ಮೈಸೂರು
ರೋಹನ್ ಪಾಟೀಲ, ಕೆ.ವಿ. ಅನೀಶ ಹಾಗೂ ಅನುಭವಿ ಕರುಣ್ ನಾಯರ್ ಸಮಯೋಚಿತ ಅರ್ಧ ಶತಕಗಳನ್ನು ದಾಖಲಿಸುವುದರೊಂದಿಗೆ ಆತಿಥೇಯ ಕರ್ನಾಟಕ ತಂಡ, ತ್ರಿಪುರಾ ಎದುರು ಇಲ್ಲಿ ನಡೆದಿರುವ ಎಲೀಟ್ ಗುಂಪಿನ ರಣಜಿ ಲೀಗ್ ಪಂದ್ಯದಲ್ಲಿ ಮಹತ್ವದ ಮೊದಲ ಸರದಿಯ ಮುನ್ನಡೆ ಸಾಧಿಸಿದೆ.
ರೋಹನ್ ಪಾಟೀಲ(೭೨, ೧೩೦ ಎಸೆತ, ೯ ಬೌಂಡರಿ), ಕೆ.ವಿ. ಅನೀಶ್(೬೮, ೧೪೨ ಎಸೆತ, ೬ ಬೌಂಡರಿ) ಹಾಗೂ ಕರುಣ್ ನಾಯರ್(೬೩, ೮೫ ಎಸೆತ, ೮ ಬೌಂಡರಿ) ಅವರುಗಳ ಅರ್ಧ ಶತಕಗಳ ನೆರವಿನಿಂದ ಕರ್ನಾಟಕ ಇಲ್ಲಿಯ ಎಸ್.ಡಿ.ಎನ್.ಆರ್.ಡಬ್ಲ್ಯೂ. ಮೈದಾನದಲ್ಲಿ ಎರಡನೇ ದಿನದಾಟದ ಕೊನೆಗೆ ತನ್ನ ಮೊದಲ ಸರದಿಯಲ್ಲಿ ೭ ವಿಕೆಟ್ಗಳಿಗೆ ೨೯೭ರ ಮೊತ್ತ ತಲುಪಿದ್ದು, ೧೦೩ ರನ್ಗಳಿಂದ ಮುಂದಿದೆ. ಸೋಮವಾರದ ಮೊದಲ ದಿನದಾಟದಲ್ಲಿ ಟಾಸ್ ಸೋತು ಬ್ಯಾಟಿಂಗಿಗೆ ಇಳಿಸಲ್ಪಟ್ಟ ತ್ರಿಪುರಾ ತನ್ನ ಮೊದಲ ಸರದಿಯಲ್ಲಿ ೧೯೪ಕ್ಕೆ ಆಲೌಟಾಗಿತ್ತು.
ಮಂಗಳವಾರ ಮುಂಜಾನೆ ೧ ವಿಕೆಟ್ಗೆ ೧೦ರ ಮೊತ್ತದಿಂದ ಆಟ ಮುಂದುವರಿಸಿದ ಕರ್ನಾಟಕ ನೈಟ್ ವಾಚ್ಮನ್’ ವೈಶಾಖ್ ವಿಜಯಕುಮಾರ(೧೨) ವಿಕೆಟ್ಟನ್ನು ಬೇಗನೇ ಕಳೆದುಕೊಂಡಿತಾದರೂ ರೋಹನ್ ಪಾಟೀಲ, ಕೆ.ವಿ. ಅನೀಶ ಹಾಗೂ ಅನುಭವಿ ಕರುಣ್ ನಾಯರ್ ಸಮಯೋಚಿತ ಅರ್ಧ ಶತಕಗಳೊಂದಿಗೆ ತಂಡಕ್ಕೆ ಆಸರೆಯಾದರು.

ಕೆ.ವಿ. ಅನೀಶ್ ಮೊದಲು ರೋಹನ್ ಪಾಟೀಲ ಅವರೊಡನೆ ೩ನೇ ವಿಕೆಟ್ಗೆ ೧೧೪ ಎಸೆತಗಳಲ್ಲಿ ಅತ್ಯುಪಯುಕ್ತ ೮೨ ರನ್ ಸೇರಿಸಿದರೆ, ನಂತರ ಕರುಣ್ ನಾಯರ್ ಜೊತೆ ಮತ್ತೆ ೪ನೇ ವಿಕೆಟ್ಗೆ ೧೮೪ ಎಸೆತಗಳಲ್ಲಿ ೧೦೬ ರನ್ ಕೂಡಿ ಹಾಕಿ ಆತಿಥೇಯರಿಗೆ ಮಹತ್ವದ ಮುನ್ನಡೆ ತಂದು ಕೊಟ್ಟರು. ಎರಡೇ ಓಟಗಳ ಅಂತರದಲ್ಲಿ ಕೆ.ವಿ. ಅನೀಶ್ ಹಾಗೂ ಕರುಣ್ ನಾಯರ್ ನಿರ್ಗಮನದ ನಂತರವೂ ಅನೀಶ್ವರ ಗೌತಮ್(ಬ್ಯಾಟಿಂಗ್ ೩೩, ೭೫ ಎಸೆತ, ೨ ಬೌಂಡರಿ, ೨ ಸಿಕ್ಸರ್) ಆತಿಥೇಯರಿಗೆ ಆಧಾರವಾದರು.
ಈ ನಡುವೆ ನಾಯಕ ಶ್ರೇಯಸ್ ಗೋಪಾಲ(೧೯) ಹಾಗೂ ಕೆ.ಎಲ್. ಶ್ರೀಜಿತ್(೧೩) ಬೇಗನೇ ಪೆವಿಲಿಯನ್ನಿಗೆ ಮರಳಿದರಾದರೂ ಕಳೆದ ಪಂದ್ಯದ ಶತಕ ವೀರ’ ಮನ್ವಂತ್ ಕುಮಾರ(ಬ್ಯಾಟಿಂಗ್ ೬) ದಿನದಾಟದ ಕೊನೆಯಲ್ಲಿ ಅನೀಶ್ವರ ಗೌತಮ್ ಅವರೊಂದಿಗೆ ಕ್ರೀಸ್ನಲ್ಲಿದ್ದು, ಪಂದ್ಯದ ಮೂರನೇ ದಿನ ಆತಿಥೇಯರ ಮುನ್ನಡೆಯನ್ನು ಹಿಗ್ಗಿಸುವ ಜವಾಬ್ದಾರಿ ಹೊತ್ತಿದ್ದಾರೆ.
ತ್ರಿಪುರಾ ಪರ ಬೌಲಿಂಗಿನಲ್ಲಿ ಬಲಗೈ ಮಧ್ಯಮ ವೇಗಿ ಅಭಿಜಿತ್ ಸರ್ಕಾರ್(೩/೫೯), ಎಡಗೈ ಸ್ಪಿನ್ನರ್ ಪರ್ವೇಜ್ ಸುಲ್ತಾನ್(೨/೭೪) ಹಾಗೂ ಆಫ್-ಬ್ರೇಕ್ ಬೌಲರ್ ಸಂದೀಪ್ ಸರ್ಕಾರ್(೨/೮೩) ಮಿಂಚಿದರು.
ಸಂಕ್ಷಿಪ್ತ ಸ್ಕೋರುಗಳು: ತ್ರಿಪುರಾ: ೮೨ ಓವರ್ಗಳಲ್ಲಿ ೧೯೪; ಕರ್ನಾಟಕ ೯೫ ಓವರ್ಗಳಲ್ಲಿ ೭ ವಿಕೆಟ್ಗಳಿಗೆ ೨೯೭.

