ಮನಸ್ಸಿದ್ದರೆ ಮಾರ್ಗ

ಹಂಚಿಕೊಳ್ಳಿ

ಮನಸ್ಸು ಇದ್ದರೆ ಮಾರ್ಗ ಎಂಬ ಮಾತು ವಾಸ್ತವಿಕ ಸತ್ಯವಾದುದು. ಪ್ರತಿಯೊಬ್ಬ ವ್ಯಕ್ತಿಯೂ ಹತ್ತಾರು ಕಾರ್ಯ ಮಾಡುವರು , ನೂರಾರು ಮಾತು ಆಡುವರು , ಹಲವಾರು ಕಡೆ ಹೋಗುವರು , ಹಲವರೊಂದಿಗೆ ಒಡನಾಟ ಹೊಂದುವರು.ಅವರು ಏನೇ ಮಾಡಲಿ ಪ್ರತಿ ಕಾರ್ಯದ , ಪ್ರತಿ ಮಾತಿನ , ಪ್ರತಿ ಒಡನಾಟ ಆರಂಭವಾಗುವುದು ಮನದಲ್ಲಿ ಹುಟ್ಟಿದ ಒಂದು ಚಿಂತನೆಯಿಂದ ಎನ್ನುವುದು ಅರಿಯಬೇಕು.


ನನ್ನ ಚಿಂತನೆಗಳು ಉತ್ತಮವಾಗಿದ್ದರೆ ನನ್ನ ಕಾರ್ಯಗಳು ಸಮಾಜ ಉಪಯೋಗಿ ಆಗಿರುತ್ತವೆ. ನನ್ನ ಮನದಲ್ಲಿ ಕಹಿ , ಕೆಟ್ಟ ಯೋಚನೆ ಮೂಡಿದರೆ ಅದು ನಮ್ಮನ್ನು ತಪ್ಪು ಹಾದಿಗೆ ತಳ್ಳುತ್ತದೆ. ನಮ್ಮ ಮನದಲ್ಲಿ ಒಂದು ಒಳ್ಳೆಯ ಯೋಚನೆ ಮೂಡಿದರೆ ಅ್ಉ ಒಂದು ಒಳ್ಳೆಯ ಕಾರ್ಯಕ್ಕೆ ಅಣಿ ಮಾಡುತ್ತದೆ. ಒಂದು ಒಳ್ಳೆಯ ಕಾರ್ಯ ಒಂದು ಉತ್ತಮ ಗುರಿ ನಿರ್ಧಾರ ಮಾಡುವುದು. ಹೀಗೆ ಪ್ರತಿ ವ್ಯಕ್ತಿಯ ಯಶಸ್ಸಿನ ಹಿಂದೆ ಅವರ ಇಚ್ಚಾಶಕ್ತಿ, ಶ್ರಮ, ಏಕಾಗ್ರತೆ ಜೊತೆಗೆ ಅವರ ಆಲೋಚನೆಯೆ ಮುಖ್ಯ ಅಂತಲೇ ಹೇಳಬಹುದು. ಮನಸ್ಸು ಮಾಡಿ ಮನಸ್ಸು ಮಾಡಿ ಎಂದು ಪದೇ ಪದೇ ಹಿರಿಯರು ಹೇಳುವರು. ಹೌದು ನಾವೂ ಸದಾ ಧನಾತ್ಮಕವಾಗಿ ಚಿಂತಿಸಬೇಕು. ಯಾವುದೇ ಒಂದು ಕೆಲಸ ನನ್ನಿಂದ ಆಗದು ಎಂದರೆ ಆ ಕೆಲಸ ಸರಳ ಸುಲಭವೂ ಇದ್ದರೂ ಅದು‌ ಆಗದು.ದೃಢ ಮನಸ್ಕರಾಗಿ ನಿಷ್ಟೆಯಿಂದ ಕೆಲಸದಲ್ಲಿ ತೊಡಗಿದರೆ ಕಷ್ಟದ ಕೆಲಸವನ್ನು ಇಷ್ಟ ಪಟ್ಟು‌ ಮಾಡುತ್ತೇವೆ. ಪ್ರತಿಯೊಬ್ಬರಿಗೂ ಅವರವರದೇ ಆದ ಜವಾಬ್ದಾರಿ ಗಳು ಕರ್ತವ್ಯಗಳು ಇರುತ್ತವೆ. ಅವುಗಳನ್ನು ಅವರು ಪ್ರಾಮಾಣಿಕವಾಗಿ ಮಾಡಲು ಆ ಕೆಲಸಕ್ಕೆ ನ್ಯಾಯ ಒದಗಿಸಲು ಅವರು ಮನಸ್ಸು ಮಾಡಬೇಕು. ಮನದಲ್ಲಿ ಆ ಚಿಂತನೆ ಆ ವಿಚಾರ ಮಾಡಬೇಕು.
ಯಾವುದಾದರೂ ಆದರ್ಶ ಗುರಿಗಳನ್ನು ಇಟ್ಟುಕೊಳ್ಳುವುದು ಮಾನವನ ಸಹಜ ಕ್ರಿಯೆ. ಆದರೆ ಆ ಗುರಿ ಸಾಧನೆಗೆ ಪ್ರಾಮಾಣಿಕ ಪ್ರಯತ್ನ ‌, ಧನಾತ್ಮಕ ಚಿಂತನೆ ಅತಿ ಅಗತ್ಯ. ಇದರ ಲೋಪ ಹಲವರಲ್ಲಿ ಕಾಣುವುದು. ಅಂದರೆ ಕನಸು ಕಾಣುವರು . ಆ ಕನಸು ನನಸು ಮಾಡಲು ಪಕ್ಕಾ ಯೋಜನೆ ಹಾಕಿಕೊಳ್ಳದೇ ಸಮಯ ವ್ಯಯ ಮಾಡುತ್ತಾ ನಡೆದರೆ ಆ ಕಾರ್ಯ ಆಗದು. ಇನ್ನು ಕೆಲವರು ಕನಸು ಕಾಣದೇ ಸುಮ್ಮನೇ ದಿನಗಳನ್ನು ಕಳೆಯುತ್ತಾ ವ್ಯರ್ಥ ಬದುಕು ಸಾಗಿಸುವರು.ಹೀಗಾಗಿ ನಮ್ಮ ಗುರಿ ಉದ್ದೇಶಗಳ ಮೂಲ ಮನಸ್ಸು.

