ಹಳೆಯ ತಳಿಯ ಬೀಜಗಳನ್ನು ಸಂರಕ್ಷಣೆ ಮಾಡುವುದು ಅವಶ್ಯ ವಿಶ್ರಾಂತ ಕುಲಪತಿ ಡಾ. ಆರ್.ಆರ್. ಹಂಚಿನಾಳ
ಧಾರವಾಡ
ಕೃಷಿಯಲ್ಲಿ ತಲೆ ತಲಾಂತರದಿಂದ ಹಳೆಯ ತಳಿಗಳನ್ನು ಸಂರಕ್ಷಿಸಿಕೊಂಡು ಬರಲಾಗುತ್ತಿದೆ. ಹಿಂದಿನ ತಳಿಗಳನ್ನು ಸಂರಕ್ಷಿಸಿ ಕಾಪಾಡಬೇಕಿದೆ. ಆ ನಿಟ್ಟಿನಲ್ಲಿ ಹಳೆಯ ತಳಿಗಳ ಬೀಜಗಳನ್ನು ಸಂರಕ್ಷಣೆ ಮಾಡುವುದು ಅವಶ್ಯವಿದೆ ಎಂದು ಕೃಷಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಆರ್.ಆರ್. ಹಂಚಿನಾಳ ಹೇಳಿದರು.
ಕೃಷಿ ವಿಶ್ವವಿದ್ಯಾಲಯದ ರೈತರ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ಕೃಷಿ ಮೇಳ 2026 ರ ಅಂಗವಾಗಿ ಶುಕ್ರವಾರ ಆಯೋಜಿಸಲಾಗಿದ್ದ ಬೀಜ ಮೇಳ ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ಪೂರ್ವಜರ ಪ್ರಯತ್ನದಿಂದ ಹಳೆಯ ತಳಿಗಳನ್ನು ಬೆಳೆಯಲಾಗುತ್ತಿದೆ. ಹಳೆಯ ತಳಿಗಳು ಭೂಮಿಯ ಲವಣಾಂಶ ಹೀರಿಕೊಂಡು ಬೆಳೆಯುತ್ತವೆ. ಆದರೆ ಯಾವುದೇ ತರಹದ ರಾಸಾಯನಿಕ ಗೊಬ್ಬರವನ್ನು ಬಳಸುತ್ತಿರಲಿಲ್ಲ. ಸುಮಾರು 2 ಲಕ್ಷಕ್ಕೂ ಅಧಿಕ ಭತ್ತದ ತಳಿಗಳು ಇವೆ. ಬೀಜದ ಮಹತ್ವ ಹೇಳಿಕೊಡುವುದು ಬಹಳ ಮುಖ್ಯವಾಗಿದೆ. ಒಳ್ಳೆಯ ಫಲವತ್ತಾದ ಭೂಮಿಯಲ್ಲಿ ಬೀಜಗಳನ್ನು ಹಾಕಿದರೆ ಉತ್ತಮ ಇಳುವರಿಯನ್ನು ಪಡೆಯಬಹುದಾಗಿದೆ ಎಂದು ತಿಳಿಸಿದರು.
ಹಳೆಯ ತಳಿಯ ಬೀಜಗಳನ್ನು ಬಿತ್ತಿದರೆ, ಶೇ.18 ರಿಂದ 20 ರಷ್ಟು ಹೆಚ್ಚಿನ ಇಳುವರಿ ಪಡೆಯಬಹುದು. ಅಲ್ಲದೇ ರಸಗೊಬ್ಬರ, ಕೊಟ್ಟಿಗೆ ಗೊಬ್ಬರ ಬಳಸಿದರೆ ಇನ್ನೂ ಹೆಚ್ಚಿನ ಇಳುವರಿಯನ್ನು ಪಡೆಯಬಹುದಾಗಿದೆ. ಒಳ್ಳೆಯ ಆಹಾರದಿಂದ ಉತ್ತಮ ಸಮಾಜವನ್ನು ನಿರ್ಮಿಸಬಹುದು. ದೇಶಕ್ಕೆ ಮಾದರಿಯಾದ ಕೃಷಿ ವಿಶ್ವವಿದ್ಯಾಲಯವು ರೈತರೊಂದಿಗೆ ಬೆರೆತು ಮುನ್ನಡೆಯಬೇಕು ಎಂದರು.
