ವಾಲಿ ಫೈರಿಂಗ್: ಬಂದೂಕು ಪಡೆ ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿದರು, ವಾದ್ಯವೃಂದದವರು ಮೂರು ಹಂತಗಳಲ್ಲಿ ರಾಷ್ಟ್ರಗೀತೆ ನುಡಿಸಿದರು.
ಧಾರವಾಡ
ದೇಶದಲ್ಲಿ ಕಾನೂನು ಸುವ್ಯವಸ್ಥೆ ಮತ್ತು ಶಾಂತಿ ಕಾಪಾಡುವಲ್ಲಿ ಪೊಲೀಸ್ ಸಿಬ್ಬಂದಿಯ ಕೊಡುಗೆ ಅಪಾರವಾಗಿದೆ. ಕರ್ತವ್ಯ ನಿರ್ವಹಿಸುವಾಗ ಹುತಾತ್ಮರಾದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯ ತ್ಯಾಗವನ್ನು ಸ್ಮರಿಸುವುದರ ಜೊತೆಗೆ, ಅವರ ಕುಟುಂಬದವರನ್ನೂ ಗೌರವಿಸಬೇಕು. 1959ರ ಅಕ್ಟೋಬರ್ 21ರಂದು ಲಡಾಖ್‌ನಲ್ಲಿ ಚೀನಿ ಪಡೆಗಳ ವಿರುದ್ಧದ ಕಾರ್ಯಾಚರಣೆಯಲ್ಲಿ 10 ಪೊಲೀಸ್ ಸಿಬ್ಬಂದಿ ಪ್ರಾಣ ತ್ಯಾಗ ಮಾಡಿದ್ದರು. ಅವರ ಸ್ಮರಣಾರ್ಥ ಪ್ರತಿವರ್ಷ ಅಕ್ಟೋಬರ್ 21ರಂದು ಪೊಲೀಸ್ ಹುತಾತ್ಮರ ದಿನಾಚರಣೆ ಆಚರಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಸ್ನೇಹಲ್. ಆರ್ ಹೇಳಿದರು.
ನಗರದ ಸ್ಮಾರಕ ಆವರಣ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಕೇಂದ್ರ ಸ್ಥಾನದಲ್ಲಿ ಬುಧವಾರ ಪೊಲೀಸ್ ಹುತಾತ್ಮ ದಿನಾಚರಣೆ ವತಿಯಿಂದ ಆಯೋಜಿಸಿದ್ದ ಪೊಲೀಸ್ ಹುತಾತ್ಮರಿಗೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.
ಕಳೆದ ಒಂದು ವರ್ಷದಲ್ಲಿ ದೇಶಾದ್ಯಂತ ಕರ್ತವ್ಯ ನಿರ್ವಹಿಸುವಾಗ 368 ಪೊಲೀಸ್ ಸಿಬ್ಬಂದಿ ಪ್ರಾಣ ಕಳೆದುಕೊಂಡಿದ್ದಾರೆ. ಹಬ್ಬ, ಉತ್ಸವ ಹಾಗೂ ಸಂಕಷ್ಟದ ಸಂದರ್ಭಗಳಲ್ಲಿ ಸಾರ್ವಜನಿಕರ ಸುರಕ್ಷತೆಗಾಗಿ ಪೊಲೀಸರು ನಿರಂತರವಾಗಿ ಶ್ರಮಿಸುತ್ತಾರೆ. ರೈತರ ಹೋರಾಟದ ಸಂದರ್ಭದಲ್ಲಿ ಬೆಳಗಾವಿಯಿಂದ ಸುಮಾರು 100 ಕಿ.ಮೀ. ದೂರದವರೆಗೆ ರೈತರೊಂದಿಗೆ ತೆರಳಿ ಭದ್ರತೆ ಒದಗಿಸಿರುವುದು ಪೊಲೀಸರ ಕರ್ತವ್ಯನಿಷ್ಠೆಗೆ ಉದಾಹರಣೆಯಾಗಿದೆ.
