ಐತಿಹಾಸಿಕ ಚಾತುರ್ಮಾಸ್ಯಕ್ಕೆ ತೆರೆ: ಧಾರವಾಡದ ಭಕ್ತರಿಗೆ ಶ್ರೀ ಸತ್ಯಾತ್ಮತೀರ್ಥರ ಕೃತಜ್ಞತಾ ನಮನ
ಧಾರವಾಡ
ಧಾರವಾಡದಲ್ಲಿ ನಡೆದ ಈ ಭವ್ಯ ಹಾಗೂ ಐತಿಹಾಸಿಕ ಚಾತುರ್ಮಾಸ್ಯ ರಾಮದೇವರಿಗೆ, ಆಚಾರ್ಯರಿಗೆ ಹಾಗೂ ಗುರುಗಳಿಗೆ ಮೆಚ್ಚುಗೆಯಾಗುವ ರೀತಿಯಲ್ಲಿ ನೆರವೇರಿದೆ. ಇದಕ್ಕೆ ಹರಿವಾಯು ಗುರುಗಳ ಮಹಿಮೆಯೇ ಕಾರಣ. ಐವತ್ತು ದಿನಗಳ ಕಾಲ ಮನೆ ಕೆಲಸವೆಂದು, ದೇವರ ಕೆಲಸವೆಂದು ಭಾವಿಸಿ ಶ್ರದ್ಧೆ, ಶಿಸ್ತು ಮತ್ತು ಭಕ್ತಿಯಿಂದ ಸೇವೆ ಸಲ್ಲಿಸಿದ ಪ್ರತಿಯೊಬ್ಬ ಸ್ವಯಂಸೇವಕರಿಗೂ ಹೃದಯಪೂರ್ವಕ ಕೃತಜ್ಞತೆಗಳು ಎಂದು ಶ್ರೀ ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮತೀರ್ಥರು ಹೇಳಿದರು.
ಧಾರವಾಡ ಉತ್ತರಾದಿ ಮಠದ ನೂತನ ಕಟ್ಟಡ ಆವರಣದಲ್ಲಿ ನಡೆದ 31ನೇ ಚಾತುರ್ಮಾಸ್ಯದ ಸಮಾರೋಪ ಸಮಾರಂಭದಲ್ಲಿ ಆಶೀರ್ವಚನ ನೀಡಿದ ಅವರು, ಧಾರವಾಡದ ಭಕ್ತರು, ಸ್ವಯಂಸೇವಕರು, ದಾನಿಗಳು ಹಾಗೂ ಚಾತುರ್ಮಾಸ್ಯ ಸಮಿತಿಯ ಸೇವೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು.
ಪುರುಷರು, ಮಹಿಳೆಯರು, ಯುವಕರು ಹಾಗೂ ಬಾಲಕರು ಸಲ್ಲಿಸಿದ ಸೇವೆ ಮೆಚ್ಚುಗೆಗೆ ಪಾತ್ರವಾಗಿದೆ. ನಿಮ್ಮೆಲ್ಲರ ಹಿರಿಯರ ಪುಣ್ಯದಿಂದ ಈ ಕಾರ್ಯ ಸಾಧ್ಯವಾಗಿದೆ. ನಿಮ್ಮನ್ನು ನೋಡಿದ ಬಳಿಕ ಧಾರವಾಡ ಬಿಟ್ಟು ತೆರಳಬೇಕು ಎನಿಸುತ್ತಿಲ್ಲ ಎಂದು ಶ್ರೀಗಳು ಭಾವುಕರಾಗಿ ನುಡಿದರು.
ಗುರು ಅನುಗ್ರಹವೇ ಯಶಸ್ಸಿನ ಶಕ್ತಿ;
ಚಾತುರ್ಮಾಸ್ಯದ ಯಶಸ್ಸಿನಲ್ಲಿ ತಮ್ಮದೇನೂ ಇಲ್ಲ. ಹಿಂದಿನ ಎಲ್ಲ ಗುರುಗಳ ಸಂಕಲ್ಪಬಲ, ಪರಮಾನುಗ್ರಹ ಹಾಗೂ ಭಗವಂತನ ಕೃಪೆಯಿಂದಲೇ ಇಷ್ಟೊಂದು ದೊಡ್ಡ ಕಾರ್ಯ ಯಶಸ್ವಿಯಾಗಿದೆ ಎಂದು ಶ್ರೀ ಸತ್ಯಾತ್ಮತೀರ್ಥರು ಹೇಳಿದರು.
