ಉತ್ತಮ ಜೀವನ ನಡೆಸುವುದೇ ನಿಜವಾದ ಧರ್ಮ: ರಂಭಾಪುರಿ ಜಗದ್ಗುರುಗಳು

ಹಂಚಿಕೊಳ್ಳಿ

ಹೊಸದುರ್ಗ
ಧರ್ಮ ಎಂದರೆ ಕೇವಲ ಆಚರಣೆ ಅಲ್ಲ. ಧರ್ಮ ಎಂದರೆ ಮತ್ತೊಬ್ಬರಿಗೆ ಉಪಕಾರ ಮಾಡುವುದು. ಸಮಾಜದಲ್ಲಿ ಶಾಂತಿ ಸೌಹಾರ್ದತೆ ಬೆಳೆಸುವುದು ಮತ್ತು ಉತ್ತಮ ಜೀವನ ನಡೆಸುವುದೇ ನಿಜವಾದ ಧರ್ಮವೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

ಬುಧವಾರ ತಾಲೂಕಿನ ದೇವಪುರ ಗ್ರಾಮದಲ್ಲಿ ಜರುಗಿದ ಜನಜಾಗೃತಿ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.

ಜೀವ ಮತ್ತು ಶಿವನ ಆಧ್ಯಾತ್ಮಿಕ ಸಂಬಂಧವನ್ನು ಅರಿತು ಶಿವನ ಸಾಕ್ಷಾತ್ಕಾರದ ಕಡೆಗೆ ಸಾಗುವುದು ವೀರಶೈವ ಧರ್ಮ ಸಾಧನೆಯ ಗುರಿಯಾಗಿದೆ. ವೀರಶೈವ ಪರಂಪರೆಯಲ್ಲಿ ಇಷ್ಟಲಿಂಗವು ಶಿವನ ನಿರಂತರ ಸ್ಮರಣೆಯ ಸಂಕೇತವಾಗಿದೆ. ಇಷ್ಟಲಿಂಗ ಪೂಜೆ ಕೇವಲ ಪೂಜಾ ವಿಧಿಯಲ್ಲ. ಅದು ನಮ್ಮ ಮನಸ್ಸನ್ನು ಶುದ್ಧಗೊಳಿಸುವ ಸತ್ಯ ನೀತಿ ಸದಾಚಾರದ ಮಾರ್ಗದಲ್ಲಿ ನಡೆಯುವ ಸಂಕಲ್ಪವಾಗಿದೆ. ಧರ್ಮದ ಮೌಲ್ಯಗಳನ್ನು ಪರಿಚಯಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಜೀವನದಲ್ಲಿ ಶಿವತತ್ವ ಅಳವಡಿಸಿಕೊಂಡು ಮಾತಿನಲ್ಲಿ ಸತ್ಯ ಕಾಯಕದಲ್ಲಿ ಪ್ರಾಮಾಣಿಕತೆ ಹೃದಯದಲ್ಲಿ ದಯೆ ನಡೆ ನುಡಿಯಲ್ಲಿ ಮಾನವೀಯತೆಯಿಂದ ಬಾಳುವುದೇ ಮನುಷ್ಯ ಜೀವನದ ಗುರಿಯಾಗಬೇಕೆಂದು ಶ್ರೀ ಜಗದ್ಗುರು ರೇಣುಕಾಚಾರ್ಯರು ಮಹಾಮುನಿ ಅಗಸ್ತ್ಯರಿಗೆ ಬೋಧಿಸಿದ ಸಿದ್ಧಾಂತ ಶಿಖಾಮಣಿಯಲ್ಲಿ ಬೋಧಿಸಿದ್ದಾರೆ. ದೇವಪುರ ಗ್ರಾಮಸ್ಥರು ಒಗ್ಗಟ್ಟಿನಿಂದ ಧರ್ಮ ಕಾರ್ಯ ಹಮ್ಮಿಕೊಂಡಿರುವುದು ಯುವ ಜನಾಂಗಕ್ಕೆ ಹೊಸ ಸ್ಫೂರ್ತಿ ಮತ್ತು ಸ್ವಾಭಿಮಾನವನ್ನು ಹೆಚ್ಚಿಸಿದೆ ಎಂದರು.

ವಿಧಾನ ಪರಿಷತ್ ಸದಸ್ಯ ನವೀನರವರು ಧರ್ಮ ಸಮಾರಂಭ ಉದ್ಘಾಟಿಸಿ ಭಾರತೀಯ ಉತ್ಕೃಷ್ಟ ಸಂಸ್ಕೃತಿ ಮತ್ತು ಪರಂಪರೆ ಬಹು ದೊಡ್ಡ ಶಕ್ತಿ. ಅವುಗಳನ್ನು ಪರಿಪಾಲಿಸಿಕೊಂಡು ಬಾಳುವುದು ಜೀವನದ ಶ್ರೇಯಸ್ಸಿಗೆ ಕಾರಣವಾಗುತ್ತದೆ. ದೇವಪುರ ಗ್ರಾಮಸ್ಥರು ಬಹಳ ಭಕ್ತಿ ಶ್ರದ್ಧೆಯಿಂದ ಕೈಗೊಂಡ ಕಾರ್ಯಕ್ರಮ ತಮಗೆ ಹರುಷ ತಂದಿದೆ ಎಂದರು.

