ಶುಲ್ಕ ಹೆಚ್ಚಳಕ್ಕೆ ವಿದ್ಯಾರ್ಥಿ ಸಂಘಟನೆ ವಿರೋಧ

ಹಂಚಿಕೊಳ್ಳಿ

ಪಿಯುಸಿ ಪರೀಕ್ಷಾ ಶುಲ್ಕವನ್ನು ಶೇ. 50ರಷ್ಟು ಹೆಚ್ಚಿಸಿರುವ ಸರ್ಕಾರದ ವಿದ್ಯಾರ್ಥಿ ವಿರೋಧಿ ನಿರ್ಧಾರಕ್ಕೆ ಎಐಡಿಎಸ್‌ಒ ತೀವ್ರ ಖಂಡನೆ

ಧಾರವಾಡ
​ರಾಜ್ಯದಲ್ಲಿ ಪದವಿ ಪೂರ್ವ (ಪಿಯು) ಕೋರ್ಸ್‌ಗಳ ಪರೀಕ್ಷಾ ಶುಲ್ಕವನ್ನು ಏಕಾಏಕಿ ಶೇ. 50ರಷ್ಟು ಹೆಚ್ಚಿಸಿ, ಶಾಲಾ ಶಿಕ್ಷಣ ಇಲಾಖೆಯು ಆದೇಶ ಹೊರಡಿಸಿರುವುದು ಅತ್ಯಂತ ಖಂಡನೀಯ.

ಈಗಾಗಲೇ ಬರಗಾಲದಿಂದ ಕಂಗಾಲಾಗಿರುವ ರಾಜ್ಯದ ರೈತರು ಮತ್ತು ಕೃಷಿ ಕೂಲಿಕಾರರ ಕುಟುಂಬಗಳ ಮೇಲೆ ರಾಜ್ಯ ಸರ್ಕಾರವು ಶುಲ್ಕ ಏರಿಕೆಯ ಬರೆ ಎಳೆದಿದೆ. ದಿನೇ ದಿನೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದ್ದು, ಜನ ಸಾಮಾನ್ಯರು ಬದುಕು ಸಾಗಿಸುವುದೇ ಕಷ್ಟಕರವಾಗಿದೆ. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ, ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳ ಶಿಕ್ಷಣದ ಕನಸಿಗೆ ತಣ್ಣೀರು ಎರಚುವ ಕೆಲಸವನ್ನು ರಾಜ್ಯ ಸರ್ಕಾರ ಮಾಡುತ್ತಿದೆ.

ಈ ದೇಶದ ​ಮಹಾನ್ ವ್ಯಕ್ತಿಗಳ ಆಶಯದಂತೆ ಪ್ರತಿಯೊಬ್ಬ ವಿದ್ಯಾರ್ಥಿಗೂ ಗುಣಮಟ್ಟದ ಉಚಿತ ಶಿಕ್ಷಣವನ್ನು ನೀಡುವುದು ಸರ್ಕಾರದ ಆದ್ಯ ಜವಬ್ದಾರಿಯಾಗಿದೆ. ಆದರೆ, ಶಿಕ್ಷಣವನ್ನು ಪ್ರೋತ್ಸಾಹಿಸುವ ಬದಲಿಗೆ, ಪರೀಕ್ಷಾ ನೋಂದಣಿ, ಪ್ರಾಯೋಗಿಕ ಪರೀಕ್ಷೆ, ಅಂಕಪಟ್ಟಿ, ಮರುಮೌಲ್ಯಮಾಪನ ಸೇರಿದಂತೆ ಎಲ್ಲಾ ಪ್ರಕಾರದ ಶುಲ್ಕಗಳನ್ನು ಗಣನೀಯವಾಗಿ ಹೆಚ್ಚಿಸಿರುವುದು ಸರ್ಕಾರದ  ಶಿಕ್ಷಣ ವಿರೋಧಿ ಧೋರಣೆಯನ್ನು ಎತ್ತಿ ತೋರಿಸುತ್ತದೆ.