ಪಾಠ, ಪ್ರವಚನ, ಯಜ್ಞ, ಹೋಮ, ಸಾಂಸ್ಕೃತಿಕ ಕಾರ್ಯಕ್ರಮಗಳು, ಸಭೆ-ಸಮಾರಂಭಗಳು, ವಿದ್ವಾಂಸರ ಗೋಷ್ಠಿಗಳು, ವೇದ ಪಾರಾಯಣ, ವೈದ್ಯಕೀಯ ಸಲಹೆ, ಮಹಿಳಾ ಮತ್ತು ಯುವ ಗೋಷ್ಠಿಗಳು, ಸಂಧ್ಯಾವಂದನೆ ಹಾಗೂ ಪೂಜೆ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಅತ್ಯಂತ ಯಶಸ್ವಿಯಾಗಿ ನಡೆದಿವೆ. ಸ್ವಯಂಸೇವಕರ ಶಿಸ್ತು, ಸಂಯಮ, ಒಗ್ಗಟ್ಟು ಹಾಗೂ ಮಹಿಳೆಯರು ಸಲ್ಲಿಸಿದ ಸೇವೆ ನಿಜಕ್ಕೂ ದಾಖಲೆಯಾಗಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಸೇವಾ ಕಾರ್ಯ ಮುಂದುವರಿಯಲಿ:
ಧಾರವಾಡದ ಈ ಚಾತುರ್ಮಾಸ್ಯ ಒಂದು ದಾಖಲೆಯಾಗಿದೆ. ಗಣ್ಯರು, ಹಿರಿಯರು, ಸಮಿತಿ ಸದಸ್ಯರು, ಯುವಕರು, ಯುವತಿಯರು, ಭಕ್ತರು ಹಾಗೂ ದಾನಿಗಳು ಶಕ್ತಿ ಮೀರಿ ಸೇವೆ ಸಲ್ಲಿಸಿದ್ದಾರೆ. ರಾಮದೇವರ ಸೇವೆ ಹಗಲಿರುಳು ನಡೆದಿದೆ. ಎಲ್ಲ ದಾನವೂ ರಾಮದೇವರಿಗೆ ಸಲ್ಲಿಸಿದ ಸೇವೆ ಹಾಗೂ ಭಗವಂತನಿಗೆ ಸಮರ್ಪಣೆ ಎಂದು ಶ್ರೀಗಳು ಹೇಳಿದರು.
ಚಾತುರ್ಮಾಸ್ಯದ ಸಂದರ್ಭದಲ್ಲಿ ಸಂಗ್ರಹವಾದ ನಿಧಿಯನ್ನು ಧಾರವಾಡದಲ್ಲಿಯೇ ಧಾರ್ಮಿಕ ಹಾಗೂ ಸೇವಾ ಕಾರ್ಯಗಳಿಗೆ ಬಳಸಲಾಗುವುದು. ಹಯಗ್ರೀವ ದೇವರ ಅನುಗ್ರಹದಿಂದ ಇಲ್ಲಿನ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು. ಚಾತುರ್ಮಾಸ್ಯದ ನಂತರವೂ ನಿತ್ಯ ಕಾರ್ಯಕ್ರಮಗಳು, ಗಾಯತ್ರಿ ಜಪ ಸೇರಿದಂತೆ ಧಾರ್ಮಿಕ ಚಟುವಟಿಕೆಗಳು ಮುಂದುವರಿಯಬೇಕು. ಆಲಸ್ಯ ದೂರವಾಗಿ ಭಕ್ತಿ ಉಳಿದಾಗ ಮಾತ್ರ ಚಾತುರ್ಮಾಸ್ಯದ ನಿಜವಾದ ಫಲ ದೊರೆತಂತಾಗುತ್ತದೆ ಎಂದು ಶ್ರೀಗಳು ಆಶಿಸಿದರು.
ನಾಲ್ಕು ಕೋಟಿ ರೂ. ಕಾಣಿಕೆ ಸಮರ್ಪಣೆ:
ಚಾತುರ್ಮಾಸ್ಯ ಸಮಿತಿ ಹಾಗೂ ಧಾರವಾಡದ ಭಕ್ತರ ಪರವಾಗಿ ಉತ್ತರಾದಿ ಮಠಕ್ಕೆ ನಾಲ್ಕು ಕೋಟಿ ರೂಪಾಯಿಗಳ ಹಮ್ಮಿಣಿ ಕಾಣಿಕೆಯನ್ನು ಶ್ರೀ ಸತ್ಯಾತ್ಮತೀರ್ಥರಿಗೆ ಸಮರ್ಪಿಸಲಾಯಿತು. ಈ ನಿಧಿಯನ್ನು ಮಠದ ಕಟ್ಟಡ ಕಾಮಗಾರಿ ಪೂರ್ಣಗೊಳಿಸಲು ಧಾರವಾಡದಲ್ಲಿಯೇ ಬಳಸುವುದಾಗಿ ಶ್ರೀಗಳು ತಿಳಿಸಿದರು.