ನಮ್ಮ ಮನಸ್ಸು ಪ್ರಶಾಂತವಾಗಿರಬೇಕು. ತಿಳಿಯಾದ ಸರೋವರದಂತೆ ಇರಬೇಕು.ಧ್ಯಾನ , ಯೋಗ , ಸಜ್ಜನರ ಸಂಘ , ಓದು , ಸಂಗೀತ , ಗಾಯನ ಇತರ ರಚನಾತ್ಮಕ ಹವ್ಯಾಸಗಳು ಅಭ್ಯಾಸಗಳು ನಮ್ಮ‌ಮನಸ್ಸನ್ನು ಗಟ್ಟಿ ಮಾಡುತ್ತೇವೆ. ಪರಿಶುದ್ದ ಮಾಡುತ್ತೇವೆ. ಆಗ ಅಂತಹ ಮನದಲ್ಲಿ ಧನಾತ್ಮಕ ಚಿಂತನೆ ಹುಟ್ಟಿ ಕೊಳ್ಳುತ್ತವೆ. ಅಂತಹ ಚಿಂತನೆಗಳು ಕ್ರಮೇಣ ಕಾರ್ಯ ರೂಪ ಪಡೆಯುತ್ತವೆ. ಇದರ ಮುಂದುವರೆದ ಭಾಗ ನಾವೂ ನಮ್ಮ ಕಾರ್ಯವನ್ನು ಕಾಯಾ , ವಾಚಾ , ಮನಸಾ ನಿಷ್ಠೆ ಯಿಂದ ಮಾಡುತ್ತೇವೆ. ಕೆಲಸದ ಬಗ್ಗೆ ನಮಗೆ ಗೌರವ , ಅಭಿಮಾನ ಹೆಚ್ಚುವುದು‌. ಕೆಕಸದಲ್ಲಿ ಮೇಲು ಕೀಳು ಎಂದು ವಿಂಗಡಿಸದೇ ಸಿಕ್ಕ ಕೆಲಸಕ್ಕೆ ನ್ಯಾಯ ಒದಗಿಸುವ ಕಾರ್ಯ ನಮ್ಮಿಂದಾಗುತ್ತದೆ.

ಇದಲ್ಲದೇ ಧನಾತ್ಮಕ ಚಿಂತನೆಯಿಂದ ಬದುಕಿನಲ್ಲಿ ಬರುವ ಕಷ್ಟ ಸುಖ , ನೋವು ನಲಿವು ಏಳು ಬೀಳು ಎಲ್ಲವನ್ನೂ ಸಮಾನವಾಗಿ ಸ್ವೀಕರಿಸುವ ಗುಣ ನಮ್ಮಲ್ಲಿ ಬೆಳೆಯುವುದು. ನಮ್ಮ ಮನಸ್ಸು ಪರಿಪಕ್ವವಾಗದಿದ್ದರೆ ,ಗಟ್ಟಿತನ ಬೆಳೆಸಿಕೊಳ್ಳದಿದ್ದರೆ ಸಣ್ಣ ಪುಟ್ಟ ಸಮಸ್ಯೆಗಳಿಗೂ ನಾವೂ ಹೆದರುತ್ತೇವೆ.ಕುಗ್ಗುತ್ತೇವೆ. ಹೀಗಾಗಬಾರದು ಎಂದರೆ ಕಷ್ಟ ನಷ್ಟ ಏನೇ ಬರಲಿ ಭಗವಂತನ ದಯೆ ಇರಲಿ ಎಂದು ಮುನ್ನಡೆಯ ಬೇಕು. ಯಾರಿಗೂ ಅಹಿತವನ್ನು ಬಯಸದೇ ಎಲ್ಲರಿಗೂ ಒಳಿತನ್ನು ಬಯಸುತ್ತಾ ಪರೋಪಕಾರಿಯಾಗಿ ಸ್ವಾರ್ಥರಹಿತ ಬದುಕನ್ನು ಸಾಗುವ ಕಡೆ ನಾವೂ ಮುನ್ನುಗ್ಗಬೇಕು. ಈ ರೀತಿ ಮನೋ ಭಾವ ನಮ್ಮದಾಗಬೇಕಾದರೆ ನಮ್ಮ ಚಿಂತನೆಗಳು ಉನ್ನತವಾಗಿರಬೇಕು.

ಮನವೇ ನಮ್ಮ ಬಹುತೇಕ ಎಲ್ಲಾ ಸಮಸ್ಯೆಗಳಿಗೆ , ಸಂದರ್ಭಗಳಿಗೆ ಮೂಲ. ಮನದಲ್ಲಿ ಮೂಡಿದ ಚಿಂತನೆ ವಿಚಾರಕ್ಕೆ ಅಣಿಯಾಗಿ ಕಾರ್ಯಕ್ಕೆ ಅಡಿ ಇಡುವುದು. ಪ್ರತೊಯೊಬ್ಬ ಸಾಧಕರು ಆ ಸಾಧನೆ ಹಾದಿಯಲ್ಲಿ ಸಾಗಲು ಕಾರಣ ಅವರ ಧನಾತ್ಮಕ ಚಿಂತನೆಯೇ ಸಮಸ್ಯೆಗಳನ್ನು ಸವಾಲುಗಳನ್ನಾಗಿ ಸ್ವೀಕರಿಸುವ ಅವರ ಮನೋಗುಣಧರ್ಮವೇ ಅವರ ಸಾಧನೆ ಹಾದಿಯಲ್ಲಿ ಸಾಗುವಂತೆ ಮಾಡುವುದು.
ಬದುಕಿನಲ್ಲಿ ಕಲಿಕೆಗೆ ಅಂತ್ಯ ಎಂಬುದೇ ಇಲ್ಲ. ಈ ಸತ್ಯ ಅರಿತು ನಾನೆಂಬ ಅಹಂ ದೂರ ಮಾಡಿ ಒಳಿತನ್ನು ಎಲ್ಲರಿಂದಲೂ ಕಲಿಯುವ , ತಿಳುಯುವ ಮನೋಗುಣ ನಮ್ಮದಾಗಬೇಕು. ನನಗೆಲ್ಲಾ ಗೊತ್ತು.‌ನಾನು ಹೇಳಿದ್ದೆ ಸತ್ಯ ಎಂದು ಅರಿಯದೇ ಎಲ್ಲರ ಅಭಿಪ್ರಾಯಗಳನ್ನು ಗೌರವಿಸಬೇಕು. ಉತ್ತಮ ಕೇಳಗ ಮಾತ್ರ ಉತ್ತಮ ಮಾತುಗಾರನಾಗಲು ಸಾಧ್ಯ. ಹೀಗಾಗಿ ಮುಕ್ತ ಪ್ರಜ್ಞೆ ಯನ್ನು ನಾವೂ ಹೊಂದಬೇಕು.
ನಮ್ಮ ಆಲೋಚನಗಳಲ್ಲಿ ಚಿಂತನೆಗಳಲ್ಲಿ ನಿಖರತೆಯಿರಲಿ. ಭಯ ಸಂಶಯ ಉದ್ವೇಗ ಆತಂಕ ,ದ್ವೇಷ ಅಸೂಯೆ ಮತ್ಸರ ಇವು ನಮ್ಮಿಂದ ದೂರ ಇರಬೇಕು.

ಲೇಖಕರು – ರಂಗನಾಥ ಎನ್ ವಾಲ್ಮೀಕಿ
ಶಿಕ್ಷಕರು ಹಾಗೂ ಲೇಖಕರು ಧಾರವಾಡ
ಸಂಪರ್ಕ -9945054579


ಹಂಚಿಕೊಳ್ಳಿ

Leave a Reply

Your email address will not be published. Required fields are marked *