಮೂರು ಪಂದ್ಯಗಳ ಸರಣಿಯಲ್ಲಿ ೨-೦ ಗೆಲುವಿನ ಮುನ್ನಡೆ ಸಾಧಿಸಿತು.
ಬಿಸಿಎ ಸ್ಟೇಡಿಯಂನಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತ ನಿಗದಿತ ೫೦ ಓವರ್ಗಳಲ್ಲಿ ೬ ವಿಕೆಟ್ಗಳಿಗೆ ೩೨೮ರ ಬೃಹತ್ ಮೊತ್ತ ದಾಖಲಿಸಿದರೆ, ಉತ್ತರವಾಗಿ ಜಿಂಬಾಬ್ವೆ ೪೮.೫ ಓವರ್ಗಳಲ್ಲಿ ೨೦೭ಕ್ಕೆ ಸರ್ವಪತನ ಕಂಡಿತು.
ಆರಂಭದ ಆಘಾತ:
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ಭಾರತಕ್ಕೆ ಆಘಾತ ಕಾದಿತ್ತು. ನಾಯಕಿ ಸ್ಮೃತಿ ಮಂಧಾನ ತಾವೆದುರಿಸಿದ ಎರಡನೇ ಎಸೆತದಲ್ಲಿಯೇ ಸೊನ್ನೆ ಸುತ್ತಿದರೆ, ಶಫಾಲಿ ವರ್ಮಾ ೮ ಎಸೆತಗಳಲ್ಲಿ ಒಂದು ಬೌಂಡರಿಯಿದ್ದ ೮ ರನ್ ಗಳಿಸಿ ಪೆವಿಲಿಯನ್ನಿಗೆ ವಾಪಸಾದರು.
ಆಗ ಮೂರನೇ ವಿಕೆಟ್ಗೆ ಪ್ರತಿಕಾ ರಾವಲ್ ಜೊತೆ ಕೂಡಿದ ಮಾಜಿ ನಾಯಕಿ ಹರ್ಮನ್ಪ್ರೀತ್ ಕೌರ್ ೧೧೮ ಎಸೆತಗಳಲ್ಲಿ ೧೨೪ ಅತ್ಯಮೂಲ್ಯ ರನ್ ಗಳಿಸಿ ತಂಡಕ್ಕೆ ಚೇತರಿಕೆ ನೀಡಿದರು. ೬೭ ಎಸೆತಗಳನ್ನೆದುರಿಸಿ ೪ ಬೌಂಡರಿ ಹಾಗೂ ೨ ಸಿಕ್ಸರ್ಗಳಿದ್ದ ೬೧ ರನ್ ಬಾರಿಸಿದ ಪ್ರತಿಕಾ ರಾವಲ್ ೧೪೩ರ ಸ್ಕೋರಿಗೆ ಔಟಾದರೆ ಐದೇ ರನ್ಗಳ ನಂತರ ಈ ಪಂದ್ಯದಲ್ಲಾಡಲು ಅವಕಾಶ ಪಡೆದಿದ್ದ ತೇಜಲ್ ಹಸಬ್ನೀಸ್(೩, ೫ ಎಸೆತ) ವಿಕೆಟ್ ಒಪ್ಪಿಸಿ ಹೊರ ನಡೆದರು. ಆಗ ಭಾರತದ ಸ್ಕೋರು ೪ ವಿಕೆಟ್ಗಳಿಗೆ ೧೪೮.

ಹರ್ಮನ್-ದೀಪ್ತಿ ಜುಗಲಬಂದಿ
ಆಗ ಹರ್ಮನ್ಪ್ರೀತ್ ಕೌರ್ ಜೊತೆಗೂಡಿದ ದೀಪ್ತಿ ಶರ್ಮಾ ಎದುರಾಳಿ ಬೌಲರ್ಗಳನ್ನು ಚೆಂಡಾಡಿ ಹೊಸ ದಾಖಲೆಗಳನ್ನು ಬರೆದರು. ನಾಯಕತ್ವದ ಭಾರದಿಂದ ಹೊರ ಬಂದ ನಂತರ ಭರ್ಜರಿ ಲಯ ಕಂಡು ಕೊಂಡಿರುವ ಹರ್ಮನ್ಪ್ರೀತ್ ೧೨೧ ಎಸೆತಗಳಲ್ಲಿ ೧೫ ಬೌಂಡರಿಗಳಿದ್ದ ೧೨೬ ರನ್ ಸಿಡಿಸಿದರೆ, ದೀಪ್ತಿ ಶರ್ಮಾ ೮೬ ಎಸೆತಗಳಲ್ಲಿ ೧೫ ಬೌಂಡರಿಗಳಿದ್ದ ೧೦೬ ರನ್ ಹಣಿದು ಅಜೇಯರಾಗುಳಿದರು.