2026–27ನೇ ಶೈಕ್ಷಣಿಕ ಸಾಲಿನಿಂದ ವಿವಿಧ ಪರೀಕ್ಷಾ ಶುಲ್ಕಗಳನ್ನು ಏರಿಸಿದ್ದು, ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಶುಲ್ಕವನ್ನು ₹400ರಿಂದ ₹600ಕ್ಕೆ ಹೆಚ್ಚಿಸಲಾಗಿದೆ. ಪ್ರತಿ ವಿಷಯದ ಪರೀಕ್ಷಾ ಶುಲ್ಕವನ್ನು ₹140ರಿಂದ ₹210ಕ್ಕೆ, ಎರಡು ವಿಷಯಗಳಿಗೆ ₹270ರಿಂದ ₹405ಕ್ಕೆ ಹಾಗೂ ಮೂರು ಮತ್ತು ಅದಕ್ಕಿಂತ ಹೆಚ್ಚಿನ ವಿಷಯಗಳಿಗೆ ₹400ರಿಂದ, ₹600ಕ್ಕೆ ಹೆಚ್ಚಿಸಲಾಗಿದೆ. ದಂಡ ಶುಲ್ಕವನ್ನು ₹1,320ರಿಂದ ₹1,980ಕ್ಕೆ ಹೆಚ್ಚಿಸಲಾಗಿದೆ. ಪ್ರಾಯೋಗಿಕ ಪರೀಕ್ಷೆಯ ಪ್ರತಿ ವಿಷಯದ ಶುಲ್ಕವನ್ನು ₹110ರಿಂದ ₹165ಕ್ಕೆ, ಅಂಕಪಟ್ಟಿ ಶುಲ್ಕವನ್ನು ₹50ರಿಂದ ₹75ಕ್ಕೆ ಹಾಗೂ ಪರೀಕ್ಷಾ ಕೇಂದ್ರ ಬದಲಾವಣೆಯ ಶುಲ್ಕವನ್ನು ₹2,000ರಿಂದ ₹3,000ಕ್ಕೆ ಹೆಚ್ಚಿಸಲಾಗಿದೆ. ಅಂಕಪಟ್ಟಿಯ ದ್ವಿತೀಯ ಪ್ರತಿಯ ಶುಲ್ಕ ₹1,600ರಿಂದ ₹2,400ಕ್ಕೆ, ತೃತೀಯ ಪ್ರತಿಯ ಶುಲ್ಕ ₹3,170ರಿಂದ ₹4,755ಕ್ಕೆ ಹಾಗೂ ತತ್ಕಾಲ್ ಅಂಕಪಟ್ಟಿ ಪಡೆಯುವ ಶುಲ್ಕ ₹7,920ರಿಂದ ₹11,880ಕ್ಕೆ ಏರಿಕೆಯಾಗಿದೆ. ದ್ವಿತೀಯ ಪಿಯುಸಿ ಅಂಕಪಟ್ಟಿ ಪರಿಶೀಲನೆಗೆ ಹೊಸದಾಗಿ ₹2,000 ಶುಲ್ಕ ನಿಗದಿಪಡಿಸಲಾಗಿದೆ. ಪರೀಕ್ಷಾ ಅಂಕ ಸುಧಾರಣೆಗೆ ಪಾವತಿಸಬೇಕಾದ ಶುಲ್ಕವನ್ನು ₹262ರಿಂದ ₹525ಕ್ಕೆ ಹೆಚ್ಚಿಸಲಾಗಿದೆ.

ಈ ದುಬಾರಿ ಶುಲ್ಕ ಹೆಚ್ಚಳದಿಂದಾಗಿ ಅತಿ ಹೆಚ್ಚು ಬಡ ಹಾಗೂ ಗ್ರಾಮೀಣ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುವ ಅಪಾಯವಿದೆ. ಆದ್ದರಿಂದ, ರಾಜ್ಯ ಸರ್ಕಾರವು ಕೂಡಲೇ ತನ್ನ ಈ ವಿದ್ಯಾರ್ಥಿವಿರೋಧಿ ಆದೇಶವನ್ನು ವಾಪಸ್ ಪಡೆಯಬೇಕು ಮತ್ತು ಪರೀಕ್ಷಾ ಶುಲ್ಕ ಹೆಚ್ಚಳವನ್ನು ಸಂಪೂರ್ಣವಾಗಿ ಕೈಬಿಡಬೇಕು ಎಂದು ಆಲ್ ಇಂಡಿಯ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಶನ್  (ಎಐಡಿಎಸ್‌ಓ)ಧಾರವಾಡ ಜಿಲ್ಲಾ ಸಮಿತಿಯು ಆಗ್ರಹಿಸುತ್ತದೆ.


ಹಂಚಿಕೊಳ್ಳಿ

Leave a Reply

Your email address will not be published. Required fields are marked *