ಧಾರವಾಡ
ಯಾವುದೇ ಜಡ ಪದಾರ್ಥ ಏನೇ ಮಾಡಬೇಕಾದರೂ ಒಳಗಡೆ ಚೇತನ ಬೇಕೇಬೇಕು. ಸ್ವತಂತ್ರವಾದ ಭಾವವೇ ಭಗವಂತ. ಎಲ್ಲದರಲ್ಲಿಯೂ ದೇವರಿದ್ದಾನೆ. ಬಕಾಸುರನೆಂಬ ಅಸುರ ಬಕ ಪಕ್ಷಿಯ ರೂಪದಲ್ಲಿ ಕೃಷ್ಣನನ್ನು ನುಂಗಿದಾಗ ಒಳ ಹೋದ ಕೃಷ್ಣ ಪರಮಾತ್ಮ ನಿಗಿ ನಿಗಿ ಅಗ್ನಿಯಾಗಿ ಬಿಟ್ಟ. ಅತಿಯಾದ ಶಾಖವನ್ನು ತಡೆಯದ ಬಕ ಪಕ್ಷಿಯ ರೂಪದಲ್ಲಿದ್ದ ಬಕಾಸುರ ಅದನ್ನು ಹೊರ ಉಗುಳಿದಾಗ ಹೊರ ಬಂದ ಕೃಷ್ಣ ಬಕಾಸುರನನ್ನು ಸಂಹರಿಸಿ ಬಿಟ್ಟ. ಗೋವುಗಳನ್ನು ಮತ್ತು ಗೋಪಾಲಕರನ್ನು ರಕ್ಷಣೆ ಮಾಡಿದ ಪರಮಾತ್ಮ. ಎಲ್ಲಿ ನೋಡಿದರೂ ಕೃಷ್ಣ. ಕೃಷ್ಣನೇ ಸರ್ವಸ್ವ ಆತನ ಭಕ್ತರಿಗೆ. ವೇಣುನಾದವನ್ನು ಮಾಡಿ ಇವರನ್ನೆಲ್ಲ ಸಂತಸಪಡಿಸಿದ ಕೃಷ್ಣ ಪರಮಾತ್ಮ. ನನ್ನ ಮೇಲೆ ಉಪೇಕ್ಷೆ ಮಾಡಬೇಡ. ಅನುಗ್ರಹ ಮಾಡು ಎಂದು ಶುಕಾಚಾರ್ಯರು ವೆಂಕಟೇಶ ದೇವರನ್ನು ಬೇಡುತ್ತಾರೆ ಎಂದು ಶ್ರೀ ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮತೀರ್ಥರು ಹೇಳಿದರು.
ಧಾರವಾಡ ಉತ್ತರಾದಿ ಮಠದ ನೂತನ ಕಟ್ಟಡ ಆವರಣದಲ್ಲಿ ೩೧ನೆಯ ಚಾತುರ್ಮಾಸ್ಯವನ್ನು ಕೈಗೊಂಡಿರುವ ಉತ್ತರಾದಿ ಮಠದ ಶ್ರೀಪಾದಂಗಳಾದ ಶ್ರೀ ಸತ್ಯಾತ್ಮತೀರ್ಥರು ನಾಲ್ವತ್ತೆಂಟನೆಯ ದಿನದ ಆಶೀರ್ವಚನ ಸಂದೇಶದಲ್ಲಿ ತಿಳಿಸಿದರು.
ಭೀಷ್ಮಾಚಾರ್ಯರು ಕೃಷ್ಣನಿಗೆ ಅಗ್ರಪೂಜೆಯಾಗಲಿ ಎಂದು ಕೇಳಿಕೊಂಡರು. ಅಷ್ಟು ಶುದ್ಧನಾದವನು ಕೃಷ್ಣ ಪರಮಾತ್ಮ. ಕೇವಲ ಕ್ರೀಡೆಯನ್ನು ಮಾಡುತ್ತಾನೆ ಗೋಪಿಕಾ ಸ್ತ್ರೀಯರೊಂದಿಗೆ. ಭಕ್ತಿಯಿಂದ ಪರಮಾತ್ಮನನ್ನು ಒಲಿಸಿಕೊಂಡರೆ ಮಾತ್ರ ಭಗವಂತ ಒಲಿಯುತ್ತಾನೆ. ಅಧಿಕಾರ, ಹಣ, ಮದ, ಮೋಹ ಮೊದಲಾದವುಗಳಿಂದ ಪರಮಾತ್ಮನನ್ನು ಒಲಿಸಿಕೊಳ್ಳಲು ಸಾಧ್ಯವೇ ಇಲ್ಲ. ಕೇವಲ ಭಕ್ತಿ, ಶುದ್ಧ ಭಕ್ತಿಯಿಂದ ಭಗವಂತನ ಪ್ರೀತಿಗೆ ಪಾತ್ರರಾಗಬೇಕು. ಒಂದಾದ ಮೇಲೆ ಒಂದರಂತೆ ಕಂಸ ಕಳಿಸಿದ ಎಲ್ಲಾ ಅಸುರರನ್ನು ಕೊಂದ ಕೃಷ್ಣನೇ ನಿನ್ನನ್ನು ಕೊಲ್ಲುವವನು. ಅವನೇ ನಂದನ ಮನೆಯಲ್ಲಿ ಬೆಳೆಯುತ್ತಿದ್ದಾನೆ ಎಂದು ನಾರದರು ಕಂಸನಿಗೆ ಹೇಳುತ್ತಾರೆ. ಸಿಟ್ಟಿಗೆದ್ದ ಕಂಸ ಮತ್ತೇ ವಸುದೇವ ಮತ್ತು ದೇವಕಿಯರನ್ನು ಜೈಲಿನಲ್ಲಿ ಇಡುತ್ತಾನೆ. ದೇವರನ್ನು ನೋಡುತ್ತೇನೆ ಎಂದು ಸಂಕಲ್ಪ ಮಾಡಿದಾಗಿನಿಂದ ಅದನ್ನೇ ಸ್ಮರಣೆ ಸತತ ಮಾಡುವುದರಿಂದ, ಕ್ಷಣ ಮಾತ್ರ ದರ್ಶನ ಆದರೂ ಅದನ್ನೇ ಸ್ಮರಣೆ ಮಾಡುವುದರಿಂದ ಸಾಕಷ್ಟು ಪುಣ್ಯ ಲಭಿಸುತ್ತದೆ ಎನ್ನುವುದನ್ನು ಅಕ್ರೂರನ ಚರಿತ್ರೆಯಿಂದ ನೋಡಬಹುದು. ಅಕ್ರೂರ ನಿಷ್ಕಾಮ ಭಕ್ತ. ಆತನ ಭಕ್ತಿಗೆ ಪರಮಾತ್ಮ ಮೆಚ್ಚಿಬಿಟ್ಟ. ಅಂತಹ ಪರಮಾತ್ಮನ ಸರ್ವೋತ್ತಮತ್ವವನ್ನು ಒಪ್ಪಿಕೊಂಡವನು ಅಕ್ರೂರ’ ಎಂದು ಶ್ರೀ ಸತ್ಯಾತ್ಮತೀರ್ಥ ಗುರುಗಳು ಹೇಳಿದರು.
