686 ಪದವಿ, 143 ಸ್ನಾತಕೋತ್ತರ ಹಾಗೂ ಎಂಬಿಎ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ
ಧಾರವಾಡ
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅಭಿಯಾಂತ್ರಿಕ ಮತ್ತು ತಾಂತ್ರಿಕ ಮಹಾವಿದ್ಯಾಲಯದ(ಎಸ್ಡಿಎಂಸಿಇಟಿ) 16ನೇ ಪದವಿ ಪ್ರದಾನ ಸಮಾರಂಭವು ಅ.31ರಂದು ಶನಿವಾರ ಬೆಳಿಗ್ಗೆ 11 ಗಂಟೆಗೆ ಕಾಲೇಜಿನ ಸಭಾಂಗಣದಲ್ಲಿ ನಡೆಯಲಿದೆ.
ಕಳೆದ 47 ವರ್ಷಗಳಿಂದ ಇಂಜಿನಿಯರಿಂಗ್ ಶಿಕ್ಷಣ ಕ್ಷೇತ್ರದಲ್ಲಿ ಮಹತ್ವದ ಕೊಡುಗೆ ನೀಡುತ್ತಿರುವ ಎಸ್ಡಿಎಂಸಿಇಟಿ, 2007ರಿಂದ ಸ್ವಾಯತ್ತ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದೆ. ಪ್ರಸ್ತುತ ಕಾಲೇಜಿನಲ್ಲಿ 8 ಪದವಿ, ಎಂಬಿಎ ಸೇರಿದಂತೆ 6 ಸ್ನಾತಕೋತ್ತರ ಕೋರ್ಸ್ಗಳು ಹಾಗೂ ವಿಟಿಯು ಮಾನ್ಯತೆ ಪಡೆದ 11 ಸಂಶೋಧನಾ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ವಿಶ್ವಬ್ಯಾಂಕ್ ಅನುದಾನಿತ ಟೆಕ್ವಿಪ್ (TEQIP) ಯೋಜನೆಯ ಫಲಾನುಭವಿಯಾಗಿರುವ ಸಂಸ್ಥೆಯು ದೇಶದ ಪ್ರಮುಖ ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ.
444 ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ
2025-26ನೇ ಸಾಲಿನಲ್ಲಿ ಕಾಲೇಜಿನ ಉದ್ಯೋಗ ನೇಮಕಾತಿ ಪ್ರಕ್ರಿಯೆಯಲ್ಲಿ ಸುಮಾರು 104 ಕಂಪನಿಗಳು ಭಾಗವಹಿಸಿದ್ದು, ಒಟ್ಟು 601 ಉದ್ಯೋಗದ ಆಫರ್ಗಳನ್ನು ನೀಡಿವೆ. ಈ ಪೈಕಿ 444 ವಿದ್ಯಾರ್ಥಿಗಳು ಉದ್ಯೋಗಾವಕಾಶ ಪಡೆದುಕೊಂಡಿದ್ದಾರೆ. ಗರಿಷ್ಠ ವಾರ್ಷಿಕ ವೇತನ ₹34.90 ಲಕ್ಷವಾಗಿದ್ದು, ಸರಾಸರಿ ವೇತನ ₹4.39 ಲಕ್ಷ ದಾಖಲಾಗಿದೆ.
ಶಿಕ್ಷಣ, ತರಬೇತಿ, ಸಂಶೋಧನೆ, ಇಂಟರ್ನ್ಶಿಪ್ ಮತ್ತು ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ಉದ್ದೇಶದಿಂದ ಸಂಸ್ಥೆಯು ವಿವಿಧ ಕಂಪನಿಗಳು ಹಾಗೂ ಸಂಸ್ಥೆಗಳೊಂದಿಗೆ 22 ಒಡಂಬಡಿಕೆಗಳನ್ನು ಮಾಡಿಕೊಂಡಿದೆ.
2025-26ನೇ ಸಾಲಿನಲ್ಲಿ ಹೆಚ್ಚಿನ ಸಂಖ್ಯೆಯ ಸೂಚ್ಯಂಕಿತ ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಲಾಗಿದ್ದು, ಅಧ್ಯಾಪಕರು ವಿವಿಧ ಸಮ್ಮೇಳನಗಳಲ್ಲಿ ಪ್ರಬಂಧಗಳನ್ನು ಮಂಡಿಸಿದ್ದಾರೆ. ಪುಸ್ತಕಗಳು, ಪುಸ್ತಕ ಅಧ್ಯಾಯಗಳು ಪ್ರಕಟವಾಗುವುದರೊಂದಿಗೆ ಪೇಟೆಂಟ್ ಮತ್ತು ಕಾಪಿರೈಟ್ಗಳಿಗೂ ಅರ್ಜಿ ಸಲ್ಲಿಸಲಾಗಿದೆ.
ಸಂಶೋಧನೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ 10 ಆಂತರಿಕ ಸೀಡ್ಮನಿ ಯೋಜನೆಗಳಿಗೆ ಒಟ್ಟು ₹11.84 ಲಕ್ಷ ಅನುದಾನ ನೀಡಲಾಗಿದೆ. ಅಲ್ಲದೆ, ವಿವಿಧ ಸಂಸ್ಥೆಗಳಿಂದ ಏಳು ಸಂಶೋಧನಾ ಯೋಜನೆಗಳಿಗೆ ₹163 ಲಕ್ಷ ಬಾಹ್ಯ ಅನುದಾನ ಮಂಜೂರಾಗಿದೆ. ಎನ್ಎಸ್ಎಸ್, ಉನ್ನತ್ ಭಾರತ ಅಭಿಯಾನ ಹಾಗೂ ಸಮುದಾಯ ಸಂಪರ್ಕ ಕಾರ್ಯಕ್ರಮಗಳ ಮೂಲಕ ಸ್ಥಳೀಯ ಸಮಸ್ಯೆಗಳಿಗೆ ತಂತ್ರಜ್ಞಾನ ಆಧಾರಿತ ಪರಿಹಾರ ಕಂಡುಕೊಳ್ಳಲು ಕಾಲೇಜು ಶ್ರಮಿಸುತ್ತಿದೆ.
ಕ್ರೀಡಾ ಕ್ಷೇತ್ರದಲ್ಲೂ ಗಮನಾರ್ಹ ಸಾಧನೆ
ಕಾಲೇಜು ಸುಸಜ್ಜಿತ ಒಳಾಂಗಣ ಕ್ರೀಡಾ ಸಂಕೀರ್ಣವನ್ನು ಹೊಂದಿದ್ದು, ಮೈದಾನದಲ್ಲಿ ಮಳೆಗಾಲದಲ್ಲಿಯೂ ಆಟವಾಡಲು ಅನುಕೂಲವಾಗುವಂತೆ ಸಬ್ಸರ್ಫೇಸ್ ಡ್ರೈನೇಜ್ ವ್ಯವಸ್ಥೆ ಕಲ್ಪಿಸಲಾಗಿದೆ.
2025-26ನೇ ಸಾಲಿನ ವಿಟಿಯು ಅಂತರಕಾಲೇಜು ಕ್ರೀಡಾಕೂಟದಲ್ಲಿ ರಾಜ್ಯದ 229 ಇಂಜಿನಿಯರಿಂಗ್ ಕಾಲೇಜುಗಳ ಪೈಕಿ ಎಸ್ಡಿಎಂಸಿಇಟಿ ಎರಡನೇ ಸ್ಥಾನ ಗಳಿಸಿದ್ದು, ವಿಟಿಯುನಿಂದ ₹1.5 ಲಕ್ಷ ನಗದು ಬಹುಮಾನ ಪಡೆದಿದೆ. ಇದೇ ಸಾಲಿನಲ್ಲಿ ಕಾಲೇಜಿನ 24 ವಿದ್ಯಾರ್ಥಿಗಳು ವಿಟಿಯು ಯೂನಿವರ್ಸಿಟಿ ಬ್ಲೂಸ್ಗೆ ಆಯ್ಕೆಯಾಗಿದ್ದಾರೆ.
ಇದಲ್ಲದೆ, ಕೆಸಿಇಟಿ ರ್ಯಾಂಕಿಂಗ್ನಲ್ಲಿ 5,000ಕ್ಕಿಂತ ಕಡಿಮೆ ಸ್ಥಾನ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವರ್ಷಕ್ಕೆ ₹10,000 ಶುಲ್ಕ ರಿಯಾಯಿತಿ ನೀಡಲಾಗುತ್ತಿದೆ.
