ಜೆ.ಎಸ್.ಎಸ್ ನೂತನ ಆಡಳಿತ ಮಂಡಳಿ ೫೪ನೇ ವರ್ಷಕ್ಕೆ ಪಾದಾರ್ಪಣೆ

ಹಂಚಿಕೊಳ್ಳಿ

ಗುಣಮಟ್ಟದ ಹಾಗೂ ನೈತಿಕ ಶಿಕ್ಷಣಕ್ಕೆ ಧಾರವಾಡ ಜನತಾ ಶಿಕ್ಷಣ ಸಮಿತಿ(ಜೆ.ಎಸ್.ಎಸ್) ಮುಕುಟಪ್ರಾಯ

ಧಾರವಾಡ
ಕನ್ನಡ ನಾಡಿನಲ್ಲಿ ಧಾರವಾಡವು ‘ವಿದ್ಯಾಕಾಶಿ’ ಎಂದೇ ಹೆಸರಾಗಿದೆ. ಈ ನಗರದ ಹೃದಯ ಭಾಗದಲ್ಲಿ ಸುಂದರವಾದ ಪರಿಸರದ ಮಡಿಲಲ್ಲಿ ಕಂಗೊಳಿಸುತ್ತಿರುವುದೇ ಜನತಾ ಶಿಕ್ಷಣ ಸಮಿತಿ.

ಶಿಕ್ಷಕರು, ಗಾಂಧಿವಾದಿಗಳು ಮತ್ತು ಸ್ವಾತಂತ್ರ‍್ಯ ಹೋರಾಟಗಾರರು ಆಗಿದ್ದ ದಿವಂಗತ ಹುಕ್ಕೇರಿಕರ ರಾಮರಾಯರು ಈ ಸಂಸ್ಥೆಯನ್ನು ೧೯೪೪ರಲ್ಲಿ ಸ್ಥಾಪಿಸಿದರು. ಕನ್ನಡದ ಕಣ್ವರಾದ ಬಿ.ಎಂ. ಶ್ರೀಕಂಠಯ್ಯನವರು ಸಂಸ್ಥಾಪಕ ಪ್ರಾಚಾರ್ಯರಾಗಿದ್ದರು. ೭೦ರ ದಶಕದಲ್ಲಿ ಈ ಶಿಕ್ಷಣ ಸಂಸ್ಥೆಯು ಆರ್ಥಿಕ ಸಂಕಷ್ಟದಿಂದ ಬಳಲುತ್ತಿರುವಾಗ ಇದರ ಶ್ರೇಯೋಭಿವೃದ್ಧಿಗಾಗಿ ಶ್ರೀಕ್ಷೇತ್ರ ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀ ಪಾದಂಗಳವರ ಪ್ರೇರಣೆಯಿಂದ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ೧೯೭೩ ಅಕ್ಟೋಬರ್ ೧೮ರಂದು ಈ ಸಂಸ್ಥೆಯ ಜವಾಬ್ದಾರಿ ವಹಿಸಿಕೊಂಡರು. ಆ ಸಂದರ್ಭದಲ್ಲಿ ಕೀರ್ತಿಶೇಷ ಡಾ. ನ. ವಜ್ರಕುಮಾರರು ಕಾರ್ಯದರ್ಶಿಗಳಾಗಿ ಈ ಸಂಸ್ಥೆಯನ್ನು ಉನ್ನತಮಟ್ಟಕ್ಕೆ ಬೆಳೆಸಿದರು.