ಪೊಲೀಸರ ಸೇವೆಯ ಹಿಂದೆ ಅವರ ಕುಟುಂಬದ ತ್ಯಾಗವೂ ಇದೆ. ಆದ್ದರಿಂದ ಹುತಾತ್ಮರ ಸೇವೆಯನ್ನು ಒಂದು ದಿನಕ್ಕೆ ಸೀಮಿತಗೊಳಿಸದೆ, ಅವರ ಕುಟುಂಬಗಳಿಗೆ ಬೆಂಬಲ ನೀಡಬೇಕು. ಕಾನೂನು ಸುವ್ಯವಸ್ಥೆ ಕಾಪಾಡುವ ಕಾರ್ಯದಲ್ಲಿ ಜಿಲ್ಲಾಡಳಿತವು ಪೊಲೀಸ್ ಇಲಾಖೆಯೊಂದಿಗೆ ಕೈಜೋಡಿಸಲಿದೆ ಎಂದು ತಿಳಿಸಿದರು.

ಪೊಲೀಸ ವರಿಷ್ಠಾಧಿಕಾರಿ ಗುಂಜನ್ ಆರ್ಯ ಮಾತನಾಡಿ. ದೇಶದ ರಕ್ಷಣೆ, ಆಂತರಿಕ ಭದ್ರತೆ ಹಾಗೂ ಸಾರ್ವಜನಿಕರ ಸುರಕ್ಷತೆಗಾಗಿ ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ಪ್ರಾಣತ್ಯಾಗ ಮಾಡಿದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯ ತ್ಯಾಗವನ್ನು ಸ್ಮರಿಸುವ ಉದ್ದೇಶದಿಂದ ಪ್ರತಿವರ್ಷ ಅಕ್ಟೋಬರ್ 21ರಂದು ಪೊಲೀಸ್ ಹುತಾತ್ಮ ದಿನಾಚರಣೆಯನ್ನು ಆಚರಿಸಲಾಗುತ್ತದೆ ಎಂದರು.
1959ರ ಅಕ್ಟೋಬರ್ 21ರಂದು ಲಡಾಖ್‌ನ ಭಾರತ-ಚೀನಾ ಗಡಿಭಾಗದಲ್ಲಿರುವ ಹಾಟ್ ಸ್ಪ್ರಿಂಗ್ಸ್ ಪ್ರದೇಶದಲ್ಲಿ ಗಸ್ತು ತಿರುಗುತ್ತಿದ್ದ ಕೇಂದ್ರ ಮೀಸಲು ಪೊಲೀಸ್ ಪಡೆಯ (ಸಿಆರ್‌ಪಿಎಫ್) ತಂಡದ ಮೇಲೆ ಚೀನಾ ಸೈನಿಕರು ದಾಳಿ ನಡೆಸಿದ್ದರು. ಈ ಸಂದರ್ಭದಲ್ಲಿ ಭಾರತೀಯ ಭದ್ರತಾ ಪಡೆಗಳ ಸಿಬ್ಬಂದಿ ಧೈರ್ಯದಿಂದ ಹೋರಾಡಿದ್ದರು. ಈ ಸಂಘರ್ಷದಲ್ಲಿ ಹತ್ತು ಮಂದಿ ಸಿಆರ್‌ಪಿಎಫ್ ಸಿಬ್ಬಂದಿ ವೀರಮರಣ ಹೊಂದಿದ್ದರು. ಒಂಬತ್ತು ಮಂದಿಯನ್ನು ಚೀನಾ ಪಡೆ ವಶಕ್ಕೆ ಪಡೆದಿತ್ತು. ಸಮುದ್ರಮಟ್ಟದಿಂದ ಸುಮಾರು 16,000 ಅಡಿ ಎತ್ತರದಲ್ಲಿರುವ ಹಾಟ್ ಸ್ಪ್ರಿಂಗ್ಸ್ ಪ್ರದೇಶದಲ್ಲಿ ಪ್ರತಿಕೂಲ ಪರಿಸ್ಥಿತಿಯ ನಡುವೆಯೂ ಕರ್ತವ್ಯ ನಿರ್ವಹಿಸಿದ ಯೋಧರ ಶೌರ್ಯ ಮತ್ತು ಬಲಿದಾನವನ್ನು ಸ್ಮರಿಸುವ ಸಲುವಾಗಿ ಹುತಾತ್ಮ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಈ ದಿನ ದೇಶದ ವಿವಿಧ ರಾಜ್ಯಗಳ ಪೊಲೀಸ್ ಪಡೆಗಳು ಹಾಗೂ ಅರೆಸೇನಾ ಪಡೆಗಳ ಪ್ರತಿನಿಧಿಗಳು ಹಾಟ್ ಸ್ಪ್ರಿಂಗ್ಸ್‌ಗೆ ತೆರಳಿ ಹುತಾತ್ಮರಿಗೆ ಗೌರವ ಸಲ್ಲಿಸುತ್ತಾರೆ. ವಿವಿಧ ರಾಜ್ಯಗಳು, ಜಿಲ್ಲೆಗಳು ಮತ್ತು ಭದ್ರತಾ ಪಡೆಗಳ ಘಟಕಗಳಲ್ಲಿಯೂ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ ಎಂದು ತಿಳಿಸಿದರು.
