ಕಲ್ಲಿನಿಂದ ಮಂದಿರ ನಿರ್ಮಿಸೋಣ, ಸಂಸ್ಕಾರದಿಂದ ಸಮಾಜ ನಿರ್ಮಿಸೋಣ: ಶ್ರೀ ರಂಭಾಪುರಿ ಜಗದ್ಗುರುಗಳು

ಹಂಚಿಕೊಳ್ಳಿ

ದೇವರಹಿಪ್ಪರಗಿ
ಮಂದಿರದ ಶಿಲಾನ್ಯಾಸವು ಕೇವಲ ಕಟ್ಟಡ ನಿರ್ಮಾಣದ ಆರಂಭವಲ್ಲ. ಅದು ಧರ್ಮ, ಸಂಸ್ಕಾರ, ಸೇವೆ ಮತ್ತು ಸೌಹಾರ್ದದ ಹೊಸ ಯುಗಕ್ಕೆ ನಾಂದಿಯಾಗಬೇಕು. ಕಲ್ಲಿನಿಂದ ಮಂದಿರ ನಿರ್ಮಿಸುವುದರ ಜೊತೆಗೆ ಸಂಸ್ಕಾರದ ಮೂಲಕ ಸುಭದ್ರ ಸಮಾಜ ನಿರ್ಮಾಣವಾಗಬೇಕು ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು.

ತಾಲೂಕಿನ ಕೋರವಾರ ಗ್ರಾಮದ ಶ್ರೀ ಮಹಾಂತೇಶ್ವರ ಶಿಲಾಮಂಟಪದ ಅಡಿಗಲ್ಲು ಸಮಾರಂಭದಲ್ಲಿ ಆಶೀರ್ವಚನ ನೀಡಿ ಅವರು ಮಾತನಾಡಿದರು.

ಭಾರತೀಯ ಸಂಸ್ಕೃತಿಯಲ್ಲಿ ಮಂದಿರಗಳು ಪವಿತ್ರ ಸ್ಥಾನವನ್ನು ಹೊಂದಿವೆ. ಅವು ಕೇವಲ ಕಟ್ಟಡಗಳಲ್ಲ, ಸಂಸ್ಕಾರದ ಕೇಂದ್ರಗಳಾಗಿದ್ದು, ಭಕ್ತಿ, ಪರಂಪರೆ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸುವ ತಾಣಗಳಾಗಿವೆ. ಶಿಲಾಮಂಟಪದ ನಿರ್ಮಾಣವು ಧರ್ಮನಿಷ್ಠ ಸಮಾಜ ನಿರ್ಮಾಣಕ್ಕೂ ಪ್ರೇರಣೆಯಾಗಬೇಕು. ದಯೆ, ಸೇವೆ, ಸತ್ಯ, ಪ್ರಾಮಾಣಿಕತೆ ಹಾಗೂ ಪರೋಪಕಾರಕ್ಕೆ ಆದ್ಯತೆ ನೀಡಬೇಕು ಎಂದು ಅವರು ತಿಳಿಸಿದರು.
ಯುವ ಪೀಳಿಗೆಗೆ ನಮ್ಮ ಸಂಸ್ಕೃತಿ, ಪರಂಪರೆ ಮತ್ತು ನೈತಿಕ ಮೌಲ್ಯಗಳನ್ನು ಪರಿಚಯಿಸುವ ಕೇಂದ್ರಗಳಾಗಿ ಮಂದಿರಗಳು ರೂಪುಗೊಳ್ಳಬೇಕು ಎಂದು ಶ್ರೀಗಳು ಹೇಳಿದರು.

ಒಂದು ವರ್ಷದೊಳಗೆ ಶಿಲಾಮಂಟಪ ಪೂರ್ಣಗೊಳಿಸುವ ಗುರಿ
ಮಠಾಧ್ಯಕ್ಷರಾದ ಬಸವಲಿಂಗ ಶಿವಾಚಾರ್ಯರು ಮಾತನಾಡಿ, ಸಕಲ ಜೀವಾತ್ಮರ ಒಳಿತನ್ನು ಬಯಸುವ ಧರ್ಮ ಮತ್ತು ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿಯುವ ಸಂಸ್ಕೃತಿ ನಮ್ಮದು. ಶಿಲಾಮಂಟಪದ ನಿರ್ಮಾಣಕ್ಕೆ ಭಕ್ತರ ನೆರವು ಮತ್ತು ಸಹಕಾರ ಅಗತ್ಯವಾಗಿದ್ದು, ಮುಂದಿನ ದಿನಗಳಲ್ಲಿ ಮಂಟಪವನ್ನು ನಿರ್ಮಿಸಿ ಉದ್ಘಾಟನಾ ಸಮಾರಂಭಕ್ಕೆ ಪಂಚಪೀಠದ ಜಗದ್ಗುರುಗಳನ್ನು ಆಹ್ವಾನಿಸಲಾಗುವುದು ಎಂದು ಹೇಳಿದರು.

ಗುಳೇದಗುಡ್ಡದ ಒಪ್ಪತ್ತೇಶ್ವರ ಸ್ವಾಮಿಗಳು ಮಾತನಾಡಿ, ಧಾರ್ಮಿಕ ಪರಂಪರೆ ಕೇವಲ ಆಚರಣೆಗೆ ಸೀಮಿತವಾಗದೆ ಅದರ ಹಿಂದಿರುವ ತತ್ವಗಳು ಹಾಗೂ ಜೀವನ ಮೌಲ್ಯಗಳು ಮುಂದಿನ ಪೀಳಿಗೆಗೆ ತಲುಪಬೇಕು. ಅನ್ನದಾನ, ವಿದ್ಯಾದಾನ, ಆರೋಗ್ಯ ಸೇವೆ ಮತ್ತು ಪರಿಸರ ಸಂರಕ್ಷಣೆಯಂತಹ ಸೇವಾ ಕಾರ್ಯಗಳಿಗೆ ಶಿಲಾಮಂಟಪ ಪ್ರೇರಣಾ ಕೇಂದ್ರವಾಗಬೇಕು ಎಂದು ಆಶಿಸಿದರು.

ಕಾರ್ಯಕ್ರಮದಲ್ಲಿ ವಿವಿಧ ಮಠಾಧೀಶರು ಹಾಗೂ ಗಣ್ಯರು ಭಾಗವಹಿಸಿದ್ದರು. ಡಾ. ನಿಂಗನಗೌಡ ರಾಜಶೇಖರಗೌಡ ಪಾಟೀಲ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಭಕ್ತಿಗೀತೆ, ನಿರೂಪಣೆ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆದವು.


ಹಂಚಿಕೊಳ್ಳಿ

Leave a Reply

Your email address will not be published. Required fields are marked *