ಧಾರವಾಡ
ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಮಾಜಸೇವಾ ಕಾರ್ಯಗಳ ಮೂಲಕ ಭಕ್ತರ ಶ್ರದ್ಧಾಕೇಂದ್ರವಾಗಿರುವ ಧಾರವಾಡದ ಶ್ರೀ ಶಿರಡಿ ಸಾಯಿಬಾಬಾ ಮಂದಿರವು 24 ವರ್ಷಗಳನ್ನು ಪೂರೈಸಿ, 25ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ವರ್ಷಪೂರ್ತಿ ರಜತ ಮಹೋತ್ಸವ ಆಚರಿಸಲು ಮಂದಿರದ ಆಡಳಿತ ಮಂಡಳಿ ನಿರ್ಧರಿಸಿದೆ.
ಧಾರವಾಡದ ಪುಣ್ಯಕ್ಷೇತ್ರವಾದ ಶ್ರೀ ಶಿರಡಿ ಸಾಯಿಬಾಬಾ ಮಂದಿರವು ಆರಂಭದಲ್ಲಿ ಕೇವಲ 10×10 ಅಡಿ ತಾತ್ಕಾಲಿಕ ತಗಡಿನ ಶೆಡ್ನಲ್ಲಿ ಶ್ರೀ ಗೋಪಾಲರಾವ ಪಾಂಡೆಯವರಿಂದ ಸ್ಥಾಪನೆಯಾಯಿತು. ಅಲ್ಲಿ ಸಾಯಿಬಾಬಾ ಅವರ ಭಾವಚಿತ್ರವನ್ನಿಟ್ಟು ಪೂಜೆ ಸಲ್ಲಿಸಲು ಪ್ರಾರಂಭಿಸಲಾಯಿತು. ಬಳಿಕ ಮೇ 2002ರಲ್ಲಿ ಈಗಿರುವ ಮಂದಿರದ ನಿರ್ಮಾಣ ಕಾರ್ಯ ಪೂರ್ಣಗೊಂಡಿತು. ಆರು ಅಡಿ ಎತ್ತರದ ಸಾಯಿಬಾಬಾ ಅವರ ಮೂರ್ತಿಯನ್ನು ತಂದು, 15-10-2002ರಂದು ವಿಜಯದಶಮಿಯ ಶುಭದಿನದಂದು ವಿಧಿವಿಧಾನಗಳೊಂದಿಗೆ ಪ್ರತಿಷ್ಠಾಪಿಸಲಾಯಿತು.
ಶಿರಡಿ ಕ್ಷೇತ್ರದಲ್ಲಿ ನಡೆಯುವಂತೆ ಮಂದಿರದಲ್ಲಿಯೂ ವಿವಿಧ ಆರತಿ ಹಾಗೂ ಪೂಜಾ ವಿಧಾನಗಳನ್ನು ಶ್ರದ್ಧಾಭಕ್ತಿಯಿಂದ ನೆರವೇರಿಸಲಾಗುತ್ತಿದೆ. ಇದರಿಂದ ದಿನದಿಂದ ದಿನಕ್ಕೆ ಭಕ್ತರ ಸಂಖ್ಯೆ ಹೆಚ್ಚುತ್ತಿದ್ದು, ಮಂದಿರದ ಅಧ್ಯಕ್ಷರಾದ ಮಹೇಶ ಎಂ. ಶೆಟ್ಟಿ ಹಾಗೂ ಇತರ ಪದಾಧಿಕಾರಿಗಳು ಮಂದಿರದ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ಕೈಗೊಂಡಿದ್ದಾರೆ.
