ಸ್ವಾಮೀಜಿಗಳಿಗೆ ಅವಮಾನ ಬೃಹತ್ ಪ್ರತಿಭಟನೆ

ಹಂಚಿಕೊಳ್ಳಿ

ಹುಬ್ಬಳ್ಳಿ
ಭಾರತೀಯ ಜನತಾ ಪಾರ್ಟಿ ಹುಬ್ಬಳ್ಳಿ–ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದ ವತಿಯಿಂದ, ಕ್ಷೇತ್ರದ ಅಧ್ಯಕ್ಷ ಮಂಜುನಾಥ ಕಾಟಕರ ನೇತೃತ್ವದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸ್ವಾಮೀಜಿಗಳಿಗೆ ಮಾಡಿರುವ ಅವಮಾನವನ್ನು ತೀವ್ರವಾಗಿ ಖಂಡಿಸಿ ಇಎಸ್‌ಐ ಆಸ್ಪತ್ರೆ ಹತ್ತಿರ ಪ್ರತಿಭಟನೆ ನಡೆಸಲಾಯಿತು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವು ಮೆಣಸಿನಕಾಯಿ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿ, ಪ್ರಸಿದ್ಧ ಹುಬ್ಬಳ್ಳಿಯ ಶ್ರೀ ಮೂರುಸಾವಿರ ಮಠದ ಘನತೆ ಮತ್ತು ಗೌರವಕ್ಕೆ ಧಕ್ಕೆ ತರುವ ರೀತಿಯಲ್ಲಿ ಮೂರು ಸಾವಿರ ಇರಲಿ, ಆರು ಸಾವಿರ ಇರಲಿ ಎಂಬ ಅಹಂಕಾರದ ಮಾತುಗಳನ್ನು ಆಡಿದ ಡಿ.ಕೆ. ಶಿವಕುಮಾರ್ ಅವರ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದರು.

ಅಲ್ಲದೆ, ಇತರ ಮಠಾಧೀಶರ ಕುರಿತು ನನ್ನ ಸೇವೆಯನ್ನು ಮಾಡಿರಿ ಎಂದು ಹೇಳಿರುವುದು ಅತ್ಯಂತ ಖಂಡನೀಯ. ಪೂಜ್ಯ ಶ್ರೀಗಳನ್ನು ಗೌರವಿಸುವ ಬದಲು ಇಂತಹ ಅವಮಾನಕರ ಹೇಳಿಕೆಗಳನ್ನು ನೀಡಿರುವುದು ಅವರ ಸಂಸ್ಕೃತಿಯನ್ನು ಎತ್ತಿ ತೋರಿಸುತ್ತದೆ. ಅಧಿಕಾರ ಸಿಕ್ಕ ತಕ್ಷಣ ತಲೆಗೇರುವ ದರ್ಪ ಎಂತಹವರನ್ನೂ ಮಣ್ಣುಪಾಲು ಮಾಡುತ್ತದೆ ಎಂಬುದನ್ನು ಮರೆಯಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪೂಜ್ಯ ಮಠಾಧೀಶರಿಗೆ ಗೌರವ ನೀಡಬೇಕು. ಶ್ರೀಮಠಗಳ ಘನತೆಗೆ ಧಕ್ಕೆ ತರುವ ಇಂತಹ ಹೇಳಿಕೆಗಳಿಗಾಗಿ ಡಿ.ಕೆ. ಶಿವಕುಮಾರ್ ಅವರು ಕೂಡಲೇ ಸಮಸ್ತ ಮಠಾಧೀಶರ ಹಾಗೂ ಹಿಂದೂ ಸಮಾಜದ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.

ಹು-ಧಾ ಪೂರ್ವ ಕ್ಷೇತ್ರದ ಅಧ್ಯಕ್ಷ ಮಂಜುನಾಥ ಕಾಟಕರ ಮಾತನಾಡಿ, ರಾಜ್ಯದ ಪ್ರತಿಯೊಂದು ಮಠಮಾನ್ಯಗಳೂ ತಮ್ಮದೇ ಆದ ಪರಂಪರೆ, ಸಾಮರ್ಥ್ಯ ಹಾಗೂ ಜನಪರ ಕಳಕಳಿಯೊಂದಿಗೆ ಸಮಾಜದ ಉನ್ನತಿಗಾಗಿ ಶ್ರಮಿಸುತ್ತಿವೆ. ಇಂತಹ ಗೌರವಾನ್ವಿತ ಮಠಗಳ ಪೈಕಿ ಹುಬ್ಬಳ್ಳಿಯ ಪ್ರಸಿದ್ಧ ಶ್ರೀ ಮೂರುಸಾವಿರ ಮಠದ ಕುರಿತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನೀಡಿರುವ ಅವಹೇಳನಕಾರಿ ಹೇಳಿಕೆ ಖಂಡನೀಯ.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೇ, ನಿಯಂತ್ರಣ ತಪ್ಪಿದ ನಿಮ್ಮ ನುಡಿಗಳು, ಮಠಮಾನ್ಯಗಳು ಹಾಗೂ ಪೂಜ್ಯ ಮಠಾಧೀಶರ ಕುರಿತು ಆಡಿರುವ ಉಡಾಫೆಯ ಮಾತುಗಳು ನಿಮ್ಮ ಅಹಂಕಾರದ ಪರಮಾವಧಿಯನ್ನು ತೋರಿಸುತ್ತಿವೆ. ಅಧಿಕಾರದ ಮದದಲ್ಲಿ ಮಠಮಾನ್ಯಗಳ ಘನತೆ ಮತ್ತು ಮಠಾಧೀಶರ ಗೌರವಕ್ಕೆ ಧಕ್ಕೆ ತರುವ ಹೇಳಿಕೆಗಳನ್ನು ನೀಡುವುದು ಸಮಂಜಸವಲ್ಲ.