ಪ್ರಾರಂಭದಲ್ಲಿ ಕೇವಲ ೨೮೦ ರಷ್ಟಿದ್ದ ವಿದ್ಯಾರ್ಥಿಗಳ ಸಂಖ್ಯೆ ಇಂದು ಧಾರವಾಡ ಮತ್ತು ಹುಬ್ಬಳ್ಳಿಯ ನಾಲ್ಕು ಕ್ಯಾಂಪಸ್‌ಗಳ ೨೫ ಅಂಗ ಸಂಸ್ಥೆಗಳಲ್ಲಿ ಕೆ.ಜಿಯಿಂದ ಪಿ.ಜಿ ಪಿಹೆಚ್.ಡಿ ವರೆಗೂ ೨೨ ಸಾವಿರ ದಾಟಿರುವುದು ಹೆಮ್ಮೆಯ ಸಂಗತಿಯಾಗಿದೆ. ೧೫೦೦ಕ್ಕೂ ಹೆಚ್ಚು ಭೋದಕ ಹಾಗೂ ಬೋಧಕೇತರ ಸಿಬ್ಬಂದಿಗಳು ಇಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಲ್ಲದೇ ಇದುವರೆಗೂ ಈ ಸಂಸ್ಥೆಯಲ್ಲಿ ಸಿಬ್ಬಂದಿಗಳಿಂದಾಗಲಿ, ವಿದ್ಯಾರ್ಥಿಗಳಿಂದಾಗಲಿ ಹಾಗೂ ಸಾರ್ವಜನಿಕರಿಂದಾಗಲಿ ಯಾವುದೇ ರೀತಿಯ ಪ್ರತಿಭಟನೆ ಹಾಗೂ ಮುಷ್ಕರಗಳು ನಡೆಯದೇ ಇರುವುದು ಇಲ್ಲಿನ ಗುಣಮಟ್ಟದ ಆಡಳಿತಕ್ಕೆ ಸಾಕ್ಷಿಯಾಗಿದೆ.

ಸಾಹಿತ್ಯ, ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳಿಗೆ ಜೆ.ಎಸ್.ಎಸ್ ಸಂಸ್ಥೆಯು ನಿರಂತರವಾಗಿ ಪ್ರೇರಣೆ, ಪ್ರೋತ್ಸಾಹ ಹಾಗೂ ಆರ್ಥಿಕ ಸೌಲಭ್ಯಗಳನ್ನ ನೀಡುತ್ತಾ ಬರುತ್ತಿದೆ. ಅಂತೆಯೇ ಅನೇಕ ಕ್ರೀಡಾಪಟುಗಳು ರಾಜ್ಯ, ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಸಾಧನೆಯನ್ನು ಮೆರೆದಿದ್ದಾರೆ. ವಿಶ್ವವಿದ್ಯಾನಿಲಯದ ರ‍್ಯಾಂಕ್‌ಗಳು ಕೂಡ ಪ್ರತಿವರ್ಷ ಈ ಸಂಸ್ಥೆಗೆ ಬರುತ್ತಿರುವುದು ಇಲ್ಲಿನ ಗುಣಮಟ್ಟದ ಶಿಕ್ಷಣವನ್ನು ಪ್ರತಿಬಿಂಬಿಸುತ್ತಿದೆ.

ಈ ಸಂಸ್ಥೆಯಲ್ಲಿ ಅಧ್ಯಯನ ಮಾಡಿದ ಲಕ್ಷಾಂತರ ವಿದ್ಯಾರ್ಥಿಗಳು ತಮ್ಮ ಬದುಕನ್ನು ಕಟ್ಟಿಕೊಂಡು ಇಂದು ರಾಜ್ಯ ಹಾಗೂ ರಾಷ್ಟ್ರದ ಬೇರೆ ಬೇರೆ ರಂಗಗಳಲ್ಲಿ ಉದ್ಯೋಗಿಗಳಾಗಿ ತಮ್ಮ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಜನತಾ ಶಿಕ್ಷಣ ಸಮಿತಿಯು ತನ್ನ ಶೈಕ್ಷಣಿಕ ಸಾಧನೆಗಳೊಂದಿಗೆ ಹತ್ತು ಹಲವು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ಬಂದಿದೆ. ಅದರಲ್ಲಿ ಮುಖ್ಯವಾಗಿ ಉದ್ಯೋಗ ಮೇಳ, ರಕ್ತದಾನ ಶಿಬಿರ, ಶಿಷ್ಯವೇತನ, ಬಡವರಿಗೆ ಮನೆಗಳನ್ನು ಕಟ್ಟಿಕೊಡುವುದು, ಸಾರ್ವಜನಿಕ ಶೌಚಾಲಯಗಳ ನಿರ್ಮಾಣ, ವನಮಹೋತ್ಸವ ಹಾಗೂ ಯೋಗ ತರಬೇತಿ, ಮಹಿಳೆಯರಿಗಾಗಿ ಉಚಿತ ಉದ್ಯೋಗಾಧಾರಿತ ತರಬೇತಿಗಳನ್ನು ಆಯೋಜಿಸುತ್ತ ಬಂದಿದೆ.

