ಧಾರವಾಡ
ದೇಶದ ಕೃಷಿಯಲ್ಲಿ ರೈತ ಮಹಿಳೆಯರ ಪಾತ್ರ ಪ್ರಮುಖವಾಗಿದೆ ಎಂದು ಕರ್ನಾಟಕ ವಿಧಾನಸಭೆ ಸಭಾಧ್ಯಕ್ಷ ಜಿ.ಎಸ್. ಪಾಟೀಲ ಹೇಳಿದರು.
ಕೃಷಿ ವಿಶ್ವವಿದ್ಯಾಲಯದ ರೈತರ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ಶನಿವಾರ ಕೃಷಿ ಮೇಳ ಉದ್ಘಾಟಿಸಿ ಮಾತನಾಡಿದ ಅವರು, ರೈತರು ಬೆಳೆದ ಬೆಳೆಗಳಿಗೆ ಯೋಗ್ಯ ಬೆಲೆ ದೊರೆಯಬೇಕು. ವಿಶ್ವಸಂಸ್ಥೆಯು 2026 ವರ್ಷವನ್ನು ಅಂತರಾಷ್ಟ್ರೀಯ ರೈತ ಮಹಿಳಾ ವರ್ಷ ಎಂದು ಆಚರಣೆ ಮಾಡಲಾಗುತ್ತಿದೆ. ಸಶಕ್ತ ಮಹಿಳೆ ಸುಸ್ಥಿರ ಕೃಷಿ ಈ ವರ್ಷದ ಕೃಷಿ ಮೇಳದ ಧ್ಯೇಯವಾಗಿದೆ ಎಂದರು.
ಮಹಿಳೆಯರು ದಿನನಿತ್ಯ ದುಡಿಯುತ್ತಿದ್ದಾರೆ. ಪಹಣಿಯಲ್ಲಿ ಮಹಿಳೆಯರ ಹೆಸರು ಇರುವುದಿಲ್ಲ. ಬ್ಯಾಂಕ್ ನಲ್ಲಿ ಸಹ ಮಹಿಳೆಯರು ಕಾಣಸಿಗುವುದಿಲ್ಲ. ಕೃಷಿಯಲ್ಲಿ ಮಹಿಳೆಯರ ಅಂತರ ಕಡಿಮೆ ಮಾಡಲು ವಿಶ್ವಸಂಸ್ಥೆಯು ಅಂತರಾಷ್ಟ್ರೀಯ ಮಹಿಳಾ ವರ್ಷ ಎಂದು ಘೋಷಣೆ ಮಾಡಿದೆ. ಜಗತ್ತಿನಲ್ಲಿ 100 ಕ್ಕೆ 40 ಜನ ಮಹಿಳೆಯರು ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ದೇಶದ 100 ಜನ ಮಹಿಳೆಯರಲ್ಲಿ 77 ಜನ ಮಹಿಳೆಯರು ದುಡಿಯುತ್ತಿದ್ದಾರೆ. 100 ಎಕರೆಯಲ್ಲಿ 12 ಎಕರೆ ಮಹಿಳೆಯರ ಹೆಸರಿನಲ್ಲಿ ಮಾತ್ರ ಇವೆ. ಪ್ರತಿ ನಿತ್ಯ ಸುಮಾರು 14 ಗಂಟೆಗಳ ಕಾಲ ಮಹಿಳೆಯರು ದುಡಿಯುವರು. ಅಲ್ಲದೇ ಮಹಿಳೆಯರು 16 ಗಂಟೆಗಳ ಕಾಲ ಸುಗ್ಗಿ ಕಾಲದಲ್ಲಿ ಕೆಲಸ ಮಾಡುತ್ತಾರೆ. 1000 ಮಹಿಳೆಯರಲ್ಲಿ ಕೇವಲ 2 ಮಹಿಳೆಯರು ಕೃಷಿಯಲ್ಲಿ ತರಬೇತಿ ಪಡೆದಿದ್ದಾರೆ. ಹೆಣ್ಣನ್ನು ಬಲಪಡಿಸಿದರೆ ಇಡೀ ಊರು ಚನ್ನಾಗಿರುತ್ತದೆ ಎಂದು ತಿಳಿಸಿದರು.