2025ರ ಸೆಪ್ಟೆಂಬರ್ 1ರಿಂದ 2026ರ ಆಗಸ್ಟ್ 31ರವರೆಗಿನ ಅವಧಿಯಲ್ಲಿ ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ದೇಶದ ವಿವಿಧ ಪೊಲೀಸ್ ಪಡೆಗಳು ಹಾಗೂ ಭದ್ರತಾ ಸಂಸ್ಥೆಗಳ 154 ಅಧಿಕಾರಿಗಳು ಮತ್ತು ಸಿಬ್ಬಂದಿ ಹುತಾತ್ಮರಾಗಿದ್ದಾರೆ ಎಂದು ನೀಡಲಾದ ಮಾಹಿತಿಯಲ್ಲಿ ತಿಳಿಸಲಾಗಿದೆ. ಹುತಾತ್ಮರಾದವರಲ್ಲಿ ಆಂಧ್ರಪ್ರದೇಶ, ಅರುಣಾಚಲ ಪ್ರದೇಶ, ಅಸ್ಸಾಂ, ಬಿಹಾರ, ಛತ್ತೀಸ್‌ಗಢ, ಗುಜರಾತ್, ಹರಿಯಾಣ, ಜಾರ್ಖಂಡ್, ಕರ್ನಾಟಕ, ಮಧ್ಯಪ್ರದೇಶ, ಮಹಾರಾಷ್ಟ್ರ, ಮಣಿಪುರ, ಪಂಜಾಬ್, ರಾಜಸ್ಥಾನ, ತೆಲಂಗಾಣ, ಉತ್ತರ ಪ್ರದೇಶ, ಉತ್ತರಾಖಂಡ, ಪಶ್ಚಿಮ ಬಂಗಾಳ, ದೆಹಲಿ ಹಾಗೂ ಜಮ್ಮು-ಕಾಶ್ಮೀರದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಸೇರಿದ್ದಾರೆ. ಕರ್ನಾಟಕದ ಪರವಾಗಿ ಇನ್ಸ್‌ಪೆಕ್ಟರ್ ಪಂಚಯ್ಯ ವೀರಯ್ಯ ಸಾಲಿಮಠ, ಸಹಾಯಕ ಸಬ್ ಇನ್ಸ್‌ಪೆಕ್ಟರ್‌ಗಳಾದ ಸಿ.ಎಸ್. ಹುಟ್ಗಿ ಮತ್ತು ಬಸವರಾಜ್ ಎಂ.ಎಲ್., ಹೆಡ್ ಕಾನ್ಸ್ಟೇಬಲ್‌ಗಳಾದ ಬೀರಲಿಂಗ, ಎ.ಎಂ. ಸಾಲಮಂಟಾಪಿ ಹಾಗೂ ಇಸ್ಮಾಯಿಲ್ ಏರಲಮ್ ಮತ್ತು ಸೀನಿಯರ್ ಸಿವಿಲ್ ಪೊಲೀಸ್ ಆಫೀಸರ್ ಸಜೀಶ್ ಕೆ. ಅವರ ಹೆಸರುಗಳನ್ನು ನೀಡಲಾಗಿದೆ.