ಭಕ್ತರ ಕಣ್ಣಲ್ಲಿ ನೋವು; ಸವಣೂರಿನತ್ತ ಶ್ರೀಗಳ ಪ್ರಯಾಣ;
ನಾಲ್ವತ್ತೊಂಬತ್ತನೇ ದಿನದ ಕಾರ್ಯಕ್ರಮಗಳು ರಾತ್ರಿ ತಡವಾಗಿ ಮುಕ್ತಾಯಗೊಂಡ ಬಳಿಕ ಸಮಾರೋಪ ಸಮಾರಂಭ ನಡೆಯಿತು. ವಿವಿಧ ಪಂಡಿತರು, ಕಾರ್ಯಾಧ್ಯಕ್ಷರು ಹಾಗೂ ಚಾತುರ್ಮಾಸ್ಯ ಸಮಿತಿ ಅಧ್ಯಕ್ಷರು ಮಾತನಾಡಿ, ಶ್ರೀಗಳ ಸಾನಿಧ್ಯವೇ ಧಾರವಾಡ ಚಾತುರ್ಮಾಸ್ಯದ ಯಶಸ್ಸಿಗೆ ಪ್ರಮುಖ ಕಾರಣ ಎಂದು ಅಭಿಪ್ರಾಯಪಟ್ಟರು.
ಶನಿವಾರ ಸಂಜೆ ಪೂಜೆ ಹಾಗೂ ಪ್ರಸಾದದ ಬಳಿಕ ಶ್ರೀ ಸತ್ಯಾತ್ಮತೀರ್ಥರು ಸೀಮೋಲಂಘನಕ್ಕಾಗಿ ನುಗ್ಗೀಕೇರಿಗೆ, ಅಲ್ಲಿಂದ ಸವಣೂರಿನತ್ತ ಪ್ರಯಾಣ ಬೆಳೆಸಿದರು. ಈ ವೇಳೆ ಸಾವಿರಾರು ಭಕ್ತರು ಭಾವುಕರಾಗಿ ಶ್ರೀಗಳನ್ನು ಬೀಳ್ಕೊಟ್ಟರು. ಶ್ರೀಗಳ ಆಶೀರ್ವಾದ ಪಡೆಯಲು ಭಕ್ತರು ಅಪಾರ ಸಂಖ್ಯೆಯಲ್ಲಿ ನೆರೆದಿದ್ದರು.
ಸನಾತನ ಧರ್ಮ ಉಳಿಯಬೇಕು. ಮನೆ ಮನೆಗಳಲ್ಲಿ ಸನಾತನ ಧರ್ಮದ ಸಂಸ್ಕಾರ ಬೆಳೆಯಬೇಕು. ಯುವಾತ್ಮ ತಂಡ ಇದೇ ರೀತಿಯ ಉತ್ತಮ ಕಾರ್ಯಗಳನ್ನು ಮುಂದುವರಿಸಬೇಕು. ಇನ್ನಷ್ಟು ಸಾಧನೆಗಳು ನಡೆಯಲಿ ಎಂದು ಶ್ರೀ ಸತ್ಯಾತ್ಮತೀರ್ಥರು ಆಶೀರ್ವದಿಸಿದರು.


ಹೊಳ್ಳೆ ಕಾರ್ಯಕ್ರಮ ಇದರಜ್ಯೋತೆಗೆ ನಮ್ಮ ಆತ್ಮ ರಕ್ಷಣೆ ಬೇಕಾಗ್ತಗಿದೆ. ಈಗಿನಕಾಲದಲ್ಲಿ ನಾವು ನಮ್ಮಮನೆ ದೇವಸ್ಥಾನ ರಕ್ಷneಯೆಲ್ಲದ್ದೇವೆ. ನಮ್ಮ ನಿಜವಾದೆ ತಾಯಿಯ ಗೊರಕ್ಷಣೆಯನ್ನು ಮಾಡಲಾಗುತಿಲ್ಲ.ನಮ್ಮ ರಕ್ಷಣೆ ಬಗ್ಗೆ ನಾವು ಸಂಗಟಿಕರಾಗ್ಬೇಕು.