ಮಣ್ಣಿನ ಆರೋಗ್ಯವನ್ನು ಕಾಪಾಡಬೇಕು. ಕೃಷಿ ಜೊತೆಗೆ ಹಸು, ಹೈನುಗಾರಿಕೆ, ಕುರಿ ಸಾಕಾಣಿಕೆಗೆ ಮುಂದಾಗಬೇಕು. ಕೃಷಿ ತಾಂತ್ರಿಕತೆಗೆ ಹೆಚ್ಚಿನ ಒತ್ತು ನೀಡಬೇಕು. ಯುವ ರೈತರು ಮೊಬೈಲ್ ಗಳನ್ನು ಹವಾಮಾನ, ಡ್ರೋಣ ಸಿಂಪಡಣೆ, ಮಾರುಕಟ್ಟೆ ಮಾಹಿತಿ ಸೇರಿದಂತೆ ವಿವಿಧ ಕೆಲಸಗಳಿಗೆ ಉಪಯೋಗಿಸಬೇಕು. ಉದ್ಯೋಗ ಕೊಡುವ ರೈತರಾಗಿ ಬೆಳೆಯಬೇಕು ಎಂದು ಆಶಿಸಿದರು.
ಸುಮಾರು 15 ಲಕ್ಷ ರೈತರು ಕೃಷಿ ಮೇಳದಲ್ಲಿ ಭಾಗಿಯಾಗುತ್ತಾರೆ. ಬಸವಣ್ಣನವರ ಕಾಯಕವೇ ಕೈಲಾಸ ತತ್ವನ್ನು ರೈತರು ಅಳವಡಿಸಿಕೊಳ್ಳಬೇಕು. 400 ಎಕರೆಯಲ್ಲಿ ಕೃಷಿ ಚಟುವಟಿಕೆಗಳಲ್ಲಿ ನಾನು ತೊಡಗಿಕೊಂಡಿದ್ದೆ. ರೈತರ ಸಂಕಷ್ಟವನ್ನು ನಾನು ತಿಳಿದುಕೊಂಡಿದ್ದೇನೆ. ರೈತರು ಕೃಷಿಯಲ್ಲಿ ಲಾಭದಾಯಕವನ್ನು ಕಂಡಿರುವುದಿಲ್ಲ. ಮೊದಲು ಆಹಾರ ಧಾನ್ಯಗಳನ್ನು ಆಮದು ಮಾಡಿಕೊಳ್ಳಲಾಗುತ್ತಿತ್ತು. ಆದರೆ ಇಂದು ಆಹಾರ ಧಾನ್ಯಗಳನ್ನು ಹೊರ ದೇಶಗಳಿಗೆ ರಫ್ತು ಮಾಡುತ್ತಿದ್ದೇವೆ. ಆ ನಿಟ್ಟಿನಲ್ಲಿ ರೈತರ ಶ್ರಮ ಸಾಕಷ್ಟಿದೆ. ರೈತರು ಹೊಸ ಅನ್ವೇಷಣೆ, ವಿಚಾರಗಳನ್ನು ಮಾಡಬೇಕು. ಕೃಷಿ ಮೇಳದಿಂದ ರೈತರಿಗೆ ಅನುಕೂಲವಾಗಬೇಕು ಎಂದರು.
ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷ ಡಾ. ಅಶೋಕ ದಳವಾಯಿ ಮಾತನಾಡಿ, ನಾನು ಕೂಡ ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ಆರು ವರ್ಷ ಅಧ್ಯಯನ ಮಾಡಿದ್ದೇನೆ. ಕೃಷಿ ವಿಶ್ವವಿದ್ಯಾಲಯಕ್ಕೆ ತನ್ನದೇ ಆದ ಮಾನ್ಯತೆಯಿದೆ. ಕೃಷಿ ಮೇಳಕ್ಕೆ ಬರುವ ರೈತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗುತ್ತಿದೆ. ಕೃಷಿ ಎಂದರೆ ತೋಟಗಾರಿಕೆ, ಹೈನುಗಾರಿಕೆ, ಮೀನುಗಾರಿಕೆ ಸೇರಿದಂತೆ ಹಲವಾರು ಕ್ಷೇತ್ರಗಳಿವೆ. ಕಳೆದ 78 ವರ್ಷಗಳಲ್ಲಿ ಕೃಷಿಯಲ್ಲಿ ದೇಶ ದಾಪುಗಾಲು ಇಟ್ಟಿದೆ. ಎಲ್ಲ ರೀತಿಯ ಹವಾಮಾನ, ಮಣ್ಣುಗಳು ದೇಶದಲ್ಲಿದೆ. ಪ್ರಪಂಚದ ವಿವಿಧ ದೇಶಗಳಲ್ಲಿ ಬೆಳೆಯುವ ಬೆಳೆಗಳನ್ನು ಭಾರತದಲ್ಲಿ ಬೆಳೆಯಬಹುದು ಎಂದರು.
