ಹುಬ್ಬಳ್ಳಿಯಿಂದ ಚಡಚಣ ತಾಲೂಕಿನ ಇಂಚಗೇರಿ ಮಠಕ್ಕೆ ಹೊರಟ ದಿಂಡಿ ಪಾದಯಾತ್ರಿಕರು ಉಪ್ಪಿನಬೆಟಗೇರಿಗೆ ಆಗಮಿಸಿದಾಗ ಭಕ್ತರು ಅದ್ದೂರಿ ಸ್ವಾಗತ ಕೋರಿದರು.
ಧಾರವಾಡ
ಜಾತ್ಯಾತೀತ ಪರಂಪರೆಯನ್ನು ಹೊಂದಿರುವ ಇಂಚಗೇರಿ ಮಠದಲ್ಲಿ ನಡೆಯುವ ಪ್ರತಿ ಕಾರ್ಯಕ್ರಮಗಳು ಭಾವೈಕ್ಯತೆ ಸಾರುತ್ತವೆ ಎಂದು ಕಲಬುರ್ಗಿ ಆಶ್ರಮದ ಶ್ರೀ ದತ್ತಾತ್ರೆಯ ಮಹಾರಾಜರು ಹೇಳಿದರು.
ಚಡಚಣ ತಾಲೂಕಿನ ಶ್ರೀಕ್ಷೇತ್ರ ಇಂಚಗೇರಿ ಮಠದಲ್ಲಿ ನ. 2 ರಂದು ಜರುಗುವ ಸಮರ್ಥ ಸದ್ಗುರು ಮಾಧವಾನಂದ ಪ್ರಭೂಜಿಗಳ ಜಯಂತಿಯಲ್ಲಿ ಪಾಲ್ಗೊಳ್ಳಲು ಹುಬ್ಬಳ್ಳಿ ನಗರದಿಂದ ಉಪ್ಪಿನಬೆಟಗೇರಿಗೆ ಆಗಮಿಸಿದ ದಿಂಡಿ ಪಾದಯಾತ್ರೆ ಭಕ್ತಾಧಿಗಳಿಂದ ಶಿವಮೂರ್ತೆಪ್ಪ ಬುದ್ನಿ ಅವರ ನಿವಾಸದಲ್ಲಿ ಜರುಗಿದ ಧರ್ಮ ಸಭೆಯಲ್ಲಿ ಅವರು ಮಾತನಾಡಿದರು.
ನಿಂಬರಗಿಯ ಶ್ರೀ ಗುರುಲಿಂಗ ಮಹಾರಾಜರಿಂದ ಸ್ಥಾಪಿತವಾದ
ಶ್ರೀಮಠವು ಪ್ರಸ್ತುತ ಪೀಠಾಧಿಪತಿಗಳಾಗಿರುವ ಶ್ರೀ ರೇವಣಸಿದ್ಧೇಶ್ವರ ಮಹಾರಾಜರು ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ರಾಜ್ಯ ಹಾಗೂ ಹೊರ ರಾಜ್ಯ ಸೇರಿ ಸುಮಾರು ನಾಲ್ಕು ಸಾವಿರಕ್ಕೂ ಅಧಿಕ ಶಾಖಾ ಮಠಗಳನ್ನು ಹೊಂದಿ ಶಾಂತಿ, ಅಹಿಂಸೆ, ಗೋಹತ್ಯಾ ನಿಷೇಧ, ಹಾಗೂ ಜಾತ್ಯಾತೀತ ಪರಂಪರೆ ಉಳಿಸಿ ಬೆಳೆಸಿಕೊಂಡು ಹೋಗುತ್ತಿದೆ ಎಂದರು.
ದೊಡವಾಡ ಗ್ರಾಮದ ಶಂಕ್ರೆಪ್ಪ ಮಹಾರಾಜರು ಮಾತನಾಡಿ, ಮಹಾತ್ಮಾ ಗಾಂಧಿ ಹಾಗೂ ಲಾಲ್ ಬಹಾದ್ದೂರ ಶಾಸ್ತ್ರೀಜಿ ಜಯಂತಿಯಂದು ಹುಬ್ಬಳ್ಳಿಯ ವಿದ್ಯಾನಗರದಲ್ಲಿರುವ ಗಿರೀಶ ಆಶ್ರಮದಲ್ಲಿ ಗೋಪಾಲ ಮಹಾರಾಜರು ಪಾದಯಾತ್ರೆಗೆ ಚಾಲನೆ ನೀಡಿದ್ದಾರೆ. ಒಂದು ತಿಂಗಳವರೆಗೆ ನಡೆಯುವ ಪಾದಯಾತ್ರೆಯ ಉದ್ದಕ್ಕೂ ಯಾತ್ರಿಕರಿಗೆ ಭಕ್ತರು ಊಟೋಪಚಾರ, ಫಲಾಹಾರ ಸೇವೆ ಹಾಗೂ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿ ಬೀಳ್ಕೊಡುತ್ತಾರೆ. ಅಸಂಖ್ಯಾತ ಭಕ್ತರನ್ನು ಹೊಂದಿರುವ ಇಂಚಗೇರಿ ಮಠದ ಜಾತ್ಯಾತೀತ ಪರಂಪರೆಯನ್ನು ಮನಗಂಡ ರಾಜ್ಯ ಸರಕಾರವು ಸುವರ್ಣ ಜರ್ನಾಟಕ ಏಕೀಕರಣ ಪ್ರಶಸ್ತಿ ಗೌರವಿಸಿದೆ. ಇಂತಹ ಪವಿತ್ರ ಕ್ಷೇತ್ರಕ್ಕೆ ಸದ್ಬಕ್ತರು ಭೇಟಿ ನೀಡಬೇಕು ಎಂದು ಮನವಿ ಮಾಡಿದರು.