ವಿವಿಧ ಅಭಿವೃದ್ಧಿ ಕಾರ್ಯಗಳು:
ಮಂದಿರದ ಗೋಪುರವನ್ನು ತಮಿಳುನಾಡಿನ ಕುಶಲಕರ್ಮಿಗಳಿಂದ ನಿರ್ಮಿಸಲಾಗಿದ್ದು, ಶ್ರೀ ರಂಭಾಪುರಿ ಜಗದ್ಗುರುಗಳ ಅಮೃತಹಸ್ತದಿಂದ ಕಳಸಾರೋಹಣ ನೆರವೇರಿಸಲಾಯಿತು. 2005ರಲ್ಲಿ ಪ್ರತಿ ತಿಂಗಳ ಕೊನೆಯ ಗುರುವಾರ ಅನ್ನಸಂತರ್ಪಣೆ ಆರಂಭಿಸಲಾಯಿತು. ನಂತರ ಈ ಸೇವೆಯನ್ನು ಪ್ರತಿ ಗುರುವಾರ ನಡೆಸಲಾಗುತ್ತಿದೆ. ಭಕ್ತರಿಗೆ ಪ್ರಸಾದ ವಿತರಣೆ ವ್ಯವಸ್ಥೆ ಕಲ್ಪಿಸಲು ಭೋಜನಶಾಲೆಯನ್ನು ನಿರ್ಮಿಸಲಾಗಿದ್ದು, 05-03-2009ರಂದು ವಿವೇಕಾನಂದ ಆಶ್ರಮದ ಶ್ರೀ ಸ್ವಾಮಿ ವಿಜಯಾನಂದ ಸರಸ್ವತಿ ಸ್ವಾಮೀಜಿಯವರ ಅಮೃತಹಸ್ತದಿಂದ ಉದ್ಘಾಟಿಸಲಾಯಿತು.
ಸಾಯಿಬಾಬಾ ಅವರಿಗೆ ರಜತ ಸಿಂಹಾಸನ ಹಾಗೂ ಪ್ರಭಾವಳಿಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಅಮೃತಹಸ್ತದಿಂದ ಸಮರ್ಪಿಸಲಾಗಿದೆ. ಬಾಬಾ ಅವರಿಗೆ ಪ್ರಿಯವಾದ ಧುನಿಯನ್ನು ನಿರ್ಮಿಸಿ, 15-02-2010ರಂದು ಉದ್ಘಾಟಿಸಲಾಯಿತು. 2010ರಲ್ಲಿ ಸಾಯಿಬಾಬಾ ಅವರ ಪಲ್ಲಕ್ಕಿ ಸೇವೆಯನ್ನೂ ಆರಂಭಿಸಲಾಯಿತು.

ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು:
ಮಂದಿರದಲ್ಲಿ ಪ್ರತಿವರ್ಷ ರಾಮನವಮಿ, ಗುರುಪೂರ್ಣಿಮೆ ಹಾಗೂ ಸಾಯಿಬಾಬಾ ಅವರ ಪುಣ್ಯತಿಥಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿ ವಿಜೇತರಿಗೆ ಬಹುಮಾನ ವಿತರಿಸಲಾಗುತ್ತದೆ.
ಸಮಾಜಸೇವೆಗೆ ಆದ್ಯತೆ:
ಧಾರ್ಮಿಕ ಚಟುವಟಿಕೆಗಳ ಜೊತೆಗೆ ಮಂದಿರವು ಸಮಾಜಸೇವಾ ಕಾರ್ಯಗಳಲ್ಲಿಯೂ ತೊಡಗಿಸಿಕೊಂಡಿದೆ. ರಕ್ತದಾನ ಶಿಬಿರ, ಉಚಿತ ನೇತ್ರ ತಪಾಸಣೆ, ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಪುಸ್ತಕ ಹಾಗೂ ನೋಟ್ಬುಕ್ಗಳ ವಿತರಣೆ ಸೇರಿದಂತೆ ಹಲವು ಸೇವಾ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿದೆ.