ಪೂಜ್ಯ ಖಾವಂದರರು ಜೆ.ಎಸ್.ಎಸ್ ನ ಜೊತೆಗೆ ಹಲವಾರು ಸಂಸ್ಥೆಗಳನ್ನು ಧಾರವಾಡದಲ್ಲಿ ಕಟ್ಟಿದರು. ಎಸ್.ಡಿ.ಎಂ ಇಂಜಿನಿಯರಿಂಗ್, ಡೆಂಟಲ್, ವೈದ್ಯಕೀಯ, ನರ್ಸಿಂಗ್, ಫಿಜಿಯೋಥೆರಪಿ, ಐಟಿಐ, ರುಡ್‌ಸೆಟ್ ಮತ್ತು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಗಳನ್ನು ಸ್ಥಾಪಿಸಿ ಧಾರವಾಡವನ್ನು ರಾಜ್ಯದ ನಕಾಶೆಯಲ್ಲಿ ಕಂಗೊಳಿಸುವಂತೆ ಮಾಡಿದ್ದಾರೆ. ಎಲ್ಲ ಕಾರಣಗಳಿಂದ ಪೂಜ್ಯ ಖಾವಂದರರಿಗೆ ‘ಧರ್ಮಸ್ಥಳ ಜನ್ಮ ಭೂಮಿಯಾದರೆ, ಧಾರವಾಡವು ಅವರ ಕರ್ಮ ಭೂಮಿ’ ಎಂದೇ ಹೇಳಲಾಗಿದೆ.

ದಿನಾಂಕ ೧೮-೧೦-೨೦೨೬ ರ ಸುದಿನದಂದು ಜನತಾ ಶಿಕ್ಷಣ ಸಮಿತಿಯನ್ನು ಪೂಜ್ಯ ಖಾವಂದರು ವಹಿಸಿಕೊಂಡು ೫೪ನೇ ವರ್ಷಕ್ಕೆ ಪಾದರ್ಪಣೆ ಮಾಡಲಿದೆ. ಈ ನಿಮಿತ್ತ ಜೆ.ಎಸ್.ಎಸ್ ಕ್ಯಾಂಪಸ್ ನ ಸನ್ನಿಧಿ ಕಲಾಕ್ಷೇತ್ರದಲ್ಲಿ ೧೮.೧೦.೨೦೨೬ ರಂದು ಸಂಜೆ ೪.೩೦ಕ್ಕೆ ಆಡಳಿತ ಮಂಡಳಿಯ ೫೪ನೇ ವರ್ಷದ ಪಾದಾರ್ಪಣೆ ಕಾರ್ಯಕ್ರಮ ಆಯೋಜಿಸಲಾಗಿದೆ.

• ಮಹಾವೀರ ಉಪಾದ್ಯೆ
ಪ್ರಾಚಾರ್ಯರು
ಜೆ.ಎಸ್.ಎಸ್ ಐ.ಟಿ.ಐ ಕಾಲೇಜು
ವಿದ್ಯಾಗಿರಿ, ಧಾರವಾಡ


ಹಂಚಿಕೊಳ್ಳಿ

Leave a Reply

Your email address will not be published. Required fields are marked *