ಧಾರವಾಡ
ಕರ್ನಾಟಕ ಇತಿಹಾಸ ಅಕಾದೆಮಿ ಕೊಡಮಾಡುವ ಪ್ರತಿಷ್ಠಿತ ‘ಇತಿಹಾಸ ಸಂಸ್ಕೃತಿ ಶ್ರೀ’ ಪ್ರಶಸ್ತಿಗೆ ನಗರದ ಕ.ವಿ.ವಿ. ಡಾ. ಆರ್.ಸಿ. ಹಿರೇಮಠ ಕನ್ನಡ ಅಧ್ಯಯನ ಪೀಠದ ವಿಶ್ರಾಂತ ಪ್ರಾಧ್ಯಾಪಕ, ಹಿರಿಯ ಸಂಸೋಧಕ ಹಾಗೂ ಶಾಸನತಜ್ಞ ಡಾ. ಜೆ.ಎಂ. ನಾಗಯ್ಯ ಭಾಜನರಾಗಿದ್ದಾರೆ. 50 ಸಾವಿರ ರೂ.ಗಳ ನಗದು ಪುರಸ್ಕಾರ ಹಾಗೂ ಸ್ಮರಣಿಕೆಯನ್ನು ಪ್ರಶಸ್ತಿ ಒಳಗೊಂಡಿದೆ.
ಬೀದರ ಜಿಲ್ಲೆ ಬಾಲ್ಕಿ ಹಿರೇಮಠದ ಶ್ರೀಚೆನ್ನಬಸವೇಶ್ವರ ಗುರುಕುಲ ಆವರಣದಲ್ಲಿರುವ ಅನುಭವ ಮಂಟಪದಲ್ಲಿ ಅಕ್ಟೋಬರ್ 23 ರಿಂದ 25 ರವರೆಗೆ ಜರುಗಲಿರುವ ಕರ್ನಾಟಕ ಇತಿಹಾಸ ಅಕಾದೆಮಿಯ ೪೦ನೆಯ ರಾಷ್ಟ್ರೀಯ ಸಮ್ಮೇಳನದಲ್ಲಿ ಶುಕ್ರವಾರ ಈ ಪ್ರಶಸ್ತಿ ಪ್ರದಾನ ನಡೆಯಲಿದೆ.
19 ಸಂಶೋಧನಾ ಕೃತಿಗಳನ್ನು ಹೊರತಂದಿರುವ ಡಾ. ನಾಗಯ್ಯ ಅವರು, 70 ಸಂಪ್ರಬಂಧಗಳನ್ನು ಹಾಗೂ ಕನ್ನಡ ಶಾಸನಗಳ ಸಂಶೋಧನೆಗೆ ಸಂಬಂಧಿಸಿದ ಹಲವಾರು ಮೌಲಿಕ ಕೃತಿಗಳನ್ನು ರಚಿಸಿದ್ದು, ಶಾಸನ ಸಂಶೋಧನೆ, ಇತಿಹಾಸ, ಕನ್ನಡ ಚರಿತ್ರೆ ಸೇರಿದಂತೆ ವಿಭಿನ್ನ ವಿಷಯಗಳ 20ಕ್ಕೂ ಹೆಚ್ಚು ಸಂಪಾದಿತ ಕೃತಿಗಳ ಪ್ರಕಟಣೆಯಲ್ಲಿ ಪ್ರಧಾನ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದಾರೆ. ಇವರ ‘ಆತ್ಮಬಲಿದಾನ’ ಸಂಶೋಧನಾ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾದೆಮಿ ಪ್ರಶಸ್ತಿ, ‘ಸಂದರ್ಭ ಸಾಹಿತ್ಯ’ ಕೃತಿಗೆ ಕಲಬುರ್ಗಿ ವಿ.ವಿ. ರಾಜ್ಯೋತ್ಸವ ಪ್ರಶಸ್ತಿ, ‘ಕರ್ನಾಟಕದ ಶಿಲ್ಪಗಳಲ್ಲಿ ಶಿವಶರಣರು’ ಕೃತಿಗೆ ಪ್ರೊ.ಸ.ಸ.ಮಾಳವಾಡ ಪ್ರಶಸ್ತಿ ಲಭಿಸಿವೆ.
ಈ ತನಕ 12 ವಿದ್ಯಾರ್ಥಿಗಳು ಇವರ ಮಾರ್ಗದರ್ಶನದಲ್ಲಿ ಪಿ.ಎಚ್ಡಿ. ಪದವಿ ಹಾಗೂ 6 ಜನರು ಎಂ.ಫಿಲ್. ಪದವಿ ಸಂಪಾದಿಸಿದ್ದಾರೆ. ರಾಜ್ಯ ವಿವಿಧ ವಿಶ್ವವಿದ್ಯಾಲಯಗಳ ವ್ಯಾಪ್ತಿಯಲ್ಲಿ ಹಲವಾರು ಶಾಸನ ಸಂಶೋಧನಾ ಕೈಂಕರ್ಯದ ಯೋಜನೆಗಳಲ್ಲಿ ಡಾ. ನಾಗಯ್ಯ ಕೆಲಸ ಮಾಡಿ ಪ್ರಶಸಂಸೆಗೆ ಪಾತ್ರರಾಗಿದ್ದಾರೆ.
