ಶ್ರೀ ಕುಮಾರ ವಿರೂಪಾಕ್ಷ ಸ್ವಾಮೀಜಿಯವರ ಪಟ್ಟಾಧಿಕಾರದ ರಜತ ಮಹೋತ್ಸವ ಪ್ರಯುಕ್ತ ಡಾ.ಎಂ.ಎಂ.ಜೋಶಿ ನೇತ್ರ ವಿಜ್ಞಾನ ಸಂಸ್ಥೆಯ ಧಾರವಾಡ ಶಾಖೆಯಿಂದ ಶ್ರೀಮಠದ ಆವರಣದಲ್ಲಿ 100ಕ್ಕೂ ಹೆಚ್ಚು ಜನರ ನೇತ್ರ ತಪಾಸಣೆ ಮಾಡಲಾಯಿತು. ಇದಲ್ಲದೇ ಪತ್ರಿಕಾ ವಿತರಕರ ದಿನಾಚರಣೆ ಪ್ರಯುಕ್ತ ವಿತಕರನ್ನು ಶ್ರೀಮಠದಿಂದ ಸನ್ಮಾನಿಸಿ, ಗೌರವಿಸಿಲ್ಲದೇ ಒಕ್ಕೂಟದಿಂದ ಬ್ಯಾಗ್ ವಿತರಿಸಲಾಯಿತು.
ಧಾರವಾಡ
ಓದುಗರಿಗೆ ಪತ್ರಿಕೆ ಮುಟ್ಟಿಸುವ ಪತ್ರಿಕಾ ವಿತರಕರ ಸೇವಾ ಕಾರ್ಯ ಪರಿಗಣಿಸುವ ಮೂಲಕ ಬಹುದಿನಗಳ ಬೇಡಿಕೆಗಳಿಗೆ ಸರಕಾರ ಸ್ಪಂದಿಸುವ ಮೂಲಕ ಜೀವನಕ್ಕೆ ಆಧಾರವಾಗಬೇಕು ಎಂದು ಕರ್ನಾಟಕ ಪತ್ರಿಕಾ ವಿತರಕರ ಒಕ್ಕೂಟದ ಉಪಾಧ್ಯಕ್ಷ ಪ್ರಶಾಂತಕುಮಾರ ಎನ್. ಹೇಳಿದರು.
ತಾಲೂಕಿನ ಉಪ್ಪಿನಬೆಟಗೇರಿ ಗ್ರಾಮದ ಮೂರುಸಾವಿರ ವಿರಕ್ತಮಠದ ಆವರಣದಲ್ಲಿ ಶ್ರೀ ಕುಮಾರ ವಿರೂಪಾಕ್ಷ ಸ್ವಾಮೀಜಿಯವರ ಪಟ್ಟಾಧಿಕಾರದ ರಜತ ಮಹೋತ್ಸವ ಪ್ರಯುಕ್ತ ಉಪ್ಪಿನಬೆಟಗೇರಿ ಪತ್ರಿಕಾ ವಿತರಕರ ಒಕ್ಕೂಟವು
ಹಮ್ಮಿಕೊಂಡಿದ್ದ ಪತ್ರಿಕಾ ವಿತರಕರ ದಿನಾಚರಣೆ ಹಾಗೂ ಉಚಿತ ನೇತ್ರ ತಪಾಸಣೆ ಶಿಬಿರದಲ್ಲಿ ಪಾಲ್ಗೊಂಡು, ಅವರು ಮಾತನಾಡಿದರು.
ಪ್ರತಿನಿತ್ಯವೂ ತಪ್ಪದೇ ಮನೆ-ಮನೆಗಳಿಗೆ ಪತ್ರಿಕೆ ಹಂಚುವ ವಿತಕರಿಗೆ ಮೂಲಭೂತ ಸೌಕರ್ಯಗಳು ಸಿಗುತ್ತಿಲ್ಲ. ಕಡಿಮೆ ಗೌರವ ಧನದಲ್ಲಿ ಈ ಸೇವಾ ಕಾರ್ಯ ಮಾಡುತ್ತಿರುವ ಈ ವೃತ್ತಿಯ ಸಮುದಾಯಕ್ಕೂ ಆದ್ಯತೆ ನೀಡಿ, ಸೌಲಭ್ಯಗಳನ್ನು ಒದಗಿಸುವ ಕೆಲಸ ಆಗಬೇಕು. ಈ ನಿಟ್ಟಿನಲ್ಲಿ ಸರಕಾರ ಸ್ಪಂದಿಸಬೇಕಿದ್ದು, ಅದಕ್ಕಾಗಿ ಸಂಘಟನಾತ್ಮಕವಾಗಿ ಬಲಗೊಳ್ಳುವ ಅಗತ್ಯವೂ ಇದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಕರ್ನಾಟಕ ಬಯಲು ಸೀಮೆ ಪ್ರದೇಶಾಭಿವೃದ್ಧಿ ಮಂಡಳಿಯ ಮಾಜಿ ಅಧ್ಯಕ್ಷ ತವನಪ್ಪ ಅಷ್ಟಗಿ ಮಾತನಾಡಿ, ಬೆಳಗಿನ ಜಾವದಲ್ಲಿ ಓದುಗರಿಗೆ ಮೊದಲು ಪತ್ರಿಕೆ ಅವಶ್ಯಕ. ಇದಕ್ಕಾಗಿ ಪತ್ರಿಕೆ ವಿತರಕರು ಗಾಳಿ,ಮಳೆ, ಚಳಿ ಲೆಕ್ಕಿಸದೆ ಓದುಗರಿಗೆ ಚಹಾ ಸೇವನೆ ಮಾಡುವ ಮೊದಲೇ ಗ್ರಾಹಕರಿಗೆ ಪತ್ರಿಕೆ ಮುಟ್ಟಿಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಇಂದಿನ ಮಕ್ಕಳು ಆದಾಯಕ್ಕಿಂತ ಜ್ಞಾನ ಮತ್ತು ಸದೃಡ ಆರೋಗ್ಯಕ್ಕಾಗಿ ಉತ್ಸಾಹದಿಂದ ಪತ್ರಿಕೆ ಹಂಚಿಕೆ ಮಾಡುವ ಮಕ್ಕಳು ಮಾತ್ರ ಸಮಾಜಮುಖಿ ಕಾರ್ಯ ಮಾಡುತ್ತಿದೆ. ಸರಕಾರ ಪತ್ರಿಕೆ ವಿತರಕರ ಬೇಡಿಕೆಗಳಿಗೆ ಸ್ಪಂದಿಸಿ ಅವರ ಜೀವನೋಪಾಯಕ್ಕಾಗಿ ಮೂಲ ಸೌಲಭ್ಯ ಒದಗಿಸುವ ಕೆಲಸ ಮಾಡಬೇಕಿದ್ದು, ಈ ನಿಟ್ಟಿನಲ್ಲಿ ಅಗತ್ಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಸಾನಿಧ್ಯ ವಹಿಸಿದ್ದ ಶ್ರೀ ಕುಮಾರ ವಿರೂಪಾಕ್ಷ ಸ್ವಾಮೀಜಿ ಮಾತನಾಡಿ, ಮನುಷ್ಯನಿಗೆ ಕಣ್ಣು ಅಮೂಲ್ಯ. ನಿಷ್ಕಾಳಜಿ ವಹಿಸಿದರೆ ಅಂಧತ್ವದ ಅಪಾಯವುಂಟು. ಕಣ್ಣು ಪರೀಕ್ಷೆ ಪ್ರತಿಯೊಬ್ಬರ ಜವಾಬ್ದಾರಿ. ಹೀಗಾಗಿ ಉಚಿತ ನೇತ್ರ ಶಿಬಿರದಲ್ಲಿ ತಪಾಸಣೆಯಲ್ಲಿ ಪಾಲ್ಗೊಂಡು ಆರೋಗ್ಯ ರಕ್ಷಣೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಮುಖ್ಯ ಅತಿಥಿಯಾಗಿದ್ದ ಜಿಲ್ಲಾ ಪಂಚಾಯತ ಮಾಜಿ ಉಪಾಧ್ಯಕ್ಷ ನಿಜನಗೌಡ ಪಾಟೀಲ, ವಿದ್ಯಾದಾನ ಸಮಿತಿ ಆಡಳಿತ ಮಂಡಳಿ ಸದಸ್ಯ ಮಂಜುನಾಥ ಸಂಕಣ್ಣವರ, ಗ್ರಾಮ ಪಂಚಾಯಿತಿ ಆಡಳಿತಾಧಿಕಾರಿ ಚಂದ್ರು ಪೂಜಾರ, ಧಾರವಾಡ ಹೆಸ್ಕಾಂ ಉಪ ವಿಭಾಗಾಧಿಕಾರಿ ಈರಣ್ಣ ಸಿಂಧಗಿಮಠ, ಧಾರವಾಡದ ಡಾ.ಎಂ.ಎಂ.ಜೋಶಿ ನೇತ್ರ ವಿಜ್ಞಾನ ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ಹರೀಶ ಎಂ. ಮಾತನಾಡಿದರು.
ಧಾರವಾಡ ಪತ್ರಿಕಾ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪತ್ರಕರ್ತ ಶ್ರೀಶೈಲ ಗೌರಿಮಠ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ವರ್ಧಮಾನ ಅಷ್ಟಗಿ, ಗಂಗಾಧರ ಹೂಲಿ, ಮಂಜುನಾಥ ಹಿರೇಮಠ, ಪತ್ರಕರ್ತರಾದ ಶಶಿಧರ ಬುದ್ನಿ, ಶಿವಪ್ರಭು ಈಸರಗೊಂಡ, ರಮೇಶ ಓರಣಕರ, ಸುರೇಶಬಾಬು ತಳವಾರ, ಅಣ್ಣಪ್ಪ ನೀಲವಾಣಿ, ಕರಡಿಗುಡ್ಡ ಗ್ರಾಪಂ ಮಾಜಿ ಅಧ್ಯಕ್ಷ ಬಸಲಿಂಗಪ್ಪ ಮಂಗಳಗಟ್ಟಿ, ಶಿವರಾಮ ಶಿರಗುಪ್ಪಿ, ಸವಿತಾ ಮೊಗಯ್ಯನವರ ಸೇರಿದಂತೆ ಹಲವರು ಇದ್ದರು. ಮುಖ್ಯ ಶಿಕ್ಷಕ ಎಸ್.ಕೆ.ಕೊಡಿ ನಿರೂಪಿಸಿ, ವಂದಿಸಿದರು.

