ಧಾರವಾಡ: ತಹಶೀಲ್ದಾರ್ ವಿಚಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ತನಿಖೆ ನಡೆಯುತ್ತಿದ್ದು, ತನಿಖೆಯಲ್ಲಿ ತಪ್ಪಿತಸ್ಥರು ಯಾರು ಎಂಬುದು ಬಹಿರಂಗವಾಗಬೇಕು. ತಪ್ಪಿತಸ್ಥರಿಗೆ ಕಾನೂನುಬದ್ಧವಾಗಿ ಶಿಕ್ಷೆಯಾಗಲೇಬೇಕು ಎಂಬುದು ನಮ್ಮ ಒತ್ತಾಯವೂ ಆಗಿದೆ. ತನಿಖೆ ನಡೆಯುತ್ತಿರುವ ಸಂದರ್ಭದಲ್ಲಿ ಈ ವಿಚಾರವನ್ನು ರಾಜಕೀಯವಾಗಿ ಬಳಸಿಕೊಂಡು ಸುಳ್ಳು ಆರೋಪಗಳು ಹಾಗೂ ಡ್ರಾಮಾ ಮಾಡುತ್ತಿರುವ ಬಿಜೆಪಿಗರಿಗೆ ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಬೇಕಾಗಿದೆ ಎಂದು ಕಾಂಗ್ರೆಸ್ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಭಿವೃದ್ಧಿ ಕಾಮಗಾರಿಗಳ ಕುರಿತು ಮಾಹಿತಿ ಕೇಳಿದ್ದು ಬಿಜೆಪಿಯವರೇ. ಆದರೆ ಇಂದು ಧಾರವಾಡ-71 ಕ್ಷೇತ್ರದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿರುವುದು ವಿಪರ್ಯಾಸ. ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ತಮ್ಮ ತಮ್ಮ ಭಾಗಗಳಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿರುವುದನ್ನು ಕಂಡು ಸಾಮಾನ್ಯ ಜನತೆ ಸಂತಸ ವ್ಯಕ್ತಪಡಿಸುತ್ತಿದ್ದಾರೆ.
ಆದರೆ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ ಎಂಬ ರೀತಿಯಲ್ಲಿ ಬಿಂಬಿಸಲು ಬಿಜೆಪಿ ಯವರು ಪ್ರಯತ್ನಿಸುತ್ತಿರುವುದು ಹಾಸ್ಯಾಸ್ಪದವಾಗಿದೆ. ಜನರ ಕಣ್ಣಿಗೆ ಕಾಣುತ್ತಿರುವ ಅಭಿವೃದ್ಧಿ ಕಾಮಗಾರಿಗಳನ್ನು ಮರೆಮಾಚಲು ಸುಳ್ಳು ಆರೋಪಗಳ ಮೊರೆ ಹೋಗುವುದು ಸರಿಯಲ್ಲ.
ಶಾಸಕರನ್ನು ಚರ್ಚೆಗೆ ಕರೆಯುತ್ತಿರುವ ಬಿಜೆಪಿಯವರು ಮೊದಲು ಕಾಂಗ್ರೆಸ್ ಕಾರ್ಯಕರ್ತರನ್ನು ಎದುರಿಸುವ ಧೈರ್ಯ ತೋರಿಸಲಿ. ಕಾಂಗ್ರೆಸ್ ಕಾರ್ಯಕರ್ತರ ಸಂಘಟನಾ ಶಕ್ತಿ ಮತ್ತು ಜನಬೆಂಬಲ ಏನೆಂಬುದನ್ನು 2023ರ ಚುನಾವಣೆಯು ಅಭಿವೃದ್ಧಿ ಹಿನ್ನೆಲೆಯಲ್ಲಿಯೇ ನಡೆದಿದ್ದು ಜನತೆ ಸ್ಪಷ್ಟವಾಗಿ ಉತ್ತರ ನೀಡಿದ್ದಾರೆ. ಆ ವಿಚಾರವನ್ನು ಬಿಜೆಪಿ ಮುಖಂಡರು ಮರೆಯಬಾರದು.
ಅಭಿವೃದ್ಧಿ ವಿಚಾರದಲ್ಲಿ ಜನರ ಮುಂದೆ ವಾಸ್ತವಾಂಶಗಳೊಂದಿಗೆ ಮಾತನಾಡಲು ನಾವು ಸಿದ್ಧರಿದ್ದೇವೆ. ಸುಳ್ಳು ಆರೋಪಗಳು, ರಾಜಕೀಯ ಡ್ರಾಮಾಗಳ ಬದಲಿಗೆ ಕ್ಷೇತ್ರದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ರಚನಾತ್ಮಕವಾಗಿ ಚರ್ಚಿಸುವುದು ಸೂಕ್ತ. ಜನರ ವಿಶ್ವಾಸಕ್ಕೆ ಧಕ್ಕೆ ತರುವ ಯಾವುದೇ ಪ್ರಯತ್ನವನ್ನು ಮಾಡಿದರೆ ಜನರೇ ತಕ್ಕ ಉತ್ತರ ನೀಡಲಿದ್ದಾರೆ ಎಂದು ಗ್ಯಾರಂಟಿ ಅನುಷ್ಠಾನ ಸಮಿತಿ ಧಾರವಾಡ ಅರ್ಬನ್ ಅಧ್ಯಕ್ಷ ಬಸವರಾಜ ಹೆಬ್ಬಳ್ಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
