‘ಧಾರವಾಡದ ಮರೆಯಲಾಗದ ಮಹನೀಯರು’ ಕೃತಿಗಳ ಲೋಕಾರ್ಪಣೆ

ಹಂಚಿಕೊಳ್ಳಿ

ಧಾರವಾಡ
ಧಾರವಾಡದ ನೆಲ ನಮಗೆ ಅನೇಕ ಮಹನೀಯರ ಸಾಂಸ್ಕೃತಿಕ, ಸಾರ್ಥಕ ಬದುಕು ಒಂದು ಸುಂದರ ಚಿತ್ರಣವನ್ನು ಕಟ್ಟಿಕೊಟ್ಟಿದೆ. ಲೇಖಕರು, ಸಂಗೀತ ಕಲಾವಿದರು, ಚಿತ್ರ ಕಲಾವಿದರು, ಪ್ರಕಾಶಕರು, ವಿದ್ವಾಂಸರು, ಶಿಕ್ಷಣ ತಜ್ಞರು ಹೀಗೆ ಹತ್ತು ಹಲವು ಮಹನೀಯರು ತಮ್ಮ ತಮ್ಮ ಅಪಾರ ಸಾಧನೆಗಳ ಮೂಲಕ ಧಾರವಾಡವನ್ನು ವಿದ್ಯಾಕಾಶಿಯಾಗಿ ಮಾಡುವುದರ ಜತೆಯಲ್ಲಿ ಅಳಿಸಲಾಗದ ಹೆದ್ದಾರಿಯನ್ನು ನಿರ್ಮಿಸಿ ಕೊಟ್ಟಿದ್ದಾರೆ. ಅವರೆಲ್ಲರ ಶ್ರಮ ದಾಖಲಾಗಬೇಕು ಮತ್ತು ಮುಂದಿನ ಪೀಳಿಗೆಗೆ ಇದು ಗೊತ್ತಾಗುವಂತಿರಬೇಕು. ಈ ದಿಶೆಯಲ್ಲಿ ‘ಧಾರವಾಡದ ಮರೆಯಲಾಗದ ಮಹನೀಯರು’ ಮಾಲಿಕೆಯನ್ನು ಪ್ರಾರಂಭಿಸುತ್ತಿದ್ದೇವೆ’ ಎಂದು ಪ್ರಕಾಶಕ, ಲೇಖಕ, ನಿರ್ದೇಶಕ ಹರ್ಷ ಡಂಬಳ ಹೇಳಿದರು.

ಧಾರವಾಡದ ಬನಶಂಕರಿ ಕಲಾ ಮಂಟಪದಲ್ಲಿ ನಡೆದ ಮರೆಯಲಾಗದ ಮಹನೀಯರು ಮಾಲಿಕೆಯಲ್ಲಿ ಡಾ. ಮಂದಾಕಿನಿ ಪುರೋಹಿತ ಬರೆದ ‘ಕವಿ ನರಸಿಂಹ ಪರಾಂಜಪೆ’, ವಿದ್ಯಾ ಶಿರಹಟ್ಟಿ ಬರೆದ ‘ಶ್ರೀ ಸುಧೀಂದ್ರ ಹಂಚಿನಮನಿಯವರು’ ಮತ್ತು ವಿನುತಾ ಹಂಚಿನಮನಿ ಬರೆದ ‘ನನ್ನವರು ಕಲ್ಪತರು’ ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ಕವಿ ನರಸಿಂಹ ಪರಾಂಜಪೆ’ ಕೃತಿ ಲೋಕಾರ್ಪಣೆ ಮಾಡಿದ ಡಾ. ಹ ವೆಂ. ಕಾಖಂಡಿಕಿ ಮಾತನಾಡುತ್ತಾ “ನರಸಿಂಹ ಪರಾಂಜಪೆ ಕವಿ, ಎಂಜನೀಯರ್, ಸಂಘಟಕ, ಸಮಾಜಮುಖಿ ಜೀವಿಯಾಗಿ ಪ್ರಸಿದ್ಧರು. ‘ಅನ್ವೇಷಣ ಕೂಟ’ ವನ್ನು ಸುಮಾರು ಇಪ್ಪತ್ತೈದು ವರ್ಷಗಳ ಕಾಲ ಒಂದು ತಿಂಗಳವೂ ತಪ್ಪದೆ, ಅತ್ಯುತ್ತಮ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ನಡೆಸಿ ದಾಖಲೆಯನ್ನೇ ಮಾಡಿದ್ದಾರೆ. ಕವಿ ಹೃದಯದ ಪರಾಂಜಪೆ ನೂರ್ಕಾಲ ಸುಖವಾಗಿ ಬಾಳಲಿ’ ಎಂದು ಹೇಳಿದರು.

