ಮೈಸೂರು
ಆಡಿದ ಮೊದಲಿನೆರಡೂ ಪಂದ್ಯಗಳಲ್ಲಿ ಲೀಡ್ ಬಿಟ್ಟುಕೊಟ್ಟು ಕೇವಲ ಎರಡೇ ಎರಡು ಪಾಯಿಂಟ್ ಗಳಿಸಿರುವ ಕಳೆದ ಸಲದ ರನ್ನರ್-ಅಪ್ ಕರ್ನಾಟಕ ಕೊನೆಗೂ ಹೊಸ ಋತುವಿನ ಮೊದಲ ಗೆಲುವಿನ ನಿರೀಕ್ಷೆಯಲ್ಲಿದೆ.
ಇಲ್ಲಿಯ ಎಸ್.ಡಿ.ಎನ್.ಆರ್.ಡಬ್ಲ್ಯೂ. ಮೈದಾನದಲ್ಲಿ ಮೊದಲ ಸರದಿಯಲ್ಲಿ ೨೯೬ ರನ್ಗಳ ಮುನ್ನಡೆ ಸಾಧಿಸಿದ ಕರ್ನಾಟಕ ಮೂರನೇ ದಿನದಾಟದ ಕೊನೆಯಲ್ಲಿ ತ್ರಿಪುರಾದ ಎರಡನೇ ಸರದಿಯಲ್ಲಿ ೯೮ರ ಮೊತ್ತದಲ್ಲಿ ಮೂರು ವಿಕೆಟ್ಗಳನ್ನು ಉರುಳಿಸಿದೆ.
ಗುರುವಾರ ಕೊನೆಯ ದಿನದ ಆಟ ಮಾತ್ರ ಬಾಕಿಯಿದ್ದು, ಏಳು ವಿಕೆಟ್ಗಳನ್ನು ಉಳಿಸಿಕೊಂಡಿರುವ ತ್ರಿಪುರಾ ಇನ್ನಿಂಗ್ಸ್ ಸೋಲು ತಪ್ಪಿಸಿಕೊಳ್ಳಲು ಇನ್ನೂ ೧೯೮ ರನ್ ಗಳಿಸಬೇಕಾದ ಕಠಿಣ ಸವಾಲನ್ನೆದುರಿಸುತ್ತಿದೆ.
ಅನೀಶ್ವರ್ ಗೌತಮ್ ಸೆಂಚುರಿ:
ಆರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ ಅನೀಶ್ವರ ಗೌತಮ್(೧೦೦, ೨೦೧ ಎಸೆತ, ೫ ಬೌಂಡರಿ, ೨ ಸಿಕ್ಸರ್) ಅವರ ಭರ್ಜರಿ ಶತಕ ಹಾಗೂ ಮನ್ವಂತ್ ಕುಮಾರ್(೫೧, ೭೫ ಎಸೆತ, ೬ ಬೌಂಡರಿ, ೨ ಸಿಕ್ಸರ್) ಮತ್ತು ರಿತೇಶ್ ಭಟ್ಕಳ್(ಔಟಾಗದೇ ೭೪, ೧೦೦ ಎಸೆತ, ೧೧ ಬೌಂಡರಿ, ೧ ಸಿಕ್ಸರ್) ಅವರುಗಳ ಸಮಯೋಚಿತ ಅರ್ಧ ಶತಕಗಳ ನೆರವಿನಿಂದ ಕರ್ನಾಟಕ ತನ್ನ ಮೊದಲ ಸರದಿಯಲ್ಲಿ ೯ ವಿಕೆಟ್ಗಳಿಗೆ ೪೯೦ ರನ್ ಪೇರಿಸಿ ಡಿಕ್ಲೇರ್ ಮಾಡಿಕೊಂಡಿತು.

ಅನೀಶ್ವರ ಗೌತಮ್ ಎಂಟನೇ ವಿಕೆಟ್ ಜೊತೆಯಾಟದಲ್ಲಿ ಮನ್ವಂತ್ಕುಮಾರ್ ಜೊತೆ ೧೨೪ ಎಸೆತಗಳಲ್ಲಿ ಕೂಡಿಹಾಕಿದ ೮೫ ರನ್ಗಳು ಹಾಗೂ ಒಂಭತ್ತನೇ ವಿಕೆಟ್ಗೆ ರಿತೇಶ್ ಭಟ್ಕಳ್ ಜೊತೆ ೧೭೭ ಎಸೆತಗಳಲ್ಲಿ ಪೇರಿಸಿದ ೧೦೭ ಅತ್ಯುಪಯುಕ್ತ ರನ್ಗಳು ಕರ್ನಾಟಕ ೨೯೬ ರನ್ಗಳ ಬೃಹತ್ ಮುನ್ನಡೆ ಪಡೆಯಲು ಕಾರಣವಾದವು.
ತ್ರಿಪುರಾ ಪರ ಪರ್ವೇಜ್ ಸುಲ್ತಾನ್(೩/೯೪), ಅಭಿಜಿತ್ ಸರ್ಕಾರ್(೩/೯೫) ಹಾಗೂ ಸಂದೀಪ್ ಸರ್ಕಾರ್(೩/೧೪೭) ಯಶಸ್ವಿ ಬೌಲರ್ಗಳು.
ನಂತರ ತನ್ನ ಎರಡನೇ ಸರದಿಯನ್ನಾರಂಭಿಸಿ ತ್ರಿಪುರಾ ಬಿಕ್ರಮ್ಕುಮಾರ್ ದಾಸ್(೨೬), ಬಾಬುಲ್ ಡೇ(೨೮) ಹಾಗೂ ಹೃತುರಾಜ್ ಘೋಷ್ ರಾಯ್(೧೩) ಅವರ ವಿಕೆಟ್ಗಳನ್ನು ಕಳೆದುಕೊಂಡಿದ್ದು ಶ್ರೀದಮ್ ಪಾಲ್(ಬ್ಯಾಟಿಂಗ್ ೩೦) ಹಾಗೂ ನೈಟ್ ವಾಚ್ಮನ್’ ಪರ್ವೇಜ್ ಸುಲ್ತಾನ್(ಬ್ಯಾಟಿಂಗ್ ೦) ಮೂರನೇ ದಿನದಾಟದ ಕೊನೆಯಲ್ಲಿ ಔಟಾಗದೇ ಉಳಿದಿದ್ದಾರೆ. ಕರ್ನಾಟಕದ ಪರ ಬೌಲಿಂಗ್ನಲ್ಲಿಕ್ಲಿಕ್’ ಆದ ನಾಯಕ ಶ್ರೇಯಸ್ ಗೋಪಾಲ್(೩/೨೫) ಬಿದ್ದ ಮೂರೂ ವಿಕೆಟ್ಗಳನ್ನು ಜೇಬಿಗಿಳಿಸಿಕೊಂಡಿದ್ದಾರೆ.
ಸಂಕ್ಷಿಪ್ತ ಸ್ಕೋರುಗಳು: ತ್ರಿಪುರಾ: ೮೨ ಓವರ್ಗಳಲ್ಲಿ ೧೯೪ ಹಾಗೂ ೩೮ ಓವರ್ಗಳಲ್ಲಿ ೩ ವಿಕೆಟ್ಗಳಿಗೆ ೯೮; ಕರ್ನಾಟಕ ೧೪೪ ಓವರ್ಗಳಲ್ಲಿ ೯ ವಿಕೆಟ್ಗಳಿಗೆ ೪೯೦ ಡಿಕ್ಲೇರ್ಡ್.