686 ಪದವಿ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ
ಈ ಬಾರಿಯ ಪದವಿ ಪ್ರದಾನ ಸಮಾರಂಭದಲ್ಲಿ 686 ಪದವಿ ವಿದ್ಯಾರ್ಥಿಗಳು, 27 ಸ್ನಾತಕೋತ್ತರ ವಿದ್ಯಾರ್ಥಿಗಳು ಹಾಗೂ 116 ಎಂಬಿಎ ವಿದ್ಯಾರ್ಥಿಗಳು ಪದವಿ ಪ್ರಮಾಣಪತ್ರ ಸ್ವೀಕರಿಸಲಿದ್ದಾರೆ. ವಿವಿಧ ವಿಭಾಗಗಳಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ದತ್ತಿ ಬಹುಮಾನಗಳನ್ನು ನೀಡಲಾಗುತ್ತದೆ. ಕಾಲೇಜು ಮಟ್ಟದಲ್ಲಿ ಶೈಕ್ಷಣಿಕವಾಗಿ ಅತ್ಯುತ್ತಮ ಸಾಧನೆ ಮಾಡಿದ ಪ್ರತಿ ವಿಭಾಗದ ಮೊದಲ ಮೂವರು ವಿದ್ಯಾರ್ಥಿಗಳಿಗೆ ರ್ಯಾಂಕ್ ನೀಡಿ ಗೌರವಿಸಲಾಗುತ್ತದೆ.
ಮಾಹಿತಿ ವಿಜ್ಞಾನ ಮತ್ತು ಇಂಜಿನಿಯರಿಂಗ್ ವಿಭಾಗದ ಕುಮಾರಿ ಭೂಮಿಕಾ ಚಂದ್ರಶೇಖರ ಸಜ್ಜನ್ ಅವರು 9.91 ಸಿಜಿಪಿಎ ಗಳಿಸಿ ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಅವರಿಗೆ ಪದ್ಮವಿಭೂಷಣ ಡಾ. ಡಿ. ವೀರೇಂದ್ರ ಹೆಗ್ಗಡೆ ಚಿನ್ನದ ಪದಕ ಪ್ರದಾನ ಮಾಡಲಾಗುವುದು. ವಿಟಿಯು ಹಾಗೂ ಇತರ ವಿಶ್ವವಿದ್ಯಾಲಯಗಳಿಂದ ಪಿಎಚ್ಡಿ ಪದವಿ ಪಡೆದ ಎಂಟು ಅಭ್ಯರ್ಥಿಗಳಿಗೆ ಅಭಿನಂದನಾ ಪ್ರಮಾಣಪತ್ರಗಳನ್ನು ನೀಡಲಾಗುತ್ತದೆ.
ಗಣ್ಯರ ಉಪಸ್ಥಿತಿ
ಬ್ರಹ್ಮೋಸ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ವ್ಯವಸ್ಥಾಪಕ ನಿರ್ದೇಶಕ ಡಾ. ಜಯತೀರ್ಥ ಆರ್. ಜೋಶಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಪದವಿ ಪ್ರದಾನ ಭಾಷಣ ಮಾಡಲಿದ್ದಾರೆ. ಎಸ್ಡಿಎಂ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಡಿ. ಸುರೇಂದ್ರ ಕುಮಾರ್ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಧಾರವಾಡದ ಎಸ್ಡಿಎಂ ವಿಶ್ವವಿದ್ಯಾಲಯದ ಕುಲಪತಿ ಡಾ. ನಿರಂಜನ ಕುಮಾರ್ ಗೌರವಾನ್ವಿತ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ಮಹಾವಿದ್ಯಾಲಯದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಎಸ್ಡಿಎಂ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಜೀವಂಧರ ಕುಮಾರ್, ಕಾಲೇಜಿನ ಪ್ರಾಚಾರ್ಯ ಡಾ. ಇ. ಶ್ರೀಧರ್, ಶೈಕ್ಷಣಿಕ ವಿಭಾಗದ ಡೀನ್ ಡಾ. ವಿಜಯ ಸಿ., ವಿದ್ಯಾರ್ಥಿ ಕ್ಷೇಮಪಾಲನಾ ವಿಭಾಗದ ಡೀನ್ ಪ್ರೊ. ಜೆ.ವಿ. ವಡವಿ ಸೇರಿದಂತೆ ಇತರರು ಮಾಹಿತಿ ನೀಡಿದರು.

