ರಾಷ್ಟ್ರೀಯ ಜ್ಯೂನಿಯರ್ ಅಥ್ಲೆಟಿಕ್ಸ್‌ನಲ್ಲಿ ಚಿನ್ನದ ಸಾಧನೆ ಮಾಡಿದ ಧಾರವಾಡದ ಶಿಲ್ಪಾ ಹೊಸಮನಿ

ಹಂಚಿಕೊಳ್ಳಿ

• ರಘುಸುತ
ಧಾರವಾಡ
ನಗರದ ಪ್ರತಿಭಾನ್ವಿತ ಮಧ್ಯಮ ದೂರದ ಓಟಗಾರ್ತಿ ಶಿಲ್ಪಾ ಹೊಸಮನಿ ರಾಷ್ಟ್ರೀಯ ಜ್ಯೂನಿಯರ್ ಅಥ್ಲೆಟಿಕ್ ಚಾಂಪಿಯನ್‌ಶಿಪ್ಸ್‌ನಲ್ಲಿ ೨೦ ವರ್ಷದವರೊಳಗಿನ ಮಹಿಳೆಯರ ೧,೫೦೦ ಮೀಟರ್ ಓಟದಲ್ಲಿ ಚಿನ್ನದ ಪದಕ ಬಾಚಿಕೊಂಡಿದ್ದಾರೆ.

ಚೆನ್ನೈನ್ ಜೆ.ಎನ್. ಕ್ರೀಡಾಂಗಣದಲ್ಲಿ ನಡೆದಿರುವ ಕೂಟದಲ್ಲಿ ಶುಕ್ರವಾರ ರಾತ್ರಿ ಅವರು ಈ ದೂರವನ್ನು ೪ ನಿಮಿಷ ೫೨.೧೭ ಸೆಕಂದುಗಳಲ್ಲಿ ಕ್ರಮಿಸಿ ಅಗ್ರಸ್ಥಾನಿಯಾದರು. ಓಟದ ಪ್ರಾರಂಭದಿಂದಲೂ ಮುಂದೆಯೇ ಇದ್ದ ಶಿಲ್ಪಾ ಕ್ರಮೇಣ ಮುನ್ನಡೆಯನ್ನು ಹೆಚ್ಚಿಸಿಕೊಂಡು ಕೊನೆಯಲ್ಲಿ ಸಾಕಷ್ಟು ಅಂತರವಿಟ್ಟೇ ಬಂಗಾರ ಬಾಚಿಕೊಂಡರು.

ಸ್ಥಳೀಯ ಜೆ.ಎಸ್.ಎಸ್. ಕಾಲೇಜಿನ ಬಿ.ಎ. ಪ್ರಥಮ ವರ್ಷದ ವಿದ್ಯಾರ್ಥಿನಿ ಶಿಲ್ಪಾ ಹೊಸಮನಿ ಡಿ.ವೈ.ಇ.ಎಸ್. ಹಾಸ್ಟೆಲ್‌ನಲ್ಲಿದ್ದು ಕಳೆದ ಸುಮಾರು ೭ ವರ್ಷಗಳಿಂದ ಅಥ್ಲೆಟಿಕ್ ಕೋಚ್ ಶ್ಯಾಮಲಾ ಪಾಟೀಲ ಅವರಲ್ಲಿ ತರಬೇತಿ ಪಡೆಯುತ್ತಿದ್ದಾರೆ.

ಈ ಸ್ಪರ್ಧೆಯಲ್ಲಿ ಶಿಲ್ಪಾ ಅವರ ಅತ್ಯುತ್ತಮ ಟೈಮಿಂಗ್ ೪ ನಿಮಿಷ ೩೯ ಸೆಕಂದುಗಳದ್ದಿದ್ದು, ಚೆನ್ನೈನಲ್ಲಿ ಅಂತಹ ತುರುಸಿನ `ಫಿನಿಷ್’ ಕಾಣದ್ದರಿಂದ ಅವರು ತೆಗೆದುಕೊಂಡ ಸಮಯ ಹೆಚ್ಚಿನದ್ದಾಗಿದೆ ಎಂದು ಕೋಚ್ ಶ್ಯಾಮಲಾ ಪಾಟೀಲ ಅಭಿಪ್ರಾಯಪಟ್ಟರು.

ಧಾರವಾಡ ಜಿಲ್ಲಾ ಒಲಿಂಪಿಕ್ ಅಸೋಸಿಯೇಷನ್(ಡಿಡಿಓಎ) ಅಧ್ಯಕ್ಷ ಶಿವು ಹಿರೇಮಠ, ಕಾರ್ಯದರ್ಶಿ ಬಸವರಾಜ ತಾಳೀಕೋಟಿ, ಖಜಾಂಚಿ ಕೆ.ಎಸ್. ಭೀಮಣ್ಣವರ ಹಾಗೂ ಜನತಾ ಶಿಕ್ಷಣ ಸಮಿತಿಯ ಕಾರ್ಯದರ್ಶಿ ಡಾ. ಅಜಿತ ಪ್ರಸಾದ ಹಾಗೂ ಎಲ್ಲ ಪದಾಧಿಕಾರಿಗಳೂ ಶಿಲ್ಪಾ ಹೊಸಮನಿ ಸಾಧನೆಗೆ ಅವರನ್ನು ಅಭಿನಂದಿಸಿದ್ದಾರೆ.


ಹಂಚಿಕೊಳ್ಳಿ

Leave a Reply

Your email address will not be published. Required fields are marked *