ಸಂವಿಧಾನದ ಆಶಯಗಳು ಈಡೇರಬೇಕಾದರೆ ಸಾಮಾಜಿಕ ಅಸಮಾನತೆ ನಿವಾರಣೆಯಾಗಬೇಕು-ಸಿದ್ದರಾಮಯ್ಯ
ಬೆಂಗಳೂರು
ಪತ್ರಿಕಾರಂಗದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಹಾಗೂ ಅಲ್ಪಸಂಖ್ಯಾತರಿಗೆ ಸಮಾನ ಅವಕಾಶಗಳು ದೊರೆಯಬೇಕು. ಈ ಸಮುದಾಯಗಳಿಗೆ ಬುದ್ಧಿ, ಪ್ರಾವೀಣ್ಯತೆ ಅಥವಾ ವ್ಯಕ್ತಿತ್ವದ ಕೊರತೆಯಿಲ್ಲ. ಐತಿಹಾಸಿಕವಾಗಿ ಅಕ್ಷರ ಸಂಸ್ಕೃತಿ ಮತ್ತು ಶಿಕ್ಷಣದ ಅವಕಾಶಗಳಿಂದ ವಂಚಿತರಾಗಿದ್ದ ಕಾರಣದಿಂದಾಗಿ ಪತ್ರಿಕಾರಂಗದಲ್ಲಿ ಅವರ ಸಂಖ್ಯೆ ಕಡಿಮೆಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಕರ್ನಾಟಕ ರಾಜ್ಯ ಎಸ್ಸಿ, ಎಸ್ಟಿ ಪತ್ರಿಕಾ ಸಂಪಾದಕರ ಸಂಘದ ವತಿಯಿಂದ ಗುರುವಾರ ಆಯೋಜಿಸಿದ್ದ ಪ್ರಶಸ್ತಿ ಪ್ರದಾನ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರತಿವರ್ಷದಂತೆ ಈ ಬಾರಿಯೂ ಬಾಬಾಸಾಹೇಬ್ ಅಂಬೇಡ್ಕರ್, ಬಿ.ರಾಚಯ್ಯ, ಬಸವಲಿಂಗಪ್ಪ ಹಾಗೂ ಕೃಷ್ಣಪ್ಪ ಅವರ ಹೆಸರಿನಲ್ಲಿ ಪ್ರಶಸ್ತಿಗಳನ್ನು ನೀಡಿರುವುದು ಸಂತೋಷದ ವಿಚಾರ. ಪ್ರಶಸ್ತಿ ಪುರಸ್ಕೃತರೆಲ್ಲರಿಗೂ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.
ಬಾಬಾಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಎಸ್ಸಿ, ಎಸ್ಟಿ ಸಮುದಾಯಗಳಿಗೆ ಶಿಕ್ಷಣ, ಉದ್ಯೋಗ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ಮೀಸಲಾತಿ ನೀಡಿದ್ದಾರೆ. ಆದರೆ ಪತ್ರಿಕಾರಂಗದಲ್ಲಿ ಮೀಸಲಾತಿ ಇಲ್ಲ. ಹೀಗಾಗಿ ಎಸ್ಸಿ, ಎಸ್ಟಿ, ಹಿಂದುಳಿದವರು ಹಾಗೂ ಅಲ್ಪಸಂಖ್ಯಾತರು ಪತ್ರಿಕಾರಂಗದಲ್ಲಿ ಕಡಿಮೆ ಸಂಖ್ಯೆಯಲ್ಲಿದ್ದಾರೆ. ಇವರಿಗೆ ಸಮಾನ ಅವಕಾಶಗಳು ದೊರೆತಿದ್ದರೆ ಹೆಚ್ಚಿನ ಸಂಖ್ಯೆಯಲ್ಲಿ ಪತ್ರಕರ್ತರು ರೂಪುಗೊಳ್ಳುತ್ತಿದ್ದರು. ನಾವ್ಯಾರೂ ಯಾರಿಗಿಂತಲೂ ಕಡಿಮೆಯಿಲ್ಲ; ಅವಕಾಶಗಳಿಂದ ವಂಚಿತರಾಗಿದ್ದೇವೆ ಅಷ್ಟೇ ಎಂದರು.
ನಾನು ಪತ್ರಿಕಾರಂಗಕ್ಕೆ ಹೋಗಬೇಕಾಗಿತ್ತು ಎಂಬ ಭಾವನೆ ಈಗ ಮೂಡುತ್ತಿದೆ. ಆದರೆ, ಕಾಲ ಮಿಂಚಿಹೋಗಿದೆ. ಶಿವಕುಮಾರ್ ಅವರು ಇಂಡಿಯನ್ ಎಕ್ಸ್ಪ್ರೆಸ್ನಲ್ಲಿ ಮುಖ್ಯ ವರದಿಗಾರರಾಗಿದ್ದರು. ಇಲ್ಲಿರುವ ಅನೇಕ ಸಂಪಾದಕರು ಹಾಗೂ ಪತ್ರಕರ್ತರು ಯಾರಿಗೂ ಕಡಿಮೆಯಿಲ್ಲ. ಅವರಲ್ಲಿ ಯೋಗ್ಯತೆ ಮತ್ತು ಪ್ರಾಮಾಣಿಕತೆ ಇದೆ. ಸತ್ಯವಾದ ಸುದ್ದಿಗಳನ್ನು ಜನರ ಮುಂದಿಡುವ ಪ್ರಯತ್ನವನ್ನು ಪತ್ರಕರ್ತರು ಮಾಡಬೇಕು ಎಂದು ಹೇಳಿದರು.
ಸತ್ಯ ಜನರಿಗೆ ತಿಳಿಯದೇ ಹೋದರೆ ಅಸತ್ಯವನ್ನೇ ಸತ್ಯವೆಂದು ನಂಬುವ ಸಾಧ್ಯತೆ ಇದೆ. ಆದ್ದರಿಂದ ಊಹಾ ಮಾಧ್ಯಮಕ್ಕೆ ಅವಕಾಶ ಇರಬಾರದು. ಯಾವುದೇ ಊಹೆ ಮಾಡಿದರೂ ಅದು ಸತ್ಯಕ್ಕೆ ಹತ್ತಿರವಾಗಿರಬೇಕು. ಸತ್ಯಕ್ಕೆ ಹತ್ತಿರವಾಗದ ಮಾಹಿತಿಯನ್ನು ಜನರಿಗೆ ನೀಡಿದರೆ ತಪ್ಪು ಮಾಹಿತಿ ನೀಡಿದಂತಾಗುತ್ತದೆ. ಮಾಧ್ಯಮದಲ್ಲಿ ಬದಲಾವಣೆ ಆಗಬೇಕು ಹಾಗೂ ಮಾಧ್ಯಮದ ಮೂಲಕ ಸಮಾಜದಲ್ಲಿ ಬದಲಾವಣೆ ತರಬೇಕು. ಕಟ್ಟಕಡೆಯ ಮನುಷ್ಯ, ಬಡವರು ಹಾಗೂ ಸಾಮಾನ್ಯ ಜನರ ಧ್ವನಿಯಾಗಿ ಅವರ ಕಷ್ಟ-ಸುಖಗಳನ್ನು ಮಾಧ್ಯಮಗಳು ಸಮಾಜದ ಮುಂದಿಡಬೇಕು ಎಂದರು.