ಮುಖ್ಯ ಅತಿಥಿಗಳಾಗಿ ವೀರಶೈವ ಸಮಾಜದ ಉಪಾಧ್ಯಕ್ಷ ಎಂ.ಶಿವಲಿಂಗಪ್ಪ, ಖನಿಜ ನಿಗಮದ ಮಾಜಿ ಅಧ್ಯಕ್ಷ ಎಸ್.ಲಿಂಗಮೂರ್ತಿ, ಹೊಸದುರ್ಗದ ಆರ್.ಹನುಮಂತಪ್ಪ, ಕೆ.ಅನಂತ್, ಜಿ.ಟಿ.ಅಜ್ಜಪ್ಪ, ದೊಡ್ಡಘಟ್ಟದ ದ್ಯಾಮಣ್ಣ, ಮಾವಿನಕಟ್ಟಿ ಡಿ.ಗುರುಸ್ವಾಮಿ, ಹೆಬ್ಬಳ್ಳಿ ಹೆಚ್.ಸಿ. ಮಲ್ಲಿಕಾರ್ಜುನ, ಕೋಡಿಹಳ್ಳಿ ತಮ್ಮಣ್ಣ ಪಾಲ್ಗೊಂಡು ಗುರುರಕ್ಷೆ ಪಡೆದರು.

ಹುಣಸಘಟ್ಟದ ಗುರುಮೂರ್ತಿ ಶಿವಾಚಾರ್ಯ ಸ್ವಾಮಿಗಳು ಮತ್ತು ಹಣ್ಣೆಮಠದ ಮರುಳಸಿದ್ಧ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಉಪದೇಶಾಮೃತವನ್ನಿತ್ತರು. ಕೆ.ಎಸ್. ಕಲ್ಮಠ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ಮಳೆಯಿಲ್ಲದೇ ಬಳಲುತ್ತಿರುವ ಈ ಭಾಗದಲ್ಲಿ ಜಗದ್ಗುರುಗಳ ಶುಭಾಗಮನದಿಂದ ಮಳೆ ಪ್ರಾರಂಭವಾಗಿರುವುದು ನಮ್ಮೆಲ್ಲರ ಸೌಭಾಗ್ಯ. ಕಾಲ ಕಾಲಕ್ಕೆ ಆಗಮಿಸಿ ನಮ್ಮೆಲ್ಲರಿಗೆ ಆಶೀರ್ವಾದ ಕರುಣಿಸಬೇಕೆಂದು ಮನವಿ ಸಲ್ಲಿಸಿದರು.

ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲ ಸಾಧಕರಿಂದ ವೇದಘೋಷ, ಚನ್ನಗಿರಿ ಹಿರೇಮಠದ ಕೇದಾರ ಶಿವಶಾಂತವೀರ ಶಿವಾಚಾರ್ಯ ಸ್ವಾಮಿಗಳಿಂದ ಪ್ರಾರ್ಥನಾ ಗೀತೆ ಜರುಗಿತು. ನಾಗಲಾಂಬಿಕೆ ಕಲ್ಮಠ ಭಕ್ತಿಗೀತೆ ಹಾಡಿದರು. ವಿರೂಪಾಕ್ಷಪ್ಪ ಸ್ವಾಗತಿಸಿದರು. ಧನಂಜಯ ದೇವಪುರ ನಿರೂಪಿಸಿದರು.

ಸಮಾರಂಭಕ್ಕೂ ಮುನ್ನ ಗ್ರಾಮದಲ್ಲಿ ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರುಗಳವರ ಅಡ್ಡಪಲ್ಲಕ್ಕಿ ಮಹೋತ್ಸವ ಹಾಗೂ ಸಾಮೂಹಿಕ ಇಷ್ಟಲಿಂಗ ಮಹಾಪೂಜೆ ಜರುಗಿತು. ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು ಜಗದ್ಗುರುಗಳವರ ದರ್ಶನಾಶೀರ್ವಾದ ಪಡೆದರು. ಸಮಾರಂಭದ ನಂತರ ಅನ್ನ ದಾಸೋಹ ನೆರವೇರಿತು.


ಹಂಚಿಕೊಳ್ಳಿ

Leave a Reply

Your email address will not be published. Required fields are marked *