ಅಭಿಯಂತರರ ದಿನಾಚರಣೆ

ಹಂಚಿಕೊಳ್ಳಿ

ಧಾರವಾಡ
ಸವದತ್ತಿ ರಸ್ತೆಯ ಪ್ರತಿಷ್ಠಿತ ಜೆ.ಎಸ್.ಎಸ್ ಕೌಶಲ್ಯ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಮಂಗಳವಾರದಂದು ‘ಅಭಿಯಂತರರ ದಿನಾಚರಣೆ’ಯನ್ನು ಅತ್ಯಂತ ಶ್ರದ್ಧೆ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಗುಲ್ಶನ್ ಸಿಂಗ್ ಮಾತನಾಡಿ, ವಿದ್ಯಾರ್ಥಿಗಳಿಗೆ ಅಭಿಯಂತರರ ದಿನಾಚರಣೆಯ ಮಹತ್ವ ಹಾಗೂ ತಾಂತ್ರಿಕ ಕ್ಷೇತ್ರದ ಜವಾಬ್ದಾರಿಗಳ ಬಗ್ಗೆ ತಿಳಿಸಿಕೊಟ್ಟರು. “ತರಬೇತಿ ಅಥವಾ ಕೋರ್ಸ್ ಪೂರ್ಣಗೊಂಡ ತಕ್ಷಣವೇ ಆತುರಪಟ್ಟು ಸ್ವಂತ ವ್ಯವಹಾರ ಆರಂಭಿಸಿ ನಷ್ಟ ಅನುಭವಿಸುವ ಬದಲು, ಆರಂಭದಲ್ಲಿ ಯಾವುದಾದರೂ ಸಂಸ್ಥೆ ಅಥವಾ ಕಂಪನಿಯಲ್ಲಿ ಕೆಲವು ವರ್ಷಗಳ ಕಾಲ ಸೇವೆ ಸಲ್ಲಿಸಿ ಪ್ರಾಯೋಗಿಕ ಅನುಭವ ಗಳಿಸಬೇಕು. ಈ ಅನುಭವ ಹಾಗೂ ವೃತ್ತಿಪರತೆಯೇ ಮುಂದೆ ಸ್ವಂತ ಉದ್ಯಮ ಕಟ್ಟಲು ಭದ್ರ ಬುನಾದಿಯಾಗುತ್ತದೆ” ಎಂದು ವಿದ್ಯಾರ್ಥಿಗಳಿಗೆ ಮಾರ್ಮಿಕವಾಗಿ ಸಲಹೆ ನೀಡಿದರು.
​
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ರಾಹುಲ್  ಉಪಾಧ್ಯಾಯ ಮಾತನಾಡಿ, “ಭಾರತದ ಶ್ರೇಷ್ಠ ತಾಂತ್ರಿಕ ಶಿಲ್ಪಿ, ಭಾರತರತ್ನ ಸರ್ ಎಂ. ವಿಶ್ವೇಶ್ವರಯ್ಯನವರ ಅಪ್ರತಿಮ ಕೊಡುಗೆ ಮತ್ತು ರಾಷ್ಟ್ರ ನಿರ್ಮಾಣದ ಸೇವೆಯನ್ನು ಸ್ಮರಿಸುವ ಉದ್ದೇಶದಿಂದ ಅವರ ಜನ್ಮದಿನವನ್ನು ‘ಅಭಿಯಂತರರ ದಿನ’ವನ್ನಾಗಿ ಆಚರಿಸಲಾಗುತ್ತದೆ. ವಿದ್ಯಾರ್ಥಿಗಳು ಸರ್ ಎಂ.ವಿ. ಅವರ ಶಿಸ್ತು, ನಿಷ್ಠೆ ಹಾಗೂ ಸಾಧನೆಗಳನ್ನು ತಮ್ಮ ಜೀವನದಲ್ಲಿ ಆದರ್ಶವಾಗಿಸಿಕೊಂಡು ದೇಶದ ಪ್ರಗತಿಗೆ ಕೊಡುಗೆ ನೀಡಬೇಕು” ಎಂದು ಕರೆ ನೀಡಿದರು.

​ರವಿ ದೇಸಾಯಿ ಸೇರಿದಂತೆ ಕಾಲೇಜಿನ ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದು ಕಾರ್ಯಕ್ರಮ ಯಶಸ್ವಿಗೊಳಿಸಿದರು.


ಹಂಚಿಕೊಳ್ಳಿ

Leave a Reply

Your email address will not be published. Required fields are marked *