ಕೃಷಿ ವಿಶ್ವವಿದ್ಯಾಲಯದ ಡಾ. ಎನ್.ಬಿ. ಪ್ರಕಾಶ ಅಧ್ಯಕ್ಷತೆ ವಹಿಸಿದ್ದರು. ಶ್ರೇಷ್ಠ ಕೃಷಿಕರಾದ ಲಕ್ಷ್ಮಣ ಕುಂಬಾರ, ನಾಗರಾಜ ಹುಲಗೂರ, ವಿರೇಶ ನೇಗಲಿ, ಮಲ್ಲಪ್ಪ, ಗುಡ್ಲ, ತಿಪ್ಪಣ್ಣ ಗೌಡರ, ಮಂಜುನಾಥ ಕರಲೇಕರ, ಮಂಜಯ್ಯ ಅಣ್ಣಿಗೇರಿ, ಶ್ರೇಷ್ಠ ಕೃಷಿ ಮಹಿಳೆಯರಾದ ಕೆಂಪವ್ವ ಮಾಯನ್ನವರ, ಕಾವ್ಯಾ ಕುಂಟನಹೊಸಳ್ಳಿ, ನಿರ್ಮಲಾ ಕವಲೂರ, ಶಿಲ್ಪಾ ನಾಯಿಕ, ಕೀರ್ತಿ ಜನವಾಡ, ಪುಷ್ಪಾ ಗುಲ್ಯಾನವರ, ಕಲಾವತಿ ಚವನಗೌಡ್ರ ಹಾಗೂ ಶ್ರೇಷ್ಠ ಯುವ ಕೃಷಿಕರಾದ ನಾಗರಾಜ ತಲ್ಲೂರ, ಈರಪ್ಪ ಬಾರಕೇರ, ಪ್ರವೀಣ ನಾಯಕ, ನೂರಂದಪ್ಪ ಮಂಗಾನವರ, ಚೇತನ ಪಾಟೀಲ, ವಿನಯಕುಮಾರ ನಾಯ್ಕ ಮತ್ತು ಸಂಜು ಮೊರಬದ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಹೊಸ 16 ತಳಿಗಳನ್ನು ಅನಾವರಣಗೊಳಿಸಲಾಯಿತು. ಕೃಷಿಗೆ ಸಂಬಂಧಿಸಿದ ಪುಸ್ತಕ ಕೈಪಿಡಿಗಳನ್ನು ಬಿಡುಗಡೆ ಮಾಡಲಾಯಿತು.
ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ. ಎಸ್.ವಿ. ಸುರೇಶ, ಬಾಗಲಕೋಟ ತೋಟಗಾರಿಕೆ ವಿಶ್ವವಿದ್ಯಾಲಯದ ಕುಲಪತಿ ಡಾ. ವಿಷ್ಣುವರ್ಧನ, ಕರ್ನಾಟಕ ಪ್ರದೇಶ ಕೃಷಿಕ ಸಮಾಜದ ಅಧ್ಯಕ್ಷ ನಗರದ ಮಹಾದೇವಪ್ಪ, ಕೃಷಿ ವಿಶ್ವವಿದ್ಯಾಲಯದ ವ್ಯವಸ್ಥಾಪನಾ ಮಂಡಳಿಯ ಸದಸ್ಯರಾದ ವೀರನಗೌಡ ಪೊಲೀಸಗೌಡರ, ಪಾರ್ವತಿ ಕುರ್ಲೆ, ರವಿಕುಮಾರ ಮಾಳಿಗೇರ, ಬಸವರಾಜ ಕುಂದಗೋಳಮಠ, ಮಾಲತೇಶ ಶ್ಯಾಗೋಟಿ, ಜಯಶ್ರೀ ಶಿಂತ್ರಿ ಸೇರಿದಂತೆ ವಿಶ್ವವಿದ್ಯಾಲಯದ ಅಧಿಕಾರಿಗಳು, ಪ್ರಾಧ್ಯಾಪಕರು, ವಿದ್ಯಾರ್ಥಿಗಳು, ರೈತರು, ಸಾರ್ವಜನಿಕರು ಇತರರು ಉಪಸ್ಥಿತರಿದ್ದರು.
ಸೌಜನ್ಯ ಹಿರೇಮಠ ಪ್ರಾರ್ಥಿಸಿದರು. ವಿಸ್ತರಣಾ ನಿರ್ದೇಶಕಿ ಡಾ.ಮಂಜುಳಾ ಎನ್. ಸ್ವಾಗತಿಸಿದರು. ಕೃಷಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಡಾ. ಸುರೇಖಾ ಸಂಕನಗೌಡರ ಹಾಗೂ ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿ ಡಾ. ಎಂ.ಡಿ. ಪಾಟೀಲ ನಿರೂಪಿಸಿದರು. ಕೃಷಿ ವಿಶ್ವವಿದ್ಯಾಲಯದ ಸಂಶೋಧನಾ ನಿರ್ದೇಶಕ ಡಾ. ಎ.ಎಸ್. ಸಜ್ಜನ ವಂದಿಸಿದರು.