ರೈತರ ಭಾಗಿತ್ವದಲ್ಲಿ ಬೀಜ ಉತ್ಪಾದನೆ ಮಾಡಿದರೆ ಎಲ್ಲರಿಗೂ ಅನುಕೂಲವಾಗಲಿದೆ. ಇಲ್ಲಿನ ಬೀಜಗಳು ರಾಜಸ್ಥಾನ, ಅಸ್ಸಾಂ ಸೇರಿದಂತೆ ಇಂಡೋನೇಷ್ಯಾ ದೇಶಕ್ಕೂ ರಫ್ತು ಮಾಡಲಾಗಿರುತ್ತದೆ. ರೈತರ ತಳಿಗಳಿಗೆ ಪೇಟೆಂಟ್ ನೀಡಲಾಗಿದೆ. ತಳಿ ಸಂಶೋಧನೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಬೇಕು. ರೈತರು ಸಾವಯವ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ. ಎನ್.ಬಿ. ಪ್ರಕಾಶ ಮಾತನಾಡಿ, ಗುಣಮಟ್ಟದ ಬೀಜದಿಂದ ಮಾತ್ರ ಒಳ್ಳೆಯ ಇಳುವರಿ ಪಡೆಯಲು ಸಾಧ್ಯ. ಆರೋಗ್ಯ ಕಾಪಾಡಲು ಒಳ್ಳೆಯ ಆಹಾರ ಅವಶ್ಯಕವಾಗಿದೆ. ಕೃಷಿ ವಿಶ್ವವಿದ್ಯಾಲಯದಲ್ಲಿ ಬೀಜ ಘಟಕ ಸ್ಥಾಪನೆಯಾಗಿ 25 ವರ್ಷಗಳು ಕಳೆದಿವೆ. ರೈತರ ಸಹಭಾಗಿತ್ವದಲ್ಲಿ ಬೀಜ ಉತ್ಪಾದನೆ ಮಾಡಲಾಗುವುದು. ಬೀಜ ಘಟಕವು ಐಸಿಎಆರ್ ನಿಂದ 2013 ಮತ್ತು 2020 ರಲ್ಲಿ ಪ್ರಶಸ್ತಿ ಪಡೆದುಕೊಂಡಿದೆ. ರೈತರ ಬೀಜಗಳನ್ನು ಸಂರಕ್ಷಿಸುವುದು ಬಹಳ ಮುಖ್ಯವಾಗಿದೆ. ಹಿಂದಿನ ಕಾಲದ ಬೀಜಗಳನ್ನು ಕಾಪಾಡಿಕೊಳ್ಳಬೇಕಿದೆ. ಶೇಂಗಾ ಬೆಳೆಯ ತಳಿಗೆ ಅಂತರಾಷ್ಟ್ರೀಯ ಪ್ರಶಸ್ತಿ ಸಹ ದೊರೆತಿದೆ. ರೈತರ ಆರ್ಥಿಕ ಸ್ಥಿತಿಯೂ ಸಹ ಬದಲಾಗಿದೆ. ಕೃಷಿ ಮೇಳದಲ್ಲಿ ಬೀಜ ಮೇಳವನ್ನು ಮೊದಲ ಬಾರಿಗೆ ಆಯೋಜನೆ ಮಾಡಲಾಗಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ 2026 ರ ಶ್ರೇಷ್ಠ ಬೀಜೋತ್ಪಾದಕರಾದ ಶೋಭಾ ಕಾಲವಾಡ, ನಿರ್ಮಲಾ ನಾಗನೂರ, ಶಿವನಗೌಡ ಬಾಳನಗೌಡರ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.
ಕೃಷಿ ವಿಶ್ವವಿದ್ಯಾಲಯದ ವ್ಯವಸ್ಥಾಪನಾ ಮಂಡಳಿಯ ಸದಸ್ಯರಾದ ವೀರನಗೌಡ ಪೊಲೀಸಗೌಡರ, ಪಾರ್ವತಿ ಕುರ್ಲೆ, ರವಿಕುಮಾರ ಮಾಳಿಗೇರ, ಬಸವರಾಜ ಕುಂದಗೋಳಮಠ, ಮಾಲತೇಶ ಶ್ಯಾಗೋಟಿ, ಜಯಶ್ರೀ ಶಿಂತ್ರಿ, ಕೃಷಿ ವಿಶ್ವವಿದ್ಯಾಲಯದ ಶಿಕ್ಷಣ ನಿರ್ದೇಶಕ ಡಾ. ಎಂ.ವಿ. ಮಂಜುನಾಥ, ವಿಸ್ತರಣಾ ನಿರ್ದೇಶಕಿ ಡಾ.ಮಂಜುಳಾ ಎನ್. ಸೇರಿದಂತೆ ವಿಶ್ವವಿದ್ಯಾಲಯದ ಅಧಿಕಾರಿಗಳು, ಪ್ರಾಧ್ಯಾಪಕರು, ವಿದ್ಯಾರ್ಥಿಗಳು, ರೈತರು, ಸಾರ್ವಜನಿಕರು ಇತರರು ಉಪಸ್ಥಿತರಿದ್ದರು.
ಸೌಜನ್ಯ ಹಿರೇಮಠ ಪ್ರಾರ್ಥಿಸಿದರು. ಕೃಷಿ ವಿಶ್ವವಿದ್ಯಾಲಯದ ಸಂಶೋಧನಾ ನಿರ್ದೇಶಕ ಡಾ.ಎ.ಎಸ್.ಸಜ್ಜನ ಸ್ವಾಗತಿಸಿದರು. ಕೃಷಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಡಾ. ಸುರೇಖಾ ಸಂಕನಗೌಡರ ನಿರೂಪಿಸಿದರು. ಕೃಷಿ ವಿಶ್ವವಿದ್ಯಾಲಯದ ವಿಶೇಷ ಅಧಿಕಾರಿ ಡಾ.ಟಿ.ಆರ್.ಶಶಿಧರ ವಂದಿಸಿದರು.