ಇದಲ್ಲದೆ, ಅಸ್ಸಾಂ ರೈಫಲ್ಸ್, ಗಡಿ ಭದ್ರತಾ ಪಡೆ (ಬಿಎಸ್‌ಎಫ್), ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್), ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್), ಇಂಡೋ-ಟಿಬೆಟಿಯನ್ ಗಡಿ ಪೊಲೀಸ್ (ಐಟಿಬಿಪಿ), ಸಶಸ್ತ್ರ ಸೀಮಾ ಬಲ್ (ಎಸ್‌ಎಸ್‌ಬಿ), ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್) ಹಾಗೂ ಅಗ್ನಿಶಾಮಕ ಮತ್ತು ಗೃಹರಕ್ಷಕ ದಳದ ಅಧಿಕಾರಿಗಳು ಮತ್ತು ಸಿಬ್ಬಂದಿಯೂ ಹುತಾತ್ಮರಾಗಿದ್ದಾರೆ ಎಂದು ಹೇಳಿದರು.
ಹುತಾತ್ಮ ದಿನಾಚರಣೆಯಂದು ದೇಶದ ರಕ್ಷಣೆ ಮತ್ತು ಜನರ ಸುರಕ್ಷತೆಗಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದ ಎಲ್ಲ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯ ತ್ಯಾಗವನ್ನು ಗೌರವದಿಂದ ಸ್ಮರಿಸಲಾಗುತ್ತದೆ. ಅವರ ಧೈರ್ಯ, ಕರ್ತವ್ಯನಿಷ್ಠೆ ಮತ್ತು ದೇಶಸೇವೆಯ ಮನೋಭಾವ ಮುಂದಿನ ಪೀಳಿಗೆಗೆ ಸದಾ ಪ್ರೇರಣೆಯಾಗಿವೆ ಎಂದು ತಿಳಿಸಿದರು.
ಪರೇಡ್ ಕಮಾಂಡರ್ ಆಗಿ ಡಿಎಆರ್‌ನ ಆರ್‌ಪಿಐ ವಿಠಲ ಆರೇರ್ ಕಾರ್ಯನಿರ್ವಹಿಸಿದರು. ಮೊದಲನೇ ತುಕುಡಿಗೆ ಆರ್‌ಎಸ್‌ಐ ಮಂಜುನಾಥ ಕುರಗೋಡ ಹಾಗೂ ಎರಡನೇ ತುಕುಡಿಗೆ ಆರ್‌ಎಸ್‌ಐ ವಾಸು ರಕ್ಷೇದ ನೇತೃತ್ವ ವಹಿಸಿದ್ದರು. ಬ್ಯಾಂಡ್ ಮಾಸ್ಟರ್ ವೈ.ಎಫ್. ಭಜಂತ್ರಿ ಹಾಗೂ ಡಿಎಆರ್‌ನ ಎ.ಆರ್‌ಎಸ್‌ಐ ಮತ್ತು ತಂಡದವರು ಸುಶ್ರಾವ್ಯವಾಗಿ ವಾದ್ಯ ನುಡಿಸಿದರು.
ಹುಬ್ಬಳ್ಳಿ ಗ್ರಾಮೀಣ ಉಪ ವಿಭಾಗದ DSP ಶಿವಾನಂದ ಕಟಗಿ, DSP ವಿನೋದ ಮುಕ್ತೆದಾರ, DSP ಡಿ.ಎಸ್.ಧನಗರ ಉಪಸ್ಥಿತರಿದ್ದರು. ಎ.ಎಫ್. ಜಿಲ್ಲೇನವರ ನಿರೂಪಿಸಿದರು. ವಿ.ಎಮ್.ದೊಡ್ಡಮನಿ ವಂದಿಸಿದರು. ಪೊಲೀಸ್ ಸಿಬ್ಬಂದಿಗಳು ಹಾಗೂ ಹುತಾತ್ಮರಾದ ಕುಟುಂಬದವರು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.

