ಧರ್ಮ ಉಳಿದರೆ ಮೌಲ್ಯಗಳು ಉಳಿಯಲು ಸಾಧ್ಯ: ಶ್ರೀ ರಂಭಾಪುರಿ ಜಗದ್ಗುರುಗಳು

ಹಂಚಿಕೊಳ್ಳಿ

ಶ್ರೀ ರಂಭಾಪುರಿ ಪೀಠ(ಬಾಳೆಹೊನ್ನೂರು)
ಭಾರತ ಋಷಿಮುನಿಗಳ ತಪೋಭೂಮಿ. ನಮ್ಮ ಸಂಸ್ಕೃತಿ ನಮ್ಮ ಪೂರ್ವಜರು ನಮಗೆ ನೀಡಿದ ಅಮೂಲ್ಯ ಆಸ್ತಿ. ಅದನ್ನು ಕಾಪಾಡುವುದು ನಮ್ಮ ಕರ್ತವ್ಯವಾಗಿದೆ. ಧರ್ಮ ಉಳಿದರೆ ಸಮಾಜದಲ್ಲಿ ಮೌಲ್ಯಗಳು ಉಳಿಯಲು ಸಾಧ್ಯವಾಗುವುದೆಂದು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

ಶ್ರೀ ಜಗದ್ಗುರು ರಂಭಾಪುರಿ ಪೀಠದಲ್ಲಿ ಹುಣ್ಣಿಮೆ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದ ಅವರು, ಧರ್ಮದಿಂದ ಜ್ಞಾನ ಸಂಸ್ಕೃತಿಯಿಂದ ಸಂಸ್ಕಾರ ಸೇವೆಯಿಂದ ಸಂತೃಪ್ತಿ ಮತ್ತು ಏಕತೆಯಿಂದ ಸಮೃದ್ಧಿ ಪ್ರಾಪ್ತವಾಗಲು ಸಾಧ್ಯವಾಗುತ್ತದೆ. ಧರ್ಮವೆಂದರೆ ಮನುಷ್ಯನನ್ನು ಸನ್ಮಾರ್ಗದಲ್ಲಿ ನಡೆಸುವ ಜೀವನ ಮೌಲ್ಯ. ಸತ್ಯ ಅಹಿಂಸೆ ಕರುಣೆ ದಯೆ ಕ್ಷಮೆ ತ್ಯಾಗ ಸೇವೆ ಮತ್ತು ಪ್ರಾಮಾಣಿಕತೆ ಧರ್ಮದ ಪ್ರಮುಖ ಅಂಶಗಳು ಎಂದು ತಿಳಿಸಿದರು.

ದೇವರ ಮುಂದೆ ದೀಪ ಹಚ್ಚುವುದರ ಜೊತೆಗೆ ಮತ್ತೊಬ್ಬರ ಜೀವನದಲ್ಲಿ ಜ್ಞಾನದ ಬೆಳಕು ಹಚ್ಚುವ ಪ್ರಯತ್ನ ಮಾಡಬೇಕೆಂದು ಸಿದ್ಧಾಂತ ಶಿಖಾಮಣಿಯಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ್ದಾರೆ. ಧರ್ಮವೆಂದರೆ ದ್ವೇಷವಲ್ಲ. ಧರ್ಮವೆಂದರೆ ಆಚರಣೆ. ಸಂಸ್ಕೃತಿ ಎಂದರೆ ಕೇವಲ ಸಂಪ್ರದಾಯವಲ್ಲ. ಅದು ನಮ್ಮ ಬದುಕಿನ ಮೌಲ್ಯ. ಭಕ್ತಿ ಎಂದರೆ ಕೇವಲ ಕೈ ಮುಗಿಯುವುದಲ್ಲ ಎಂದರು.

ಸಂಕಷ್ಟದಲ್ಲಿರುವವರ ಕೈಹಿಡಿದು ನೆರವಾಗುವುದು. ಇತರರ ಧರ್ಮ ಮತ್ತು ನಂಬಿಕೆಗಳನ್ನು ಅಪಮಾನಿಸದೇ ನಮ್ಮ ಧರ್ಮದ ಶ್ರೇಷ್ಠ ಮೌಲ್ಯಗಳನ್ನು ನಮ್ಮ ನಡೆ ನುಡಿಗಳ ಮೂಲಕ ಜಗತ್ತಿಗೆ ತೋರಿಸಬೇಕಾಗಿದೆ. ಯುವ ಜನರಲ್ಲಿ ಧಾರ್ಮಿಕ ಅರಿವು ಮಕ್ಕಳ ಮನದಲ್ಲಿ ಸಂಸ್ಕಾರ ಕುಟುಂಬದಲ್ಲಿ ಪ್ರೀತಿ ಸಮಾಜದಲ್ಲಿ ಸಾಮರಸ್ಯ ಮತ್ತು ಪ್ರತಿಯೊಬ್ಬರಲ್ಲೂ ಸೇವಾ ಮನೋಭಾವ ಬೆಳೆದುಕೊಂಡು ಬರಬೇಕು. ಧರ್ಮದ ಹೆಸರಿನಲ್ಲಿ ವಿಭಜನೆಯಾಗದೇ ಧರ್ಮದ ಮೌಲ್ಯಗಳು ಉಳಿದು ಬೆಳೆದು ಬರುವಂತಾಗಬೇಕೆಂದರು.

ಪವಿತ್ರ ಸಮಾರಂಭದಲ್ಲಿ ಮಳಲಿಮಠದ ಡಾ. ನಾಗಭೂಷಣ ಶಿವಾಚಾರ್ಯರು, ಕಾರ್ಜುವಳ್ಳಿ ಮಠದ ಸದಾಶಿವ ಶಿವಾಚಾರ್ಯರು, ಕರ್ಪುರವಳ್ಳಿ ಮಠದ ಅಭಿನವ ಚಂದ್ರಶೇಖರ ಶಿವಾಚಾರ್ಯರು, ತಾವರೆಕೆರೆ ಡಾ. ಅಭಿನವ ಸಿದ್ಧಲಿಂಗ ಶಿವಾಚಾರ್ಯರು, ಹುಡುಗಿ ಸೋಮೇಶ್ವರ ಶಿವಾಚಾರ್ಯರು ಪಾಲ್ಗೊಂಡಿದ್ದರು. ಹರಪನಹಳ್ಳಿ ಕೊಟ್ರೇಶಪ್ಪ, ಆವರಗೊಳ್ಳ ಷಣ್ಮುಖಯ್ಯ ವೀರಯ್ಯ ಮಠದ, ಮಹೇಶ ಸಾಲಿಮಠ ಮತ್ತು ಹಾಸನ ನಗರದಿಂದ ಆಗಮಿಸಿದ ವೀರಶೈವ ಸಮಾಜ ಬಾಂಧವರು ಶ್ರೀ ಜಗದ್ಗುರುಗಳಿಗೆ ಗೌರವ ಸಮರ್ಪಿಸಿದರು. ಪ್ರಾತ:ಕಾಲ ಶ್ರೀ ಪೀಠದ ಎಲ್ಲ ದೈವಗಳಿಗೆ ವಿಶೇಷ ಪೂಜೆ-ಅನ್ನ ದಾಸೋಹ ಜರುಗಿತು.


ಹಂಚಿಕೊಳ್ಳಿ

Leave a Reply

Your email address will not be published. Required fields are marked *