ಅಧಿಕಾರ ಶಾಶ್ವತವಲ್ಲ, ಆದರೆ ನಮ್ಮ ನಡೆನುಡಿ ಮತ್ತು ಸಂಸ್ಕಾರವೇ ನಮ್ಮ ವ್ಯಕ್ತಿತ್ವವನ್ನು ಪ್ರತಿಬಿಂಬಿಸುತ್ತವೆ. ಪೂಜ್ಯ ಮಠಾಧೀಶರನ್ನು ಗೌರವಿಸುವುದು ನಮ್ಮ ಸಂಸ್ಕೃತಿ. ಶ್ರೀ ಮೂರುಸಾವಿರ ಮಠದ ಘನತೆಗೆ ಧಕ್ಕೆ ತರುವ ಹೇಳಿಕೆಗಾಗಿ ಡಿ.ಕೆ. ಶಿವಕುಮಾರ್ ಅವರು ಕ್ಷಮೆಯಾಚಿಸಬೇಕು.

ಈ ವೇಳೆಯಲ್ಲಿ ಮಾಜಿ ಮಹಾಪೌರ ಡಿ.ಕೆ. ಚವ್ಹಾಣ, ಬಿಜೆಪಿ ಹಿರಿಯ ಮುಖಂಡ ಪ್ರಭು ನವಲಗುಂದಮಠ, ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ರಂಗ ಕಠಾರೆ, ರಾಜು ಜರ್ತಾರಘರ, ಜಿಲ್ಲಾ ಉಪಾಧ್ಯಕ್ಷ ಜಗದೀಶ ಬುಳ್ಳಾನವರ, ಹು-ಧಾ ಪೂರ್ವ ಕ್ಷೇತ್ರದ ಮಾಧ್ಯಮ ವಕ್ತಾರ ಲಕ್ಶ್ಮೀಕಾಂತ ಘೋಡಕೆ, ಗುರು ಬನ್ನಿಕೊಪ್ಪ, ಜಿಲ್ಲಾ ಮಾಧ್ಯಮ ವಕ್ತಾರ ರಾಜು ಕೋರ್ಯಾಣಮಠ, ಗಜು ಜಡಿ, ಮಂಜುನಾಥ್ ಚಿಂತಗಿಂಜಲ್, ಗೋಪಾಲ್ ಕಲ್ಲೂರ್, ನೀಲಕಂಠ ತಡಸದಮಠ, ಕಿರಣ್ ಲದವ, ರಂಗಸ್ವಾಮಿ ಬಳ್ಳಾರಿ, ನರಸಯ್ಯ ಬಿಜವಾಡ, ಮಿಥುನ್ ಚವ್ಹಾಣ, ಸಂಗಮ್ ಹಂಜಿ, ಮಹೇಶ್ ತಪೇಲಾ, ಮಾರುತಿ ಸೊಣ್ಣದ, ಮೂರುಸಾವೀರಪ್ಪ ಚೆನ್ನಿ, ಜಗದೀಶ್ ಕಂಬಳಿ, ಗೋವಿಂದ್ ಬೇದರೆ, ಗುರುನಾಥ ಹೇಮಕರ, ವಿನಾಯಕ್ ಲಕ್ಕುಂಡಿ, ಪ್ರಕಾಶ್ ಬಸವ,ಲಕ್ಷ್ಮಣ ಕೋರೆ, ಪ್ರಿಯಾಂಕಾ ಬುದ್ದಿ, ಶ್ರೀನಿವಾಸ್ ತಾತುಸ್ಕರ, ಅಮೃತ್ ಪವಾರ್ ಇನ್ನು ಅನೇಕ ಬಿಜೆಪಿ ಕಾರ್ಯಕರ್ತರು ಪಾಲ್ಗೊಂಡಿದ್ದರು.


ಹಂಚಿಕೊಳ್ಳಿ

Leave a Reply

Your email address will not be published. Required fields are marked *