ರಜತ ಮಹೋತ್ಸವದ ಅಂಗವಾಗಿ ಹಲವು ಯೋಜನೆಗಳು:
ಮಂದಿರವು 20-10-2026ರಂದು 24 ವರ್ಷಗಳನ್ನು ಪೂರೈಸಿ 25ನೇ ವರ್ಷಕ್ಕೆ ಪ್ರವೇಶಿಸಿರುವ ಹಿನ್ನೆಲೆಯಲ್ಲಿ ರಜತ ಮಹೋತ್ಸವದ ಲಾಂಛನವನ್ನು ಅನಾವರಣಗೊಳಿಸಲು ನಿರ್ಧರಿಸಲಾಗಿದೆ. ವರ್ಷಪೂರ್ತಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಯೋಜನೆ ರೂಪಿಸಲಾಗಿದೆ.
ಪರಿಸರ ಸಂರಕ್ಷಣೆಯ ಉದ್ದೇಶದಿಂದ ರಸ್ತೆ ಬದಿಗಳಲ್ಲಿ ಸಸಿಗಳನ್ನು ನೆಡುವುದು, ಸರ್ಕಾರಿ ಶಾಲೆಯೊಂದನ್ನು ದತ್ತು ಪಡೆದು ವಿದ್ಯಾರ್ಥಿಗಳಿಗೆ ಪುಸ್ತಕಗಳ ಜೊತೆಗೆ ಕಂಪ್ಯೂಟರ್ ಮತ್ತು ಪ್ರಿಂಟರ್ ಒದಗಿಸುವುದು ಹಾಗೂ ಸಮೀಪದ ಕೊಳಚೆ ಪ್ರದೇಶದ ಮಕ್ಕಳಿಗೆ ನೆರವು ನೀಡುವುದು ಮಂದಿರದ ಮುಂದಿನ ಯೋಜನೆಗಳಾಗಿವೆ.
ಅಲ್ಲದೆ, ಮಂದಿರಕ್ಕೆ ಬಸ್ಗಳಲ್ಲಿ ಆಗಮಿಸುವ ಭಕ್ತರಿಗೆ ಅನುಕೂಲವಾಗುವಂತೆ ಬಸ್ಗಾಗಿ ಕಾಯಲು ಸೂಕ್ತ ತಂಗುದಾಣ ನಿರ್ಮಿಸುವ ಆಲೋಚನೆಯನ್ನೂ ಆಡಳಿತ ಮಂಡಳಿ ಹೊಂದಿದೆ.
ಧಾರ್ಮಿಕ ಸೇವೆಯೊಂದಿಗೆ ಶಿಕ್ಷಣ, ಪರಿಸರ ಸಂರಕ್ಷಣೆ ಹಾಗೂ ಸಮಾಜಮುಖಿ ಕಾರ್ಯಗಳಿಗೆ ಹೆಚ್ಚಿನ ಒತ್ತು ನೀಡುವ ಮೂಲಕ ರಜತ ಮಹೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲು ಮಂದಿರದ ಆಡಳಿತ ಮಂಡಳಿ ಸಿದ್ಧತೆ ನಡೆಸಿದೆ.
ಆಡಳಿತ ಮಂಡಳಿಯ ಮಹೇಶ ಶೆಟ್ಟಿ, ಕಿರಣ ಶಹಾ, ಜಿ.ಆರ್. ಹೊಂಗಲಮಠ, ಉದಯ ಶೆಟ್ಟಿ, ಸಂತೋಷ ಮಿಕಲಿ, ಅಮೃತ ನರೇಂದ್ರ, ಅಪ್ಪಣ್ಣ ಬೆಣ್ಣಿ, ಸಿ.ಎಸ್. ಚಿಕ್ಕಮಠ, ಪ್ರದೀಪ ಪಕ್ಕಳ, ರಾಜಣ್ಣ ದೇಸಾಯಿ, ರತ್ನಾ ನಂದೆಪ್ಪನವರ, ಜಯಶ್ರೀ ಶಿವಪೂಜಿ, ಈರೇಶ ಅಂಚಟಗೇರಿ ಸೇರಿದಂತೆ ಅನೇಕರು ಗುರುವಾರ ನಡೆದಂತಹ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