ವಿಜಯ ನಾಡಗೀರ ‘ಶ್ರೀ ಸುಧೀಂದ್ರ ಹಂಚಿನಮನಿಯವರು’ ಮತ್ತು ನರಸಿಂಹ ಶಿರಹಟ್ಟಿ ‘ನನ್ನವರು ಕಲ್ಪತರು’ ಕೃತಿಗಳನ್ನು ಬಿಡುಗಡೆ ಮಾಡಿದರು. ಇಬ್ಬರೂ ಮಾತನಾಡುತ್ತಾ ಸುಧೀಂದ್ರ ಹಂಚಿನಮನಿಯವರ ಶಿಸ್ತು, ಸಂಯಮ, ರಂಗಭೂಮಿಯಲ್ಲಿಯ ನಟನೆ, ಪ್ರತಿಭೆ ಕುರಿತು ಮಾತನಾಡಿ, ಸುಧೀಂದ್ರ ಅವರ ಸಮಾಜಮುಖಿ ಸೇವೆಗಳ ಕುರಿತು ಮಾತನಾಡಿದರು.

ಕವಿ ನರಸಿಂಹ ಪರಾಂಜಪೆ ಮಾತನಾಡಿ, ತಮ್ಮ ಕುರಿತು ಗ್ರಂಥ ಬರೆಸಿ, ಪ್ರಕಟಿಸಿದ್ದಕ್ಕೆ ತಮ್ಮ ಕೃತಜ್ಞತೆಗಳನ್ನು ವ್ಯಕ್ತಪಡಿಸಿದರು. ಲೇಖಕಿಯರಾದ ಡಾ. ಮಂದಾಕಿನಿ ಪುರೋಹಿತ, ವಿದ್ಯಾ ಶಿರಹಟ್ಟಿ ಮತ್ತು ವಿನುತಾ ಹಂಚಿನಮನಿಯವರು ತಮ್ಮ ಅನುಭವಗಳನ್ನು ಹಂಚಿಕೊಂಡರು.

ಗಣ್ಯರಾದ ಡಾ. ವಿನಾಯಕ ನಾಯಿಕ, ಪ್ರಹ್ಲಾದ ಹಂಚಿನಮನಿ, ಅರವಿಂದ ಕುಲಕರ್ಣಿ, ಅಶೋಕ ಮೊಕಾಶಿ, ಮಾಲತಿ ಮುದಕವಿ, ಬಿ.ಕೆ. ಭಂಡಿವಾಡ, ಮೊದಲಾದ ಅನೇಕ ಗಣ್ಯರು ಉಪಸ್ಥಿತರಿದ್ದರು. ಡಾ. ಕೃಷ್ಣ ಕಟ್ಟಿ ವಂದಿಸಿದರು. ಅನಂತ ಥಿಟೆ ಕಾರ್ಯಕ್ರಮ ನಿರ್ವಹಿಸಿದರು.


ಹಂಚಿಕೊಳ್ಳಿ

Leave a Reply

Your email address will not be published. Required fields are marked *