ಹರ್ಮನ್ ಪಾಲಿಗೆ ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಇದು ೮ನೇ ಶತಕ. ಇದರೊಂದಿಗೆ ಅವರು ಭಾರತದ ಪರ ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅತ್ಯಧಿಕ ಶತಕ ಗಳಿಸಿದ ಎರಡನೇಯವರಾದರು. ನಾಯಕಿ ಸ್ಮೃತಿ ಮಂಧಾನ ಒಟ್ಟು ೧೪ ಶತಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ ಏಳು ಶತಕ ಗಳಿಸಿರುವ ಮಾಜಿ ನಾಯಕಿ ಮಿಥಾಲಿ ರಾಜ್ ಈಗ ಮೂರನೇ ಸ್ಥಾನಕ್ಕಿಳಿದರು.
ಹರ್ಮನ್-ದೀಪ್ತಿ ನಡುವಿನ ಐದನೇ ವಿಕೆಟ್ ಜೊತೆಯಾಟ ೧೩೭ ಎಸೆತಗಳಲ್ಲಿ ೧೫೩ ರನ್ ಹೂಡಿಹಾಕಿ ಹೊಸ ದಾಖಲೆ ಬರೆಯಿತು. ೨೦೨೨ರ ವಿಶ್ವಕಪ್ನಲ್ಲಿ ಸ್ನೇಹ್ ರಾಣಾ ಹಾಗೂ ಪೂಜಾ ವಸ್ತಾçಕರ ನಡುವಿನ ೧೨೨ ರನ್ಗಳ ಜೊತೆಯಾಟ ೫ನೇ ವಿಕೆಟ್ಗೆ ಇದುವರೆಗಿನ ಹಳೆಯ ದಾಖಲೆಯಾಗಿತ್ತು. ದೀಪ್ತಿ ಶರ್ಮಾ ಸಹ ೬ನೇ ಕ್ರಮಾಂಕದಲ್ಲಿ ಶತಕ ಗಳಿಸಿದ ಮೊಟ್ಟ ಮೊದಲ ಮಹಿಳಾ ಕ್ರಿಕೆಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.(ಈ ಹಿಂದಿನ ಅತ್ಯಧಿಕ ಸ್ಕೋರು ರಿಚಾ ಘೋಷ್ ಅವರ ೯೪). ಜಿಂಬಾಬ್ವೆ ಪರ ನೊಂವೆಲ್ಲೊ ಸಿಬಾಂಡ(೨/೩೮) ಅತ್ಯಂತ ಯಶಸ್ವಿ ಬೌಲರ್.
ಮಿಂಚಿದ ವೈಷ್ಣವಿ-ದೀಪ್ತಿ:
ಇದಾದ ನಂತರ ಬ್ಯಾಟ್ ಮಾಡಿದ ಜಿಂಬಾಬ್ವೆ ಎಡಗೈ ಸ್ಪಿನರ್ ವೈಷ್ಣವಿ ಶರ್ಮಾ(೪/೩೯) ಹಾಗೂ ಆಫ್ ಬ್ರೇಕ್ ಬೌಲರ್ ದೀಪ್ತಿ ಶರ್ಮಾ(೩/೩೨) ಮಾರಕ ದಾಳಿಯೆದುರು ಪರದಾಡಿ ಮೊಡೆಸ್ಟರ್ ಮುಪಚಿಕ್ವಾ(೪೯, ೭೦ ಎಸೆತ, ೯ ಬೌಂಡರಿ), ಚಿಪೊ ಮುಗೆರಿ-ತಿರಿಪಾನೊ(೪೬, ೫೭ ಎಸೆತ, ೭ ಬೌಂಡರಿ), ಬಿಲವ್ಡ್ ಬಿಜಾ(೩೪, ೪೯ ಎಸೆತ, ೪ ಬೌಂಡರಿ), ಜೊಸೆಫೈನ್ ನ್ಕೊಮೊ(೨೦, ೩೬ ಎಸೆತ, ೨ ಬೌಂಡರಿ) ಹಾಗೂ ನಯಾಶಾ ಗ್ವಾಂಜುರಾ(೨೦, ೧೮ ಎಸೆತ, ೧ ಬೌಂಡರಿ, ೧ ಸಿಕ್ಸರ್) ಅವರುಗಳ ಪ್ರತಿರೋಧದ ಹೊರತಾಗಿಯೂ ೪೮.೫ ಓವರ್ಗಳಲ್ಲಿ ೨೦೭ಕ್ಕೆ ಆಲೌಟಾಯಿತು.
* ಸಂಕ್ಷಿಪ್ತ ಸ್ಕೋರುಗಳು: ಭಾರತ: ೫೦ ಓವರ್ಗಳಲ್ಲಿ ೬ ವಿಕೆಟ್ಗಳಿಗೆ ೩೨೮, ಜಿಂಬಾಬ್ವೆ: ೪೮.೫ ಓವರ್ಗಳಲ್ಲಿ ೨೦೭. ಫಲಿತಾಂಶ: ಭಾರತಕ್ಕೆ ೧೨೧ ರನ್ ಗೆಲುವು(೩ ಪಂದ್ಯಗಳ ಸರಣಿಯಲ್ಲಿ ೨-೦ ಮುನ್ನಡೆ).

