ಧಾರವಾಡ
ಪ್ರತಿ ವಿದ್ಯಾರ್ಥಿ ತನ್ನ ಜೀವನದಲ್ಲಿ ಪರೋಪಕಾರ ಬುದ್ಧಿಯ ಜತೆಗೆ ಪ್ರಾಮಾಣಿಕತನವನ್ನು ಅಳವಡಿಸಿಕೊಳ್ಳಬೇಕು. ಕಲಿತ ಶಾಲೆಗೆ ಒಳ್ಳೆಯ ಹೆಸರು ತರಬೇಕು ಎಂದು ಉತ್ತರಾದಿಮಠಾಧಿಶರಾದ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರು ಹೇಳಿದರು.
ನಗರದ ವಿದ್ಯಾರಣ್ಯ ಹೈಸ್ಕೂಲ್ ನಲ್ಲಿ ಶುಕ್ರವಾರ ದಿ. ರಂಗಾಚಾರ್ಯ ಗುತ್ತಲ ಅವರ ಭಾವಚಿತ್ರ ಅನಾವರಣಗೊಳಿಸಿ ವಿದ್ಯಾರ್ಥಿಗಳನ್ನುದ್ದೇಶಿಸಿ ಅವರು ಆಶೀರ್ವಚನ ನೀಡಿದರು.
ಬದುಕಿನಲ್ಲಿ ಕೀರ್ತಿ, ಹಣವೇ ಅಂತಿಮವಲ್ಲ. ಸತ್ಕಾರ್ಯ, ಪರೋಪಕಾರ ಹಾಗೂ ಧರ್ಮಮಾರ್ಗದ ಸಂಪಾದನೆ ಮುಖ್ಯ. ಒಬ್ಬರಿಗೆ ಮೋಸ ಮಾಡಿ ಗಳಿಸಿದ ಹಣ, ಕೀರ್ತಿ ತಾತ್ಕಾಲಿಕ. ಇಂದಲ್ಲ ನಾಳೆ ಅದು ತಿರುಗೇಟು ನಿಡುತ್ತದೆ. ಆಗ ತೊಂದರೆ ಕಟ್ಟಿಟ್ಟ ಬುತ್ತಿ. ಹೆತ್ತವರು ಹಾಗೂ ಶಿಕ್ಷಕರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗಬೇಕು. ಒಳ್ಳೆಯ ವಿದ್ಯಾಭ್ಯಾಸ ಮಾಡಬೇಕು. ಸನ್ಮಾರ್ಗ ಆಯ್ಕೆ ಮಾಡಿಕೊಂಡು ಉನ್ನತ ಸ್ಥಾನ ಪಡೆಯಬೇಕು. ಎಂದಿಗೂ ವಾಮಮಾರ್ಗ ಅನುಸರಿಸಬಾರದು. ಅದು ಶಾಶ್ವತವಲ್ಲ. ಒಬ್ಬರ ಕಣ್ಣೀರು ಸುರಿಸಿ ಗಳಿಸಿದ ಹಣ ಎಂದಿಗೂ ಒಳಿತು ಮಾಡುವುದಿಲ್ಲ. ಅದೇನಿದ್ದರೂ ಪಾಪದ ಗಂಟು ಎಂದು ಶ್ರೀಗಳು ಹೇಳಿದರು.
ಇದೇ ವೇಳೆ ಭಾರತೀಯ ಸ್ಟೇಟ್ ಬ್ಯಾಂಕ್‌ನಲ್ಲಿನ ಗೆಳೆಯರ ಬಳಗ ವತಿಯಿಂದ 250 ವಿದ್ಯಾರ್ಥಿಗಳಿಗೆ ಉಚಿತ ಕಂಪಾಸ್ ಬಾಕ್‌್ಸಗಳನ್ನು ವಿತರಿಸಲಾಯಿತು. ತನ್ನ ಗಳಿಕೆಯಲ್ಲಿ ಒಂದು ಅಂಶವನ್ನು ದಾನ ಸತ್ಕರ್ಮಗಳಿಗೆ ಮೀಸಲಿಡಬೇಕು. ಇದರಿಂದ ಪ್ರತಿಫಲಾಪೇಕ್ಷೆಯಿಲ್ಲದೇ ಸೇವೆ ಮಾಡಬೇಕು. ದಿ.ರಂಗಾಚಾರ್ಯ ಗುತ್ತಲರು ಶ್ರೇಷ್ಠ ಶಿಕ್ಷಕರಾಗಿದ್ದರಲ್ಲದೇ ಹಿರಿಯ ಸಾಹಿತಿಗಳಾದ ದ.ರಾ. ಬೇಂದ್ರೆ ಹಾಗೂ ಇತರರಿಂದ ಮೆಚ್ಚುಗೆಗೆ ಪಾತ್ರರಾಗಿದ್ದರು. ಅಂಥವರ ಶಾಲೆಯಲ್ಲಿ ಓದುತ್ತಿರುವ ನೀವೆಲ್ಲ ಧನ್ಯರು. ಭ್ರಷ್ಟಾಚಾರ, ಅವ್ಯವಹಾರ ಹಾಗೂ ಅಧರ್ಮದ ದಾರಿ ತುಳಿಯದೇ ನ್ಯಾಯಯುತವಾಗಿ ಜೀವನ ನಡೆಸಬೇಕು ಎಂದು ಅನುಗ್ರಹ ಸಂದೇಶ ನೀಡಿದರು.
ದಿವಾನರಾದ ಶಶಿಧರ ಆಚಾರ್ಯ, ಪಂ. ಸತ್ಯಧ್ಯಾನಾಚಾರ್ಯ ಕಟ್ಟಿ, ಎಚ್.ಬಿ. ಕುಲಕರ್ಣಿ, ಡಾ. ಕೆ.ಎಚ್. ಕಟ್ಟಿ. ಹ.ವೆಂ. ಕಾಖಂಡಕಿ. ಶ್ರೀಕಾಂತ ಪಾಟೀಲ. ಡಿ.ಎಸ್. ರಾಜಪುರೋಹಿತ. ಪಂ. ಪ್ರಹ್ಲಾದಾಚಾರ್ಯ ಗಲಗಲಿ, ಶಾಲೆಯ ಮುಖ್ಯೋಪಾಧ್ಯಾಯರು, ಭಾರತೀಯ ಸ್ಟೇಟ್ ಬ್ಯಾಂಕ್‌ನಲ್ಲಿನ ಗೆಳೆಯರ ಬಳಗದ ಸದಸ್ಯರು ಹಾಗೂ ಹಳೆಯ ವಿದ್ಯಾರ್ಥಿಗಳು ಈ ವೇಳೆ ಉಪಸ್ಥಿತರಿದ್ದರು.
