“ಮಾಧ್ಯಮ ಕ್ಷೇತ್ರದ ಹೊಸತು ವೇದಿಕೆ SK ಸುದ್ದಿಮನೆ”

ಹಂಚಿಕೊಳ್ಳಿ

ಸಮೂಹ ಸಂವಹನ ಈಗ ಕೇವಲ ಮುದ್ರಣ ಮಾಧ್ಯಮಕ್ಕಷ್ಟೇ ಸೀಮಿತವಾಗಿ ಉಳಿದಿಲ್ಲ. ವೈಜ್ಞಾನಿಕ ಹೊಸ ಆವಿಷ್ಕಾರವಾದ ಅಂತರ್ಜಾಲದ ಬಾಹುಗಳು ವಿಸ್ತಾರವಾದಂತೆ ಅದರಲ್ಲಿ ಡಿಸಿಟಲ್ ತಂತ್ರಜ್ಞಾನವು ಸಮೂಹ ಸಂವಹನದ ವೇಗವನ್ನು ಅಧಿಕಗೊಳಿಸಿದೆ.

ಕನ್ನಡ ಪತ್ರಿಕೋದ್ಯಮವು ಸ್ವಾತಂತ್ರ್ಯಪೂರ್ವ ಕಾಲದಿಂದಲೂ ಸಮಾಜದ ನೋವು–ನಲಿವುಗಳಿಗೆ ಧ್ವನಿಯಾಗಿ, ಜನಜಾಗೃತಿ ಮೂಡಿಸಿ, ಪ್ರಜಾಪ್ರಭುತ್ವದ ಮೌಲ್ಯಗಳನ್ನು ಬಲಪಡಿಸಿದ ಮಹತ್ವದ ಮಾಧ್ಯಮವಾಗಿದೆ. ಕಾಲ ಬದಲಾದಂತೆ ಪತ್ರಿಕೋದ್ಯಮವೂ ಮುದ್ರಣದಿಂದ ಡಿಜಿಟಲ್ ಮಾಧ್ಯಮದತ್ತ ಹೆಜ್ಜೆ ಹಾಕಿದೆ. ಇಂದು Android Mobile ಬಳಕೆ ಹೆಚ್ಚುತ್ತಿರುವುದರಿಂದ ಎಲ್ಲರ ಅಂಗೈಗಳಲ್ಲಿ ಬದುಕಿನ ವಿಭಿನ್ನ ಕ್ಷೇತ್ರಗಳ ಸುದ್ದಿ – ಚಿತ್ರಗಳ ಅನಾವರಣಕ್ಕೆಂದೇ ಸಮೂಹ ಸಂವಹನದ ಹೊಸ ಆವಿಷ್ಕಾರವಾಗಿ ವೆಬ್ ಪೋರ್ಟಲ್‌ಗಳು ತೆಲೆ ಎತ್ತಿದ್ದು, ಇವು ಕ್ಷಣಾರ್ಧದಲ್ಲಿ ಸುದ್ದಿಯನ್ನು ಜನರಿಗೆ ತಲುಪಿಸುವ ಶಕ್ತಿಶಾಲಿ ವೇದಿಕೆಗಳಾಗಿವೆ.

ವೇಗದೊಂದಿಗೆ ಜನಮನಕ್ಕೆ ಸುದ್ದಿ ತಲುಪಿಸುವ ನಿಟ್ಟಿನಲ್ಲಿ ವಾಸ್ತವಾಂಶಗಳ ಪರಿಶೀಲನೆ, ನಿಷ್ಪಕ್ಷಪಾತತೆ, ಭಾಷೆಯ ಘನತೆ, ಮಾನವೀಯತೆ ಮತ್ತು ಸಾಮಾಜಿಕ ಹೊಣೆಗಾರಿಕೆಯನ್ನು ಗಮನದಲ್ಲಿಟ್ಟುಕೊಂಡು ನಮ್ಮ “SK SUDDIMANE” ಸುದ್ದಿಗಳ ಪ್ರಸಾರಕ್ಕೆ ಹೊಸ ಹೆಜ್ಜೆ ಇರಿಸಿದೆ. ಸುದ್ದಿ ಮೊದಲು ತಲುಪಿಸುವುದು ಮುಖ್ಯವಾದದ್ದಲ್ಲ;  ಸತ್ಯವಾದ ಸುದ್ದಿಯನ್ನು ಜವಾಬ್ದಾರಿಯಿಂದ ತಲುಪಿಸುವುದು ಪತ್ರಿಕೋದ್ಯಮದ ಆಶಯವಾಗಿದ್ದನ್ನು ಮರೆಯದೇ ಇಲ್ಲಿ ಅದನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ಹೆಚ್ಚು ಕಾಳಜಿ ನೀಡಲು ನಮ್ಮದೇ ಆದ ಮಾಧ್ಯಮ ನೀತಿಯನ್ನು ಅನುಸರಿಸಲು ಒಂದು ನಿರ್ದಿಷ್ಟ ಚೌಕಟ್ಟನ್ನು ಇಟ್ಟುಕೊಳ್ಳಲಾಗಿದೆ.

