ಶ್ರೀಚರಣಿ, ಕ್ರಾಂತಿ ಗೌಡ್ ಮಾರಕ ದಾಳಿ, ಪ್ರತಿಕಾ ರಾವಲ್ ಅಜೇಯ ಶತಕ, ಜಿಂಬಾಬ್ವೆಯನ್ನು ೯ ವಿಕೆಟ್‌ಗಳಿಂದ ಹಣಿದ ಮಂಧಾನ ಪಡೆ

ಹಂಚಿಕೊಳ್ಳಿ

ವಡೋದರಾ
ಮೊದಲು ಶ್ರೀಚರಣಿ ಹಾಗೂ ಕ್ರಾಂತಿ ಗೌಡ್ ಅವರ ಮಾರಕ ಬೌಲಿಂಗ್, ಇದರ ಬೆನ್ನ ಹಿಂದೆಯೇ ಪ್ರತಿಕಾ ರಾವಲ್ ಅವರ ಶತಕ, ಶಫಾಲಿ ವರ್ಮಾ ಅವರ ಅರ್ಧ ಶತಕ…..ಇವೆಲ್ಲವುಗಳ ನೆರವಿನಿಂದ ಸ್ಮೃತಿ ಮಂಧಾನ ಸಾರಥ್ಯದ ಭಾರತ ತಂಡ ಶುಕ್ರವಾರ ನಡೆದ ಮೊದಲ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಪ್ರವಾಸಿ ಜಿಂಬಾಬ್ವೆ ತಂಡವನ್ನು ೯ ವಿಕೆಟ್‌ಗಳಿಂದ ಹಣಿಯಿತು.

ಈ ಗೆಲುವಿನೊಂದಿಗೆ ಮೂರು ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳ ಸರಣಿಯಲ್ಲಿ ಭಾರತ ೧-೦ ಮುನ್ನಡೆ ಸಾಧಿಸಿತು.

ಇಲ್ಲಿಯ ಕೋಟಂಬಿ ಬಿಸಿಎ ಸ್ಟೇಡಿಯಂನಲ್ಲಿ ಜಯಿಸಲು ೧೯೮ ರನ್‌ಗಳ ಬೆನ್ನು ಹತ್ತಿದ ಭಾರತ ಕೇವಲ ೨೭.೧ ಓವರ್‌ಗಳಲ್ಲಿ ಗೆಲುವಿನ ಗುರಿ ಸಾಧಿಸಿತು. ೯೪ರ ಮೊತ್ತದಲ್ಲಿ ನಾಯಕಿ ಸ್ಮೃತಿ ಮಂಧಾನ(೩೨, ೩೪ ಎಸೆತ, ೪ ಬೌಂಡರಿ) ವಿಕೆಟ್ ಕಳೆದುಕೊಂಡ ಆತಿಥೇಯರನ್ನು ಪ್ರತಿಕಾ ರಾವಲ್ ಹಾಗೂ ಶಫಾಲಿ ವರ್ಮಾ ಅವರ ಜೋಡಿ ನೋಡನೋಡುತ್ತಿದ್ದಂತೆಯೇ ಗೆಲುವಿನ ಗುರಿ ತಲುಪಿಸಿತು.

೯೬ ಎಸೆತಗಳಲ್ಲಿ ೧೫ ಬೌಂಡರಿಗಳಿದ್ದ ಅಜೇಯ ೧೦೦ ರನ್ ಸಿಡಿಸಿದ ಪ್ರತಿಕಾ ರಾವಲ್ ಹಾಗೂ ೩೩ ಎಸೆತಗಳಲ್ಲಿ ೫ ಬೌಂಡರಿ ಹಾಗೂ ೪ ಸಿಕ್ಸರ್‌ಗಳಿದ್ದ ೬೪ ರನ್ ಗಳಿಸಿ ಔಟಾಗದೇ ಉಳಿದ ಶಫಾಲಿ ವರ್ಮಾ ಗೆಲುವಿನ ದಡ ಸೇರಿಸಿದರು. ಇವರಿಬ್ಬರ ಜೋಡಿ ಮುರಿಯದ ಎರಡನೇ ವಿಕೆಟ್‌ಗೆ ೭೦ ಎಸೆತಗಳಲ್ಲಿ ೧೦೬ ರನ್ ಕೂಡಿಸಿ ಕೊಟ್ಟಿತು.

ಇದಕ್ಕೂ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಜಿಂಬಾಬ್ವೆ ಎಡಗೈ ಸ್ಪಿನ್ನರ್ ಶ್ರೀಚರಣಿ(೪/೨೩), ವೇಗಿ ಕ್ರಾಂತಿ ಗೌಡ(೩/೪೨) ಹಾಗೂ ಆಫ್-ಸ್ಪಿನ್ನರ್ ದೀಪ್ತಿ ಶರ್ಮಾ(೨/೪೪) ಎದುರು ಕುಸಿದು ಬಿಲವ್ಡ್ ಬಿಜಾ(೬೨, ೯೨ ಎಸೆತ, ೫ ಬೌಂಡರಿ) ಅವರ ಹೋರಾಟದ ಅರ್ಧ ಶತಕದ ಹೊರತಾಗಿಯೂ ೪೯.೫ ಓವರ್‌ಗಳಲ್ಲಿ ೧೯೭ಕ್ಕೆ ಸರ್ವಪತನ ಕಂಡಿತು.

ಸಂಕಿಪ್ತ ಸ್ಕೋರುಗಳು: ಜಿಂಬಾಬ್ವೆ: ೪೯.೫ ಓವರ್‌ಗಳಲ್ಲಿ ೧೯೭, ಭಾರತ: ೨೭.೧ ಓವರ್‌ಗಳಲ್ಲಿ ಒಂದು ವಿಕೆಟ್‌ಗೆ ೨೦೦. ಫಲಿತಾಂಶ: ಭಾರತಕ್ಕೆ ೯ ವಿಕೆಟ್‌ಗಳ ಗೆಲುವು. ಪಂದ್ಯದ ಆಟಗಾರ್ತಿ: ಪ್ರತಿಕಾ ರಾವಲ್(ಭಾರತ).


ಹಂಚಿಕೊಳ್ಳಿ

Leave a Reply

Your email address will not be published. Required fields are marked *