ಶೆಟ್ಟೆಪ್ಪ ಮಹಾರಾಜರು ಮಾತನಾಡಿ, ಶ್ರೀ ಮಾಧವಾನಂದರು ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡು ದೇಶಕ್ಕಾಗಿ ಜೈಲು ಅನುಭವಿಸಿದ್ದರು. ನಂತರ ಗಿರಿಮಲ್ಲೇಶ್ವರ ಮಹಾರಾಜರ ಶಿಷ್ಯರಲ್ಲಿ ಗುರುತಿಸಿಕೊಂಡು ಇಂಚಗೇರಿಮಠದ ಪೀಠ ಅಲಂಕರಿಸಿದರು. ಜಾತಿಯ ಪಿಡುಗು ಹೋಗಲಾಡಿಸಲು 18 ಸಾವಿರ ಅಂತರ್ಜಾತಿ ವಿವಾಹ ಮಾಡುವ ಮೂಲಕ ಭಾವೈಕ್ಯತೆ ಸಾರಿದ್ದರು. ಅವರ ಮಾರ್ಗದಲ್ಲಿ ನಡೆಯುತ್ತಿರುವ ಶ್ರೀ ರೇವಣಸಿದ್ಧೇಶ್ವರ ಮಹಾರಾಜರು ಸಾಮೂಹಿಕ ಬೇಸಾಯ, ಸಹಪಂಕ್ತಿ ಭೋಜನದ ಮೂಲಕ ಸಾಮರಸ್ಯಕ್ಕೆ ಸಹಕಾರ ನೀಡುತ್ತಿದ್ದಾರೆ ಎಂದರು.
ಈ ವೇಳೆ ಪಾದಯಾತ್ರಿಕರಿಗೆ ಶಿವಮೂರ್ತೆಪ್ಪ ಬುದ್ನಿ, ರಾಚೋಟಿ ತೊಗ್ಗಿ, ಹವಳಪ್ಪ ಮೇದಾರ ಅವರ ನಿವಾಸದಲ್ಲಿ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು. ಈ ಸಂದರ್ಭದಲ್ಲಿ ನೀಲವ್ವ ಬುದ್ನಿ, ರಾಮಣ್ಣ ಬುದ್ನಿ, ಶಂಕರ ಓರಣಕರ, ಅಣ್ಣಪ್ಪ ನೀಲವಾಣಿ, ಶಿವಗಂಗವ್ವ ಬುದ್ನಿ, ಕಾಡಸಿದ್ಧ ಮಹಾರಾಜರು, ಶಿವರುದ್ರಯ್ಯ ಜವಳಿಮಠ, ಶಶಿಧರ ಬುದ್ನಿ, ಶಿವಪ್ರಭು ಈಸರಗೊಂಡ, ಶ್ರೀಶೈಲ ಗೌರಿಮಠ, ಶಿವಕುಮಾರ ಮೊರಬ, ಮೃತ್ಯುಂಜಯ ಬುದ್ನಿ, ಅಶೋಕ ಬುದ್ನಿ, ಗಿರಿಧರ ಬುದ್ನಿ, ಮಹಾದೇವಿ ನೀಲವಾಣಿ, ಈರಮ್ಮ ನೀಲವಾಣಿ, ಶೃತಿ ಬುದ್ನಿ, ದೀಪಾ ಬುದ್ನಿ, ದಿವ್ಯಾ ಬುದ್ನಿ, ಪೂರ್ಣಿಮಾ ನೀಲವಾಣಿ, ಈರವ್ವ ಕಳಸಣ್ಣವರ ಸೇರಿದಂತೆ 100 ಕ್ಕೂ ಪಾದಯಾತ್ರಿಕರು ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.