ಕೃಷಿ, ಆರೋಗ್ಯ, ಶಿಕ್ಷಣ, ಸಂಸ್ಕೃತಿ, ಧರ್ಮ, ಪರಂಪರೆ, ವಿಜ್ಞಾನ-ತಂತ್ರಜ್ಞಾನ, ಕ್ರೀಡೆ, ಸಂಗೀತ, ರಂಗಚಟುವಟಿಕೆಗಳು, ಅಭಿನಯ, ಚಿತ್ರಕಲೆ, ಶಿಲ್ಪಕಲೆ, ರಾಜಕೀಯ, ಸಾಹಿತ್ಯ, ಪತ್ರಿಕೋದ್ಯಮ, ಚಲನಚಿತ್ರ, ಸಾರಿಗೆ, ಉದ್ಯಮ, ಕೈಗಾರಿಕೆ, ವಾಣಿಜ್ಯ, ಆಧ್ಯಾತ್ಮ, ಯೋಗ, ವೈದ್ಯಕೀಯ, ತೋಟಗಾರಿಕೆ, ಮುದ್ರಣ, ಆಡಳಿತ, ಸೇರಿದಂತೆ ನಮ್ಮ ಜೀವನ ವಿಧಾನದ ಅನೇಕ ಕ್ಷೇತ್ರಗಳ ಮೇಲೆ ಬೆಳಕು ಚೆಲ್ಲಲು “SK -ಸುದ್ದಿಮನೆ” ಪ್ರಯತ್ನಿಸಲಿದೆ. ಸುದ್ದಿ-ಚಿತ್ರಗಳು, ವಿಶೇಷ ವರದಿಗಳು, ತನಿಖಾ ವರದಿಗಳು, ಅಂಕಣ ಬರಹಗಳು, ವಿಶೇಷ ಲೇಖನಗಳಿಗೆ ಇಲ್ಲಿ ಸ್ಥಳ ನೀಡಲು ಯೋಜಿಸಲಾಗಿದೆ.

ಆತ್ಮೀಯರೇ, ನಮ್ಮ ಈ ಹೊಸ ಪ್ರಯತ್ನದ “SK-SUDDIMANE” ನಿಮ್ಮದೇ ಆಗಿದ್ದು, ಇದನ್ನು ಪ್ರೀತಿಯ ಹೃದಯ ಸ್ಪಂದನೆಯೊಂದಿಗೆ ಎಲ್ಲರೂ ಸ್ವೀಕರಿಸಿ ಪ್ರೋತ್ಸಾಹಿಸಲು ಈ ಮೂಲಕ ಕೋರುತ್ತೇನೆ.

ಇಂದು ಶ್ರೀಗಣೇಶ ಚತುರ್ಥಿ ಹಬ್ಬದ ಪರ್ವಕಾಲದ ಸಂತಸದ ಕ್ಷಣಗಳಲ್ಲಿ ನಿಮ್ಮ ಓದಿಗೆ ತೆರೆದುಕೊಂಡಿರುವ “SK-SUDDIMANE” ಒಂದು ಉನ್ನತ ಮಾಧ್ಯಮ ಸಂಸ್ಥೆಯನ್ನಾಗಿ ಬೆಳೆಸುವಲ್ಲಿ  ಮತ್ತು ಇದು ಜನರ ಧ್ವನಿಗೆ ವೇದಿಕೆಯಾಗುವಲ್ಲಿ ಎಲ್ಲರ ಸಹಾಯ-ಸಹಕಾರವನ್ನು ಅಪೇಕ್ಷಿಸುವೆ. ಯಾವುದೇ ಪೂರ್ವಾಗ್ರಹ ಪೀಡಿತ ವಿಚಾರಗಳಿಗೆ ಇಲ್ಲಿ ಆಸ್ಪದ ನೀಡದಂತೆ ಎಚ್ಚರಿಕೆ ವಹಿಸಲಾಗಿದ್ದು, ಸತ್ಯನಿಷ್ಠವಾದ ವಾಸ್ತವದ ವರದಿಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುವೆ. ನ್ಯಾಯಯುತ ಜನಪರವಾದ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಬದ್ಧವಾಗಿ “SK-SUDDIMANE” ಮುನ್ನಡೆಸಲು ನಿಖರ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡುತ್ತಾ ಮತ್ತೊಮ್ಮೆ ಸಕಲರ ಸಹಕಾರ ಮತ್ತು  ಪ್ರೋತ್ಸಾಹ ಬಯಸುವೆ.

ತಮ್ಮ ವಿಶ್ವಾಸದ,
ಶ್ರೀಕಾಂತ ಬೆಟಗೇರಿ
ಸಂಪಾದಕ, ‘SK- ಸುದ್ದಿಮನೆ’


ಹಂಚಿಕೊಳ್ಳಿ

Leave a Reply

Your email address will not be published. Required fields are marked *